ಅಫಜಲಪುರ: ರಾಜ್ಯದಲ್ಲಿ ಶೇ.40 ಕಮಿಷನ್ ಸರ್ಕಾರವಿದೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಇಲ್ಲದಂತಾಗಿದೆ. ಹೀಗಾಗಿ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕಾರ್ಯವನ್ನು ವಿರೋಧ ಪಕ್ಷವಾಗಿ ಕಾಂಗ್ರೆಸ್ ಜವಾಬ್ದಾರಿಯಿಂದ ಮಾಡುತ್ತಿದೆ. ಆದರೆ ಇದನ್ನು ಬಿಜೆಪಿಗರಿಗೆ ಸಹಿಸಲಾಗುತ್ತಿಲ್ಲ ಎಂದು ಡಾ|ಸಂಜುಕುಮಾರ ಎಂ.ವೈ. ಪಾಟೀಲ ಹೇಳಿದರು.
ಮಡಿಕೇರಿಯಲ್ಲಿ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಹೋಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕೆಲವು ಕಿಡಿಗೇಡಿಗಳು ಮೊಟ್ಟೆ ಎಸೆದು ಹಲ್ಲೆಗೆ ಯತ್ನಿಸಿದ್ದನ್ನು ಖಂಡಿಸಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿ ವರೆಗೆ ಪ್ರತಿಭಟನೆ ನಡೆಸಿ, ಗ್ರೆಡ್ 2 ತಹಶೀಲ್ದಾರ್ ಪೃಥ್ವಿರಾಜ್ ಪಾಟೀಲ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಬಿಜೆಪಿಯವರು ಜನರ ಮತ ಪಡೆದು ಅಧಿಕಾರಕ್ಕೆ ಬಂದವರಲ್ಲ. ಶಾಸಕರನ್ನು ಖರೀದಿಸಿ ಹಿಂಬಾಗಿಲಿನಿಂದ ಸರ್ಕಾರ ರಚಿಸಿದ್ದಾರೆ. ಸಿಕ್ಕಿರುವ ಅವಕಾಶವನ್ನು ಜನಸೇವೆಗಾಗಿ ಬಳಕೆ ಮಾಡದೇ ಕಮಿಷನ್ ದಂಧೆ, ಭ್ರಷ್ಟಾಚಾರ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ವಿರೋಧಿಸುವವರ ಮೇಲೆ ಇಂತಹ ಹಲ್ಲೆಗಳನ್ನು ಮಾಡಿಸುತ್ತಿದ್ದಾರೆ. ಅಲ್ಲದೇ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಗೆಡುವುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಮೇಲೆ ಹಲ್ಲೆಗೆ ಮುಂದಾದ ಗೂಂಡಾಗಳನ್ನು ಬಂಧಿಸಬೇಕು. ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಸಿದ್ಧಾರ್ಥ ಬಸರಿಗಿಡ, ಪ್ರಕಾಶ ಜಮಾದಾರ, ಸಿದ್ಧು ಶಿರಸಗಿ, ರಮೇಶ ಪೂಜಾರಿ, ಗೌತಮ ಸಕ್ಕರಗಿ, ಶರಣು ಕುಂಬಾರ, ಅಂಬರೀಷ ಬುರಲಿ ಮಾತನಾಡಿ, ಚುನಾವಣೆಗಳು ಹತ್ತಿರ ಬಂದಾಗ ಇಂತಹ ಗಲಭೆಗಳನ್ನು ಎಬ್ಬಿಸಿ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಜ್ಞಾನೇಶ್ವರಿ ಪಾಟೀಲ, ಬಡದಾಳ ಗ್ರಾ.ಪಂ ಅಧ್ಯಕ್ಷ ಅಮೃತ ಮಾತಾರಿ, ಸುರೇಶ ತಿಬಶೆಟ್ಟಿ, ಮಹೇಶ ಆಲೇಗಾಂವ್, ಮಹಿಬೂಬ್ ಪಟೇಲ್, ಭಾಗಪ್ಪ ಮಾಂಗ್, ಶ್ರೀಕಾಂತ ನಿವರಗಿ, ಪ್ರವೀಣ ಕಲ್ಲೂರ, ಮಹೇಶ ಹೊಸಮನಿ, ಸಚಿನ್ ಲಿಂಗಶೆಟ್ಟಿ, ವಿಠ್ಠಲ್ ಇಸ್ಪೂರ್, ಮನೋಹರ ಬಿಲ್ಲಾಡ, ಮಹಾಂತೇಶ ಸೀತನೂರ, ದತ್ತು ಘಾಣೂರ, ಮಾಜೀದ್ ಪಟೇಲ್, ಇರ್ಫಾನ್ ಜಮಾದಾರ, ಸೈಫನ್ ಹುಂಡೇಕರ, ಬಷೀರ್ ಅಪರಾದಿ ಹಾಗೂ ಇನ್ನಿತರರು ಇದ್ದರು.