ಜೈಪುರ: ಗಡಿಭಾಗಗಳಲ್ಲಿ ಅಭಿವೃದ್ಧಿ ಹಿಂದುಳಿದಿರುವುದಕ್ಕೂ ಭದ್ರತೆ ನೆಪ ಹೇಳುವುದು, ಭಾರತೀಯ ಸೇನೆಯ ಮೇಲೆ ವಿಶ್ವಾಸವಿಲ್ಲದಂತೆ ವರ್ತಿಸುವುದು ಕಾಂಗ್ರೆಸ್‌ನ ಪ್ರವೃತ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇ ಯೋಜನೆಯ ಮೊದಲ ಹಂತ “ದೆಹಲಿ-ದೌಸಾ-ಲಾಲ್ಸೊಟ್ ಮಾರ್ಗ’ವನ್ನು ರಾಜಸ್ಥಾನದಲ್ಲಿ ಉದ್ಘಾಟಿಸಿದ ಬಳಿಕ ಮಾತನಾಡಿದ ಮೋದಿ, ಗಡಿ ಭಾಗದ ಹಳ್ಳಿಗಳ ಅಭಿವೃದ್ಧಿ ನಿರ್ಲಕ್ಷಿಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಮಾತಿನ ಪ್ರಹಾರ ನಡೆಸಿದರು.
ಗಡಿ ಭಾಗಗಳಲ್ಲಿ ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನೇ ಕೈಗೊಳ್ಳಲಿಲ್ಲ. ಯಾಕೆಂದು ಪ್ರಶ್ನಿಸಿದರೆ, ಸಂಸತ್ತಿನಲ್ಲಿಯೇ ನಿಂತು, ನಾವು ನಿರ್ಮಿಸಿದ ರಸ್ತೆಗಳನ್ನು ಬಳಸಿ ಶತ್ರುಗಳು ಒಳನುಸುಳಬಹುದು ಎನ್ನುತ್ತಾರೆ!.
ಕಾಂಗ್ರೆಸ್‌ಗೆ ನಮ್ಮ ಯೋಧರ ಮೇಲೆ ನಂಬಿಕೆಯೇ ಇಲ್ಲ. ನಮ್ಮ ಯೋಧರಿಗೆ ಶತ್ರುಗಳನ್ನು ಗಡಿಯಲ್ಲೇ ಹಿಮ್ಮೆಟ್ಟಿಸಲು ಬರುತ್ತದೆ ಎಂಬುದು ತಿಳಿದಿಲ್ಲ ಎಂದು ಕಾಂಗ್ರೆಸ್ ಅನ್ನು ತರಾಟೆ ತೆಗೆದುಕೊಂಡರು. ಅಲ್ಲದೇ, ಅಭಿವೃದ್ಧಿಯಲ್ಲಿ ಹಿಂದುಳಿದಿರುವುದಕ್ಕಾಗಿ ರಾಜ್ಯ ಸರ್ಕಾರವನ್ನು ಟೀಕಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ದೂರದೃಷ್ಟಿಯ ಕೊರತೆ ಇದೆ. ಈ ಪಕ್ಷದ ಯೋಜನೆಗಳೇನಿದ್ದರೂ ಬರೀ ಪೇಪರ್ ಮೇಲೆ ಗೀಚುವುದಕ್ಕಷ್ಟೇ ಸೀಮಿತ, ಜಾರಿಯಾಗುವುದಿಲ್ಲ ಎಂದಿದ್ದಾರೆ.
ಪರಂಪರೆ ಜತೆಗೆ ಅಭಿವೃದ್ಧಿ ಹಾದಿ:
ಇದಕ್ಕೂ ಮುನ್ನ ಆರ್ಯಸಮಾಜ ಸಂಸ್ಥಾಪಕ ದಯಾನಂದ ಸರಸ್ವತಿ ಅವರ 200ನೇ ಜನ್ಮದಿನೋತ್ಸವದ ಅಂಗವಾಗಿ ವರ್ಷಪೂರ್ತಿ ನಡೆಸಲಾಗುವ ಸಮಾರಂಭ ಉದ್ಘಾಟನೆಯಲ್ಲೂ ಮೋದಿ ಭಾಗಿಯಾಗಿದ್ದರು. ಈ ವೇಳೆ ದೇಶದ ಪರಂಪರೆಗೆ ದಯಾನಂದ ಸರಸ್ವತಿ ಅವರ ಕೊಡುಗೆ ಶ್ಲಾ ಸಿದರು. ಜತೆಗೆ ದೇಶ ಇಂದು ಆಧುನಿಕತೆಗೆ ಒಗ್ಗಿಕೊಂಡಿದ್ದರೂ, ಪರಂಪರೆಗೆ ಅಂಟಿಕೊಂಡಿದೆ. ವಿರಾಸತ್(ಪರಂಪರೆ) ವಿಕಾಸ್ (ಅಭಿವೃದ್ಧಿ) ಹಾದಿಯಲ್ಲಿ ಭಾರತ ಸಾಗುತ್ತಿದೆ ಎಂದರು.