ಹೊಸದಿಲ್ಲಿ : ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿ ಕೋಟಿಗಟ್ಟಲೆ ರೂಪಾಯಿ ಬ್ಯಾಂಕ್ ವಂಚನೆ ಗೈದಿರುವುದು ಮತ್ತು ಅವರು ವಿದೇಶಕ್ಕೆ ಪಲಾಯನ ಮಾಡುವ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲೇ ಗೊತ್ತಿತ್ತು. ಏಕೆಂದರೆ ಇವರು 23,000 ಕೋಟಿ ಬ್ಯಾಂಕ್ ವಂಚನೆ ಎಸಗಿರುವುದನ್ನು ಆದಾಯ ತೆರಿಗೆ ಇಲಾಖೆಯು ಇವರು ವಿದೇಶಕ್ಕೆ ಪಲಾಯನ ಮಾಡುವ ಎಂಟು ತಿಂಗಳ ಮೊದಲೇ ಸರಕಾರಕ್ಕೆ ತಿಳಿಸಿತ್ತು ಎಂದು ಕಾಂಗ್ರೆಸ್ ಹೇಳಿದೆ.
ಇಂದಿಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್‌ಜೇವಾಲಾ ಅವರು “ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಎಸಗಿರುವ ಬಹುಕೋಟಿ ಹಗರಣವನ್ನು ಆದಾಯ ತೆರಿಗೆ ಇಲಾಖೆ ಅವರು ವಿದೇಶಕ್ಕೆ ಪಲಾಯನ ಮಾಡುವ ಎಂಟು ತಿಂಗಳೇ ಮೊದಲೇ ಸರಕಾರಕ್ಕೆ ತಿಳಿಸಿತ್ತು ಮತ್ತು ಇದು ಪ್ರಧಾನಿ ಅವರಿಗೂ ವಿತ್ತ ಸಚಿವ ಅರುಣ್ ಜೇತ್ಲಿ ಅವರಿಗೂ ಗೊತ್ತಿತ್ತು’ ಎಂದು ಹೇಳಿದರು.
“ಮೋದಿ ಸರಕಾರಕ್ಕೆ ಈ ಬಹುಕೋಟಿ ವಂಚನೆ ಹಗರಣ ಸಾಕಷ್ಟು ಮೊದಲೇ ಗೊತ್ತಿದ್ದ ಹೊರತಾಗಿಯೂ ನೀರವ್ ಮತ್ತು ಮೆಹುಲ್ ಚೋಕ್ಸಿ ಅವರಿಗೆ ವಿದೇಶಕ್ಕೆ ಪಲಾಯನ ಮಾಡುವುದು ಹೇಗೆ ಸಾಧ್ಯವಾಯಿತು ?’ ಎಂದು ಸುರ್‌ಜೇವಾಲಾ ಪ್ರಶ್ನಿಸಿದರು.