ಬಜಪೆ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ನಡೆಯುವ ಸರಕಾರಿ ಹಾಗೂ ಸರಕಾರಿ ಸ್ವಾಮ್ಯದ ವಿವಿಧ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಇನ್ನುಮುಂದೆ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಇರದು.
ಮಂಡಳಿ, ನಿಗಮ, ವಿವಿಗಳು ಹಾಗೂ ಸರಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳು ಆಯೋಜಿಸುವ ಸಭೆ, ಸಮಾರಂಭ, ಕಾರ್ಯಾಗಾರ, ಸೆಮಿನಾರ್ ಮತ್ತು ಸರಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿ ಬಳಕೆ ಹಾಗೂ ಸರಬರಾಜು ನಿಷೇಧಿಸುವ ಬಗ್ಗೆ ತಾಲೂಕು ಮಟ್ಟದ ಎಲ್ಲ ಇಲಾಖೆ ಹಾಗೂ ಜಿಲ್ಲೆಯ 230 ಗ್ರಾ.ಪಂ.ಗಳಿಗೆ ಜಿಲ್ಲಾ ಪಂಚಾಯತ್‌ನ ಜಿಲ್ಲಾ ನೆರವು ಘಟಕ ಅಧಿಸೂಚನೆ ಹೊರಡಿಸಿದೆ.
ಪ್ಲಾಸ್ಟಿಕ್ ತ್ಯಾಜ್ಯ ಮನುಷ್ಯರ ಸಹಿತ ಎಲ್ಲ ಜೀವಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆಯಲ್ಲದೆ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಜತೆಗೆ ಸರಕಾರಿ ಸಹಿತ ಎಲ್ಲ ಸಮಾರಂಭಗಳಲ್ಲಿ ಬಳಕೆಯಾಗುವ ನೀರಿನ ಪ್ರಮಾಣ ಕಡಿಮೆ, ಉಳಿಕೆಯಾಗಿ ವ್ಯರ್ಥವಾಗುವ ಬಾಟಲಿಗಳೇ ಹೆಚ್ಚು. ಇದು ಬೊಕ್ಕಸಕ್ಕೂ ದುಬಾರಿಯಾಗುತ್ತದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಸರಕಾರದ ಅಧಿಸೂಚನೆ ಉಲ್ಲೇಖ 11-03-2016 ಅಪಜೀ17ಇಪಿಸಿ 2012ರಂತೆ ಸರಕಾರದಿಂದ ಆಯೋ ಜಿಸಲ್ಪಡುವ ಅಧಿಕೃತ ಸಭೆ ಸಮಾರಂಭಗಳಲ್ಲಿ ಮತ್ತು ಸರಕಾರಿ ಕಚೇರಿಗಳಲ್ಲಿ ಒಂದು ಬಾರಿ ಬಳಸುವ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ, ಸರಬರಾಜನ್ನು ನಿಷೇಧಿಸುವ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ಪರ್ಯಾಯವಾಗಿ ಕುಡಿಯುವ ನೀರನ್ನು ಸಂದರ್ಭಾನುಸಾರ ಗಾಜು, ಸ್ಟೀಲ್, ಪೇಪರ್ ಮತ್ತಿತರ ಪ್ಲಾಸ್ಟಿಕ್ ಅಲ್ಲದ ಲೋಟಗಳಲ್ಲಿ ಸರಬರಾಜು ಮಾಡಲು ಕ್ರಮ ವಹಿಸಬೇಕು, ಸೂಕ್ತ ಸಾಮೂಹಿಕ ಕುಡಿಯುವ ನೀರು ವಿತರಣೆ ವ್ಯವಸ್ಥೆಯನ್ನು ಏರ್ಪಡಿಸಬೇಕು ಎಂದು ಅಧಿಸೂಚನೆ ಹೇಳಿದೆ.
ಗ್ರಾಮ, ತಾಲೂಕು, ಜಿ.ಪಂ. ಹಂತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ವತಿಯಿಂದ ಏರ್ಪಡಿಸಲಾಗುವ ಸಭೆ ಸಮಾ ರಂಭಗಳಲ್ಲಿ ಕುಡಿಯುವ ನೀರನ್ನು 20 ಲೀ.ಗಳ ಕ್ಯಾನ್‌ಗಳನ್ನು ಖರೀದಿಸಿ, ಲೋಟ ಗಳ ಮೂಲಕ ಒದಗಿಸುವಂತೆ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಪತ್ರದಲ್ಲಿ ಸೂಚಿಸಿದ್ದಾರೆ. ಎಲ್ಲ 230 ಗ್ರಾ.ಪಂ. ಮತ್ತು ತಾಲೂಕು ಮಟ್ಟದ ಇಲಾಖೆ ಗಳಿಗೆ ಅಧಿಸೂಚನೆ ನೀಡಿದ್ದಾರೆ.
ಬಜಪೆ ಗ್ರಾ.ಪಂ.ನಲ್ಲಿ ಈಗಾಗಲೇ ಜಾರಿ
ಬಜಪೆ ಗ್ರಾ.ಪಂ. ಸಭೆಗಳಲ್ಲಿ ಸ್ಟೀಲ್ ಜಗ್ ಮತ್ತು ಲೋಟ ಒಂದು ತಿಂಗಳ ಹಿಂದಿನಿಂದಲೇ ಬಳಕೆಯಾಗುತ್ತಿದೆ. ಮುಂದೆ ಉಳಿದ ಸಭೆಗಳಿಗೂ ಅನ್ವಯಿಸಲಿದೆ. ಒಂದು ಬಾರಿ ಬಳಸುವ ಪ್ಲಾಸ್ಟಿಕ್ ನೀರಿನ ಬಾಟಲಿ ಬಳಕೆ ನಿಷೇಧ ಮತ್ತು ಅದರಿಂದಾಗುವ ಹಾನಿಗಳ ಅರಿವು ಮೂಡಿಸುವ ಪ್ರಯತ್ನ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ನಡೆದರೆ ಇನ್ನೂ ಪರಿಣಾಮಕಾರಿಯಾಗಲಿದೆ.