ಹೊಸದಿಲ್ಲಿ : ಪಂಚ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶಗಳು ಪ್ರಕಟಗೊಂಡ ಬಳಿಕ ಇದೇ ಮೊದಲ ಬಾರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯನ್ನು ಪ್ರವೇಶಿಸಿ 15 ನಿಮಿಷಗಳ ಪ್ರಶ್ನಾವೇಳೆಯಲ್ಲಿ ಭಾಗಿಯಾದರು.
ಪ್ರಧಾನಿ ಮೋದಿ ಅವರು ಇಂದು ಮಧ್ಯಾಹ್ನ 12.10ರ ಹೊತ್ತಿಗೆ ರಾಜ್ಯಸಭೆಯನ್ನು ಪ್ರವೇಶಿಸಿದಾಗ ಟ್ರೆಜರಿ ಬೆಂಚ್‌ನ ಸದಸ್ಯರು ಎದ್ದು ನಿಂತು ಸ್ವಾಗತಿಸಿದರು. ಪ್ರತೀ ಗುರುವಾರ ರಾಜ್ಯಸಭೆಯ ಪ್ರಶ್ನಾವೇಳೆಯಲ್ಲಿ ಪ್ರಧಾನಿಗೆ ಹಾಗೂ ಅವರ ಕಾರ್ಯಾಲಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಪ್ರಧಾನಿ ಮೋದಿ ಅವರು ರಾಜ್ಯಸಭೆಯನ್ನು ಪ್ರವೇಶಿಸುತ್ತಿದ್ದಂತೆಯೇ ಕೆಲವು ಕಾಂಗ್ರೆಸ್ ಸದಸ್ಯರು ಲೇವಡಿ ಮಾಡುವ ರೀತಿಯಲ್ಲಿ “ದೇಖೋ ದೇಖೋ ಕೌನ್ ಆಯಾ ಹೈ’ (ನೋಡಿ, ನೋಡಿ, ಯಾರು ಬರ್ತಾ ಇದ್ದಾರೆ) ಎಂದು ಕೂಗಿದರು.
ಆಗ ಕೆಲವು ಬಿಜೆಪಿ ಸದಸ್ಯರು “ಹಿಂದುಸ್ಥಾನ್ ಕಾ ಶೇರ್ ಆಯಾ ಹೈ’ ಎಂದು ಕಾಂಗ್ರೆಸಿಗರಿಗೆ ಕೇಳುವಂತೆ ಗಟ್ಟಿಯಾಗಿ ಹೇಳಿದರು.
ಮೋದಿ ಅವರು ರಾಜ್ಯಸಭೆಯಲ್ಲಿ 15 ನಿಮಿಷಗಳ ಪ್ರಶ್ನಾವೇಳೆಯನ್ನು ಪೂರ್ತಿಯಾಗಿ ಕಳೆದರು. ಆಗ ಕೆಲವು ಸದಸ್ಯರು ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಬಿದ್ದಿರುವ ಹುದ್ದೆಗಳ ಬಗ್ಗೆ ಮತ್ತು ದೈಹಿಕವಾಗಿ ನಡೆದಿರುವ ಕೆಲವೊಂದು ಶೌಚ ಪ್ರಕರಣಗಳ ಬಗ್ಗೆ ಪ್ರಶ್ನೆ ಎತ್ತಿದರು.