ದಾವಣಗೆರೆ: ಕೇಂದ್ರ ಸರಕಾರದ ವತಿಯಿಂದ ನೀಡಿರುವ 5 ಸಾವಿರ ಕೋಟಿ ರೂಪಾಯಿ ಹಣವನ್ನು ರಾಜ್ಯ ಸರಕಾರ ಖರ್ಚು ಮಾಡಿಲ್ಲ. ಕರ್ನಾಟಕದಲ್ಲಿ ಪರ್ಸೆಟೇಂಜ್ ಇಲ್ಲದೆ ಕೆಲಸವೇ ಆಗುವುದಿಲ್ಲ. ಸಿದ್ದರಾಮಯ್ಯ ಅಲ್ಲ, ಸೀದಾ ರುಪಯ್ಯ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ದಾವಣಗೆರೆ ಸರಕಾರಿ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ರೈತ ಬಂಧು ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಕರ್ನಾಟಕದಲ್ಲಿ ಹಾಲಿ ಮಂತ್ರಿ ಮನೆಯ ಮೇಲೆ ಐಟಿ ದಾಳಿ ನಡೆಯಿತು. ಈ ಸಂದರ್ಭದಲ್ಲಿ ಕಂತೆ, ಕಂತೆ ನೋಟು, ಡೈರಿ ಸಿಕ್ಕಿತ್ತು ಎಂದು ಇಂಧನ ಸಚಿವ ಡಿಕೆಶಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ಇಂತಹ ಸರಕಾರ ರಾಜ್ಯದಲ್ಲಿ ಒಂದು ನಿಮಿಷವೂ ಅಧಿಕಾರದಲ್ಲಿ ಇರಬಾರದು ಎಂದರು.
ಈ ಬಾರಿ ಬಿಜೆಪಿ ಸರಕಾರ, ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಮೋದಿ ಭಾಷಣದ ಕೊನೆಗೆ ಕನ್ನಡದಲ್ಲಿ ಹೇಳಿದರು.
ಶಿಕ್ಷಣಕ್ಕೆ, ಆರೋಗ್ಯ ಹಾಗೂ ರೈತರ ಕಲ್ಯಾಣಕ್ಕೆ ಕೊಟ್ಟ ಹಣವನ್ನು ರಾಜ್ಯ ಸರಕಾರ ಖರ್ಚು ಮಾಡಿಲ್ಲ. ಕೇಂದ್ರದ ಅನುದಾನದ ಬಗ್ಗೆ ರಾಜ್ಯದಲ್ಲಿ ಉದಾಸೀನ ಧೋರಣೆ ಎಂದು ಟೀಕಿಸಿದರು. ಬಿಎಸ್ ವೈಗೆ ಜನ್ಮದಿನದ ಶುಭಾಶಯ ಕೋರಿದ ಪ್ರಧಾನಿ ಮೋದಿ ಅವರು ನೇಗಿಲನ್ನು ಉಡುಗೊರೆಯಾಗಿ ನೀಡಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಪ್ರಧಾನಿ ಮೋದಿ ಅವರು ದಾವಣಗೆರೆಗೆ ಆಗಮಿಸಿದ್ದರು. ರೈತರಿಂದ ಪ್ರಧಾನಿಗೆ ಮುಷ್ಟಿ ಅಕ್ಕಿ ಸಮರ್ಪಿಸಿದರು.
ಮಹದಾಯಿ ಬಗ್ಗೆ ತುಟಿ ಬಿಚ್ಚದ ಮೋದಿ:
ರೈತರ ಸಮಾವೇಶದಲ್ಲಿ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿ ಪ್ರಧಾನಿ ಮೋದಿ ಅವರು ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ತುಟಿ ಬಿಚ್ಚಿಲ್ಲ.