ಬೆಂಗಳೂರು: ಸ್ವಾತಂತ್ರ್ಯದ ಅಮೃತಮಹೋತ್ಸವ ಹಿನ್ನೆಲೆ ಯಲ್ಲಿ ಚಿತ್ರೀಕರಿಸಿದ್ದ “ವಂದೇ ಮಾತರಂ’ ಮ್ಯೂಸಿಕ್ ವಿಡಿಯೋ ಆಲ್ಬಂ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆ. 15ರಂದು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದರು.
ಸಿಎಂ ಬೊಮ್ಮಾಯಿ ಈ ಮ್ಯೂಸಿಕ್ ವಿಡಿಯೋ ಆಲ್ಬಂ ಹಂಚಿಕೊಳ್ಳುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡ, “ವಂದೇ ಮಾತರಂ’ ಮ್ಯೂಸಿಕ್ ವಿಡಿಯೋ ಆಲ್ಬಂ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.
“ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕರ್ನಾಟಕದ ಪ್ರಮುಖ ಸಾಧಕರ ಈ ಪ್ರಯತ್ನ ಅತ್ಯುತ್ತಮವಾಗಿದೆ’ ಎಂದು ಮೋದಿ ಟ್ವೀಟ್‌ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇನ್ನು ವಿಜಯ ಪ್ರಕಾಶ್ ಧ್ವನಿಯಲ್ಲಿ ಮೂಡಿಬಂದಿರುವ “ವಂದೇ ಮಾತರಂ’ ಗೀತೆಯಲ್ಲಿ ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ, ಕ್ರಿಕೆಟಿಗ ವೆಂಕಟೇಶ ಪ್ರಸಾದ್, ಹಿರಿಯ ನಟ ಅನಂತನಾಗ್, ರವಿಚಂದ್ರನ್, ಸುದೀಪ್, ರಮೇಶ ಅರವಿಂದ್, ಜಗ್ಗೇಶ್, ಗಣೇಶ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಧನಂಜಯ್ ಸೇರಿದಂತೆ ಚಿತ್ರರಂಗ ಮತ್ತು ಇತರ ಅನೇಕ ಕ್ಷೇತ್ರದ ಸಾಧಕರು ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ “ವಂದೇ ಮಾತರಂ’ ಗೀತೆಗೆ ದೃಶ್ಯರೂಪ ನೀಡಿದ್ದಾರೆ.