Advertisement

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

06:18 PM Nov 17, 2024 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ಪಡಿತರ ಚೀಟಿ ಪರಿಷ್ಕರಣೆಯಲ್ಲಿ ತೊಡಗಿದ್ದು, ಜಿಎಸ್​ಟಿ, ಆದಾಯ ತೆರಿಗೆ ಪಾವತಿ ಹಾಗೂ ಸರ್ಕಾರಿ ಅಧಿಕಾರಿಗಳಲ್ಲಿ ಹೊಂದಿರುವ ಬಿಪಿಎಲ್​ ಕಾರ್ಡ್​ಗಳ ರದ್ದುಗೊಳಿಸಲು ಮುಂದಾಗಿದೆ.

Advertisement

ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಕೇಂದ್ರ ಸಚಿವರಾದ ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ ಸೇರಿ ಹಲವು ಬಿಜೆಪಿ ನಾಯಕರು ಕೆಲವು ಬಡವರ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸಬಾರದು ಎಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ ಶಿವಮೊಗ್ಗ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಮಾತ್ರ ಸರ್ಕಾರದ ನಡೆಯ ಸ್ವಾಗತಿಸಿದ್ದಾರೆ.

ಪಡಿತರ ಚೀಟಿ ಪರಿಷ್ಕರಣೆ ಬಗ್ಗೆ ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನು ಮಾತ್ರ ವಾಪಸ್ ಪಡೆಯುತ್ತಿದ್ದೇವೆ ಹೊರತು ಅರ್ಹರ ಕಾರ್ಡ್ ಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅರ್ಹರಿಗೆ ತಪ್ಪಿಸಲ್ಲ: 
ಬಿಪಿಎಲ್ ಕಾರ್ಡ್ ಗಳು ರದ್ದಾಗುತ್ತಿವೆಯೇ? ಎನ್ನುವ ಪ್ರಶ್ನೆಯೇ ಪೂರ್ತಿ ತಪ್ಪು. ಅನರ್ಹರ ಕಾರ್ಡ್ ಗಳನ್ನು ವಾಪಸ್ ಪಡೆಯಬಹುದು ಎನ್ನುವ ಆಲೋಚನೆ ಮಾತ್ರ ನಮ್ಮದಾಗಿದೆ. ಈ ಬಗ್ಗೆ ಇನ್ನೂ ಆಹಾರ ಇಲಾಖೆ ಪರಿಶೀಲಿಸುತ್ತಿದೆ. ಅಂತಿಮ ತೀರ್ಮಾನ ಆಗಿಲ್ಲ. ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ. ಆದಾಯ ತೆರಿಗೆ ಪಾವತಿಸುವವರ ಬಳಿ, ಸರ್ಕಾರಿ ನೌಕರರ ಬಳಿಯೂ ಬಿಪಿಎಲ್ ಕಾರ್ಡ್ ಇರಬೇಕಾ? ಅರ್ಹರ ಯಾವ ಕಾರ್ಡ್ ಗಳೂ ರದ್ದಾಗುವುದಿಲ್ಲ. ಅನರ್ಹರಿಂದ ವಾಪಸ್ ಪಡೆಯಬಹುದು. ಅರ್ಹರು ವಂಚಿತರಾಗಬಾರದು ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಈ ವಿಚಾರದಲ್ಲಿ ಕೆಲವೊಂದು ಸರಿ ಇದೆ.  ಬಿಪಿಎಲ್‌ ಕಾರ್ಡ್​ಗೆ ಬೇಕಾದ ಮಾನದಂಡ ಬದಲಾಗಬೇಕಿದೆ. ಈ ವಿಚಾರದಲ್ಲಿ ನಾನು ಟೀಕಿಸಲ್ಲ, ಕೇಲವೊಂದು ಬದಲಾಗಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಬಿಪಿಎಲ್‌ ಕಾರ್ಡ್‌ಗೆ ಅನರ್ಹರು ಯಾರು? 

* ಎಲ್ಲಾ ಕಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.

* ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು.

* ಗ್ರಾಮೀಣ ಪ್ರದೇಶ ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಸ್ವಂತವಾಗಿ ಮನೆ ಹೊಂದಿರುವ ಕುಟುಂಬಗಳು.

* ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನ ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು.

* ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು

Advertisement

Udayavani is now on Telegram. Click here to join our channel and stay updated with the latest news.

Next