ಕೋಲ್ಕತಾ: ಯುವಕರಲ್ಲಿ ವಿಜ್ಞಾದ ಬಗ್ಗೆ ಆಸಕ್ತಿ ಮೂಡಿಸಲು ವಿಜ್ಞಾನ ಮಾಹಿತಿಯನ್ನು ಮಾತೃಭಾಷೆಯಲ್ಲೇ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ. ಪ್ರೊಫೆಸರ್ ಸತ್ಯೇಂದ್ರನಾಥ್ ಬೋಸ್‌ರವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಮಾತನಾಡಿದ್ದು, ವಿಜ್ಞಾನವನ್ನು ಮಾತೃಭಾಷೆಯಲ್ಲಿ ಬೋಧಿಸುವಲ್ಲಿ ಬೋಸ್ ಮಹತ್ವದ ಪಾತ್ರ ವಹಿಸಿದ್ದರು. ಅವರು ಬೆಂಗಾಲಿ ವಿಜ್ಞಾನ ನಿಯತಕಾಲಿಕೆಯನ್ನು ಆರಂಭಿಸಿದ್ದರು. ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ವಿಜ್ಞಾನ ಮಾಹಿತಿಗಳನ್ನು ಅರ್ಥ ಮಾಡಿಸಲು ಮಾತೃಭಾಷೆಯಲ್ಲೇ ಮಾಹಿತಿಯನ್ನು ಒದಗಿಸಬೇಕು. ಭಾಷೆಯು ವಿಜ್ಞಾನಕ್ಕೆ ಅಡ್ಡಿಯಾಗಬಾರದು. ಆದರೆ ಭಾಷೆಯು ವಿಜ್ಞಾನವನ್ನು ಸುಲಭವಾಗಿಸಬೇಕು ಎಂದು ಮೋದಿ ಹೇಳಿದ್ದಾರೆ. ಅಲ್ಲದೆ ಜನಸಾಮಾನ್ಯರಿಗೆ ವಿಜ್ಞಾನವನ್ನು ತಿಳಿಹೇಳಲು ವಿಜ್ಞಾನಿಗಳು ಪ್ರಯತ್ನಿಸಬೇಕು. ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಫಲಿತಾಂಶದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಅತ್ಯಂತ ಅಗತ್ಯ ಎಂದು ಮೋದಿ ಹೇಳಿದ್ದಾರೆ.