ಬಾಗಲಕೋಟೆ: ಆರ್ಯವೈಶ್ಯ ಸಮುದಾಯದ ಅಭಿವೃದ್ಧಿಗೆ ನೇರ ಹಾಗೂ ಅರಿವು ಸಾಲ ಯೋಜನೆಗಳ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳುವಂತೆ ರಾಜ್ಯ ಆರ್ಯವೈಶ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣಕುಮಾರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮ ಸ್ಥಾಪನೆಯಾದ ಮೇಲೆ ಆರ್ಯ ವೈಶ್ಯ ಜನಾಂಗದ ಬಡವರಿಗೆ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನೇರ ಸಾಲ ಯೋಜನೆಯಡಿ ಶೇ. 4ರ ಬಡ್ಡಿದರದಲ್ಲಿ 20 ಸಾವಿರ ಸಹಾಯಧನ, 80 ಸಾವಿರ ಸಾಲದ ಹಣ ಸೇರಿ ಒಟ್ಟು 1 ಲಕ್ಷ ರೂ. ಹಾಗೂ ಬಡ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಶೇ.2ರ ಬಡ್ಡಿದರದಲ್ಲಿ ಅರಿವು ಸಾಲ ಯೋಜನೆಯಡಿ ಸೌಲಭ್ಯ
ನೀಡಲಾಗುತ್ತಿದೆ ಎಂದು ತಿಳಿಸಿದರು.
2019-20ನೇ ಸಾಲಿನಲ್ಲಿ ನೇರ ಸಾಲ ಯೋಜನೆಯಡಿ ತಲಾ 1 ಲಕ್ಷ ರೂ.ಗಳಂತೆ ಒಟ್ಟು 23 ಜನರಿಗೆ ಹಾಗೂ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಇಬ್ಬರು ಫಲಾನುಭವಿಗಳಿಗೆ ಸೌಲಭ್ಯದ ಮಂಜೂರಾತಿ ಪ್ರಮಾಣ ಪತ್ರವನ್ನು ವಿತರಿಸಲಾಗಿದ್ದು, ಮಂಜೂರಾತಿ ಪತ್ರ ಪಡೆದ ವಾರದಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಸೌಲಭ್ಯಗಳನ್ನು ಸಮರ್ಪಕವಾಗಿ ವ್ಯಾಪಾರ ಚಟುವಟಿಕೆಗಳಿಗೆ ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು. ಅದೇ ರೀತಿ ನಿಗಮಕ್ಕೆ ಸಾಲ ಮರುಪಾವತಿಸಬೇಕು ಎಂದರು.
ಮುಂದಿನ ಆರ್ಥಿಕ ವರ್ಷದಿಂದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಆರ್ಯವೈಶ್ಯ ಸಮಾಜದವರ ಕೃಷಿ ಕಾರ್ಯ ಬೆಂಬಲಿಸಲು ಗಂಗಾ ಕಲ್ಯಾಣ ಯೋಜನೆಯಡಿ ನೆರವು ನೀಡುವ ಉದ್ದೇಶ ಹೊಂದಲಾಗಿದೆ. ಸಣ್ಣ ಪುಟ್ಟ ತಿಂಡಿ ತಿನಿಸು ತಯಾರಿಸುವ ವೃತ್ತಿಯಲ್ಲಿ ತೊಡಗಿರುವವರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಫುಡ್ ಟ್ರಕ್ ಯೋಜನೆ ಜಾರಿಗೆ ತಂದು 100 ಫುಡ್ ಟ್ರಕ್‌ಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನೇರ ಸಾಲ ಮತ್ತು ಅರಿವು ಶೈಕ್ಷಣಿಕ ಸಾಲ ಯೋಜನೆಯ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಿಸಿದರು. ಡಿ.ದೇವರಾಜ ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕ ಎಂ.ಜಿ. ಬಿರಾದಾರ, ಸಮುದಾಯದ ಮುಖಂಡರಾದ ಸತ್ಯನಾರಾಯಣ ಹೇಮಾದ್ರಿ, ವೆಂಕಟೇಶ ಹಂದ್ರಾಳ, ವಕೀಲ ಕೋರಾ ಮುಂತಾದವರು ಉಪಸ್ಥಿತರಿದ್ದರು.