ಈಶ್ವರಮಂಗಲ: ಇಂದು ಭತ್ತ ಕೃಷಿದ ಮಾಡುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ವಿವಿಧ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಆರೋಗ್ಯ ವೃದ್ಧಿಯಾಗುವುದರ ಜತೆಯಲ್ಲಿ ಆರ್ಥಿಕವಾಗಿ ಸ್ವಾಲಂಬಿಯಾಗಬಹುದು ಎಂದು ಮೇನಾಲ ಕ್ಲಸ್ಟರ್‌ನ ಸಿಆರ್‌ಪಿ ಜಯಂತಿ ಹೇಳಿದರು.
ನೆಟ್ಟಣಿಗೆಮುಟ್ನೂರು ಗ್ರಾಮದ ಕರ್ನೂರು ಸಮೀಪದ ಹಿತ್ಲುಮೂಲೆ ಪ್ರಗತಿ ಪರ ಕೃಷಿಕ ಸತೀಶ್ ರೈ ಅವರ ಗದ್ದೆಯಲ್ಲಿ ನೆಟ್ಟಣಿಗೆಮುಟ್ನೂರು ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಭತ್ತ ನಾಟಿ, ಕೆಸರಿನಲ್ಲಿ ಆಟ ಮತ್ತು ಸಾಧಕರಿಗೆ ಸಮ್ಮಾನಿಸಿ ಮಾತನಾಡಿದರು.
ಮಕ್ಕಳು ಕೃಷಿ ಚಟುವಟಿಕೆಗೆ ಭಾಗಿಯಾಗಲು ಇಂತಹ ಕಾರ್ಯಕ್ರಮ ಅನುಕೂಲವಾಗಿದೆ. ನೇಜಿ ನಾಟಿ ಕಾರ್ಯಕ್ರಮದಲ್ಲಿ ಮಕ್ಕಳು ತೊಡಗುವುದರಿಂದ ಮುಂದಿನ ಪೀಳಿಗೆಯ ವರಿಗೆ ಭತ್ತ ಕೃಷಿಯ ಬಗ್ಗೆ ತಿಳಿವಳಿಕೆ ಮಾಡುವುದು. ಸತೀಶ್ ರೈ ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿ ಉಳಿದ ಕೃಷಿಕರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ರೈತ ಹಿತ್ಲುಮೂಲೆ ಸತೀಶ್ ರೈ ಮಾತನಾಡಿ, ಮಕ್ಕಳಿಗೆ ಕೃಷಿಯ ಬಗ್ಗೆ ತಿಳಿಸುವ ಮಹದಾಸೆ ನನ್ನದು. ಮಕ್ಕಳು ಗದ್ದೆಯಲ್ಲಿ ಕುಣಿದು, ನಾಟಿ ಮಾಡಿದಾಗ ಅವರಿಗೆ ಭತ್ತ ಕೃಷಿಯ ಬಗ್ಗೆ ತಿಳಿಯುತ್ತದೆ ಎಂಬ ಉದ್ದೇಶದಿಂದ ನಾಲ್ಕು ವರ್ಷಗಳಿಂದ ಕಾರ್ಯಕ್ರಮ ನಡೆಸುತ್ತಿದ್ದು, ಸಾರ್ಥಕತೆ ಪಡೆದಿದ್ದೇನೆ ಎಂದು ಹೇಳಿದರು.
ಕೃಷಿಯೇ ಜೀನವ
ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕೃಷಿ
ಚಟುವಟಿಕೆಯನ್ನು ಕಾಣುತ್ತಿದ್ದೇವೆ. ಯುವಕರು ಉದ್ಯೋಗಕ್ಕಾಗಿ ನಗರ ಪ್ರದೇಶದ ಕಡೆಗೆ ಒಲವು ತೋರಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶ ಬೆಳವಣಿಗೆ ಕುಂಠಿತ ಗೊಳ್ಳಲು ಕಾರಣವಾಗಿದೆ. ನಮ್ಮ ಗ್ರಾಮದಲ್ಲಿ ಹಲವು ಕೃಷಿಕರು ಸಾಧನೆ ಮಾಡಿ ಕೃಷಿಯಲ್ಲಿ ಜೀವನ ಸಾಗಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅಂತಹ ಕೃಷಿಕರ ಮಾರ್ಗದರ್ಶನ ಪಡೆದು ಯುವಜನತೆ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.