ಮುಂಬಯಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟ ಸಚಿವರು ಕಳೆದ ಐದು ಹಣಕಾಸು ವರ್ಷದಲ್ಲಿ ದೇಶ-ವಿದೇಶ ಪ್ರಯಾಣಕ್ಕಾಗಿ 393 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ ಎನ್ನುವುದು ಇದೀಗ ಮಾಹಿತಿ ಹಕ್ಕಿನಡಿ ಬಹಿರಂಗವಾಗಿದೆ.
ನಗರದ ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಅವರು ಪಿಎಂಓ ಕಾರ್ಯಾಲಯಕ್ಕೆ ಅರ್ಜಿ ಹಾಕಿ ಮಾಹಿತಿ ಕೋರಿದ್ದರು. ಆ ಪ್ರಕಾರ 2014ರ ಮೇ ತಿಂಗಳಿಂದ ಈ ತನಕ ಪ್ರಧಾನಿ ಮೋದಿ ಮತ್ತು ಅವರ ಸಂಪುಟ ಸಚಿವರು ದೇಶ-ವಿದೇಶ ಪ್ರಯಾಣಕ್ಕಾಗಿ 393 ಕೋಟಿ ರೂ. ಖರ್ಚು ಮಾಡಿರುವುದಾಗಿ ತಿಳಿದು ಬಂತು.
2014ರ ಜೂನ್‌ನಿಂದ ಪ್ರಧಾನಿ ಮೋದಿ ಅವರ ವಿದೇಶ ಪ್ರಯಾಣಕ್ಕಾಗಿ ಬಾಡಿಗೆ ವಿಮಾನಗಳು, ಅವುಗಳ ನಿರ್ವಹಣಾ ವೆಚ್ಚ ಮತ್ತು ಹಾಟ್ ಲೈನ್ ಸೌಕರ್ಯಗಳಿಗೆಂದು 2,021 ಕೋಟಿ ರೂ. ಖರ್ಚಾಗಿದೆ ಎಂದು 2018ರ ಡಿಸೆಂಬರ್‌ನಲ್ಲಿ ರಾಜ್ಯಸಭೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರವಾಗಿ ತಿಳಿಸಲಾಗಿತ್ತು.
ಗಲಗಲಿ ಅವರು ಪಡೆದಿರುವ ಆರ್‌ಟಿಐ ಮಾಹಿತಿಯ ಪ್ರಕಾರ ಮೋದಿ ಅವರ ವಿದೇಶ ಪ್ರಯಾಣ ಖರ್ಚು 263 ಕೋಟಿ ರೂ. ಮತ್ತು ಅವರ ಸಂಪುಟ ಸಚಿವರ ದೇಶೀಯ ವಿಮಾನ ಪ್ರಯಾಣ ಖರ್ಚು 48 ಕೋಟಿ ರೂ. ಎಂದು ತಿಳಿದು ಬಂದಿದೆ.