Advertisement

ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಬೇಕು ದೃಢ ಸಂಕಲ್ಪ: ಕವಿತಾ

02:49 PM Dec 15, 2018 | Team Udayavani |

ರಾಯಚೂರು: ಪ್ಲಾಸ್ಟಿಕ್‌ನಿಂದ ತಯಾರಾದ ಉತ್ಪನ್ನಗಳ ಬಳಕೆ ನಿಲ್ಲಿಸುವುದರಿಂದ ಪ್ಲಾಸ್ಟಿಕ್‌ ಮುಕ್ತ ನಗರ ನಿರ್ಮಾಣ ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ರಾಯಚೂರು ವಾಸಿಗಳು ದೃಢಸಂಕಲ್ಪ ಮಾಡಬೇಕು ಎಂದು ನಗರಸಭೆ ಸದಸ್ಯೆ ಕವಿತಾ ತಿಮ್ಮಾರೆಡ್ಡಿ ಹೇಳಿದರು.

Advertisement

ನಗರದ ಹುಂಡೇಕರ್‌ ಕಾಲೋನಿಯ ಸರ್ಕಾರಿ ಉರ್ದು ಪ್ರೌಢಶಾಲೆ ಆವರಣದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸ್ವತ್ಛ ಭಾರತ ಮಿಷನ್‌ ನಗರ ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸದಿದ್ದರೆ ತನ್ನಿಂದ ತಾನೆ ಪ್ಲಾಸ್ಟಿಕ್‌ ಉತ್ಪಾದಿಸುವ ಕಾರ್ಖಾನೆಗಳು ಮುಚ್ಚಿ ಹೋಗಲಿವೆ. ಈ ಮೂಲಕ ಪ್ಲಾಸ್ಟಿಕ್‌ ಮುಕ್ತ ನಗರ ನಿರ್ಮಿಸಲು ಸಾಧ್ಯ ಎಂದು ಹೇಳಿದರು. 

ಗ್ರೀನ್‌ ರಾಯಚೂರು ಅಧ್ಯಕ್ಷೆ ಸರಸ್ವತಿ  ಕಿಲಕಿಲೆ ಮಾತನಾಡಿ, ಪ್ಲಾಸ್ಟಿಕ್‌ ಬಳಸುವುದು ಶ್ರೀಮಂತಿಕೆ ಜೀವನ ಶೈಲಿ ಎನ್ನುವ ಭಾವನೆ ಬಹಳ ಜನರಲ್ಲಿದೆ. ಆದರೆ ಇದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಭಾರಿ ಅನಾಹುತ ಸೃಷ್ಟಿಗೆ ಕಾರಣವಾಗಲಿದೆ ಎಂದು ಎಚ್ಚರಿಸಿದರು.

ಪ್ಲಾಸ್ಟಿಕ್‌ ವಸ್ತುಗಳು ಸೇರಿ ಕಸವನ್ನು ಸುಡುವ ಪ್ರವೃತ್ತಿ ಹೆಚ್ಚಿದ್ದು ಇದನ್ನು ನಿಲ್ಲಿಸದಿದ್ದರೆ ವಿಷಕಾರಕ ವಸ್ತುಗಳು ಅನಿಲ ರೂಪದಲ್ಲಿ ನಮ್ಮ ದೇಹ ಹೊಕ್ಕು ನಾನಾ ಕಾಯಿಲೆಗಳಿಗೆ ಕಾರಣವಾಗುತ್ತಿವೆ. ಆದ್ದರಿಂದ ಪ್ರತಿಯೊಬ್ಬರು ಗಟ್ಟಿ ನಿರ್ಧಾರ ಮಾಡಿ ಪ್ಲಾಸ್ಟಿಕ್‌ ಬಳಕೆ ಮತ್ತು ಕಸ ಉತ್ಪತ್ತಿಯನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ವಿನಂತಿಸಿದರು.

Advertisement

ಗ್ರೀನ್‌ ರಾಯಚೂರು ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಮಾತನಾಡಿ, ಸಿಕ್ಕಿಂ ರಾಜ್ಯದಲ್ಲಿ ಶೇ.47ರಷ್ಟು ಅರಣ್ಯ ಪ್ರದೇಶವಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ ಕೇವಲ 0.5ರಷ್ಟು ಮಾತ್ರ ಇದೆ. ಇದರಿಂದ ಜನರಿಗೆ ಶುದ್ಧ ಗಾಳಿ ಸಿಗದ ಪರಿಸ್ಥಿತಿ ಉದ್ಭವಿಸಿದೆ ಎಂದು ಹೇಳಿದರು. ವೈಜ್ಞಾನಿಕವಾಗಿ ಒಬ್ಬ ವ್ಯಕ್ತಿಯ ಆಮ್ಲಜನಕ ಪೂರೈಕೆಗೆ ಏಳು ಗಿಡಗಳು ಬೇಕು. ಆದ್ದರಿಂದ ಹೆಚ್ಚು ಹೆಚ್ಚು ಸಸಿಗಳನ್ನು ನೆಡುವ ಮೂಲಕ ಹಸಿರು ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಪ್ರಾಚಾರ ಅಧಿಕಾರಿ ಜಿ. ತುಕಾರಾಂ ಗೌಡ, ಭಾರತ ವಿಶ್ವಗುರು ಎನಿಸಿಕೊಳ್ಳುವ ಹಂತದಲ್ಲಿದ್ದರೂ ಶೌಚಗೃಹ ಬಳಕೆ ಸಮಾಧಾನಕರವಾಗಿಲ್ಲ. ಆದ್ದರಿಂದ ಪ್ರತಿ ಕುಟುಂಬವು ಮಲ, ಮೂತ್ರ ವಿಸರ್ಜನೆಗೆ ಶೌಚಗೃಹವನ್ನೇ ಬಳಸಬೇಕು ಎಂದು ಮನವಿ ಮಾಡಿದರು.
 
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀರನಗೌಡ, ಐಸಿಡಿಎಸ್‌ ಮೇಲ್ವಿಚಾರಕಿ ಭಾರತಿ ಭಾಯಿ, ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಆರ್ಶಿಯಾ ಬೇಗಂ, ಜಾಹೀದಾ ಬೇಗಂ, ನಿಂಬವ್ವ ಎಸ್‌.ಶೆಟ್ಟರ, ಅಂಗನವಾಡಿ ಕಾರ್ಯಕರ್ತರು,
ಆಶಾ ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಸಿ.ಕೆ.ಸುರೇಶ ನಿರೂಪಿಸಿದರು. ಮುರಳೀಧರ ಕಾರಬಾರಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next