ಲಕ್ಷ್ಮೇಶ್ವರ: ಪಟ್ಟಣದ ಮೂಲಕ ಹಾದು ಹೋಗಿರುವ ಗದಗ-ಬಂಕಾಪುರ ರಸ್ತೆ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟು ತಗ್ಗು ಗುಂಡಿಗಳಿಂದ ತುಂಬಿಕೊಂಡಿದೆ. ಕೂಡಲೇ ರಸ್ತೆ ದುರಸ್ತಿ ಕಾರ್ಯ ಮಾಡುವಂತೆ ಆಗ್ರಹಿಸಿ ಕರವೇ ತಾಲೂಕು ಘಟಕದಿಂದ ಭಾನುವಾರ ರಸ್ತೆ ಗುಂಡಿಗಳಲ್ಲಿ ಸಸಿ ನೆಡುವ ಮೂಲಕ ಪ್ರತಿಭಟನೆ ನಡೆಸಿದರು.
ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ ಮತ್ತು ತಾಲೂಕು ಅಧ್ಯಕ್ಷ ಲೋಕೇಶ ಸುತಾರ ಮಾತನಾಡಿ, ರಾಜ್ಯ ಹೆದ್ದಾರಿಯಲ್ಲಿ ದಿನನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಡಾಂಬರ್ ಕಿತ್ತು ರಸ್ತೆಯುದ್ದಕ್ಕೂ ಮೊಳಕಾಲುದ್ದದ ಗುಂಡಿಗಳು ಬಿದ್ದಿವೆ.
ತಗ್ಗು ಗುಂಡಿಗಳ ತುಂಬಿಕೊಂಡಿರುವ ರಸ್ತೆಯಲ್ಲಿ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಭಾರಿ ಗಾತ್ರದ ತಗ್ಗು ಗುಂಡಿಗಳು ನಿರ್ಮಾಣವಾಗಿದ್ದರೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ ತೋರುತ್ತಿದ್ದಾರೆ. ರಾಜ್ಯ ಹೆದ್ದಾರಿಯನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣ ಸೇರಿ ತಾಲೂಕಿನ ಎಲ್ಲ ರಸ್ತೆಗಳು ಹದಗೆಟ್ಟಿದ್ದು ಸಂಬಂಧಪಟ್ಟವರು ಗಮನ ಹರಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕು. ಒಂದು ತಿಂಗಳೊಳಗಾಗಿ ರಸ್ತೆ ದುರಸ್ತಿಯಾಗದಿದ್ದಲ್ಲಿ ರಸ್ತೆ ತಡೆ ನಡೆಸಿ ಎಲ್ಲ ಜನಪ್ರತಿನಿಧಿಗಳಿಗೆ ಘೇರಾವು ಹಾಕಲಾಗುವದು ಎಂದು ಎಚ್ಚರಿಸಿದರು.
ಕರವೇ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೊಂಚಿಗೇರಿಮಠ, ಪ್ರವೀಣ್ ಗಾಣಿಗೇರ, ಬಸವರಾಜ ಚಕ್ರಸಾಲಿ, ಹರೀಶ ಕಟ್ಟಿಮನಿ, ಮುತ್ತು ಕರಜೇಕ್ಕನವರ್, ಮಂಜು ಮುಳುಗುಂದ, ಅರುಣ ಮೆಕ್ಕಿ, ಪ್ರವೀಣ್ ಗೌರಿ, ಕಿರಣ ಬೇಂದ್ರೆ, ಬಸನಗೌಡ ಮುದಿಗೌಡ್ರ, ಅಣ್ಣಿಗೇರಿ ಕುಮಾರ್, ಈರಣ್ಣ ಸೇರಿದಂತೆ ಕಾರ್ಯಕರ್ತರು ಇದ್ದರು.