ಪಡುಬಿದ್ರಿ: ರಿಕ್ಷಾ ಸಹಿತ ಸಂಶಯಾಸ್ಪದ ಮೂವರು ವ್ಯಕ್ತಿಗಳನ್ನು ಪಡುಬಿದ್ರಿ ಠಾಣೆಯ ಅಪರಾಧ ಪಿಎಸ್‌ಐ ಹಾಗೂ ಸಿಬಂದಿ ಗುರುವಾರ ಮುಂಜಾನೆ ಬಂಧಿಸಿದ್ದಾರೆ.
ಬಜ್ಪೆ ಕಾಳಾವರ ಕುರ್ಸುಗುಡ್ಡೆ ನಿವಾಸಿಗಳಾದ ಮಹಮ್ಮದ್ ಮುನೀರ್ (24), ಮಹಮ್ಮದ್ ಆರೀಫ್ ಯಾನೆ ಮುನ್ನ (37) ಮತ್ತು ಅಕ್ಬರ್ (36) ಆರೋಪಿಗಳು.
ಪಡುಬಿದ್ರಿ ಠಾಣೆಯ ಕ್ರೈಂ ಪಿಎಸ್‌ಐ ಪ್ರಕಾಶ್ ಸಾಲ್ಯಾನ್ ಗುರುವಾರ ಮುಂಜಾನೆ ನಂದಿಕೂರು ಜಂಕ್ಷನ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಕಾರ್ಕಳ ಕಡೆಯಿಂದ ಬರುತ್ತಿದ್ದ ಆಟೋ ರಿûಾವನ್ನು ನಿಲ್ಲಿಸಲು ಸೂಚಿಸಿದರೂ ಚಾಲಕನು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದ. ಸಿಬಂದಿ ಜತೆ ಹೊಯ್ಸಳ ವಾಹನದಲ್ಲಿ ಆಟೋರಿಕ್ಷಾವನ್ನು ಬೆನ್ನಟ್ಟಿ ಪಡುಬಿದ್ರಿಯ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದ್ವಾರದ ಬಳಿ ತಡೆದು ನಿಲ್ಲಿಸಲಾಗಿತ್ತು. ಆ ಕೂಡಲೇ ಚಾಲಕ ಮತ್ತು ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ಆಟೋರಿಕ್ಷಾದಿಂದ ಜಿಗಿದು ಓಡಿ ಹೋಗಲು ಯತ್ನಿಸಿದ್ದರು. ಅವರನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ, ಆಟೋ ರಿಕ್ಷಾದ ಬಗ್ಗೆ ಯಾವುದೇ ದಾಖಲಾತಿ ಕಂಡು ಬಂದಿಲ್ಲ.
ಕಬ್ಬಿಣದ ರಾಡ್, ಕಟ್ಟಿಂಗ್ ಪ್ಲೇಯರ್ ಪತ್ತೆ:
ಆಟೋರಿಕ್ಷಾವನ್ನು ಪರಿಶೀಲಿಸಿದಾಗ ಹಿಂಬದಿ ಸೀಟಿನ ಅಡಿಯಲ್ಲಿ ಒಂದು ಕಬ್ಬಿಣದ ರಾಡ್, ಕಟ್ಟಿಂಗ್ ಪ್ಲೇಯರ್, ಸ್ಕ್ರೂಡ್ರೈವರ್ ಕೂಡ ಸಿಕ್ಕಿದೆ. ಆ ಸೊತ್ತುಗಳನ್ನು ಅಲ್ಲಿ ಇರಿಸಿದ ಬಗ್ಗೆ ವಿಚಾರಿಸಿದಾಗ ತಾವು ಮೂವರು ಸೇರಿ ಯಾವುದಾದರೂ ಅಂಗಡಿ ಅಥವಾ ಮನೆಯಲ್ಲಿ ಕಳವು ಮಾಡುವ ಉದ್ದೇಶದಿಂದ ಬಂದಿರುವುದಾಗಿ ತಿಳಿಸಿದ್ದಾರೆ. ಈ ಮೂವರೂ ಆರೋಪಿಗಳು ಈ ಹಿಂದೆ ಪಡುಬಿದ್ರಿ ಠಾಣೆ ವ್ಯಾಪ್ತಿಯಲ್ಲಿ ಸುಲಿಗೆ, ಮನೆಕಳ್ಳತನ ಮತ್ತು ಬೈಕ್ ಕಳ್ಳತನಗಳಲ್ಲಿ ಭಾಗಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.