Advertisement
ಮುಡಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮುಡಾ ಆಯುಕ್ತ ಪಿ.ಎಸ್.ಕಾಂತರಾಜ್, ಆಯವ್ಯಯ ಮಂಡಿಸಿದರು. 2019-20ನೇ ಸಾಲಿನಲ್ಲಿ 405.87 ಕೋಟಿ ರೂ. ಆದಾಯ ಹಾಗೂ 403.20 ಕೋಟಿ ರೂ. ವೆಚ್ಚವನ್ನು ಭರಿಸಲು ಉದ್ದೇಶಿಸಲಾಗಿದ್ದು, ಪ್ರಸಕ್ತ ಸಾಲಿಗೆ 2.66 ಕೋಟಿ ಉಳಿತಾಯ ಆಯವ್ಯಯ ಮಂಡಿಸಲಾಗಿದೆ.
Related Articles
Advertisement
ಡಾ.ಶಿವಕುಮಾರ ಶ್ರೀ ವೃತ್ತ: ಮೈಸೂರಿನ ಕುವೆಂಪು ನಗರದಲ್ಲಿ ವಿಶ್ವ ಮಾನವ ಜೋಡಿ ರಸ್ತೆ ಮತ್ತು ಅನಿಕೇತನ ರಸ್ತೆಗಳು ಸೇರುವ ವೃತ್ತಕ್ಕೆ ಮೈಸೂರು ಮಹಾ ನಗರಪಾಲಿಕೆ ಡಾ.ಶಿವಕುಮಾರಸ್ವಾಮೀಜಿ ವೃತ್ತ ಎಂದು ನಾಮಕರಣ ಮಾಡಿದೆ. ಈ ವೃತ್ತದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಅಗಲೀಕರಣ ಮಾಡಿ ಅಭಿವೃದ್ಧಿಪಡಿಸಲು 50 ಲಕ್ಷ ಅನುದಾನ ಕಾಯ್ದಿರಿಸಿದೆ.
ಪರಿಧಿ ವರ್ತುಲ ರಸ್ತೆ: ಮೈಸೂರು ನಗರದ ಸುತ್ತ ಹೊರ ವರ್ತುಲ ರಸ್ತೆಯಿಂದ ಸುಮಾರು 5 ಕಿ.ಮೀ ಅಂತರದಲ್ಲಿ ಒಟ್ಟು 105 ಕಿ.ಮೀ. ಉದ್ದದ 45 ಮೀ ಅಗಲದ ಪರಿಧಿ ವರ್ತುಲ ರಸ್ತೆಯನ್ನು ಪ್ರಸ್ತಾಪಿಸಲಾಗಿದೆ. ಈ ಪೈಕಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 49 ಕಿ.ಮೀ ಹಾಗೂ ಪ್ರಾಧಿಕಾರದ ವ್ಯಾಪ್ತಿಯ ಹೊರಗೆ 56 ಕಿ.ಮೀ. ಇರುತ್ತದೆ. ಹಲವು ಭಾಗಗಳಲ್ಲಿ ಹಾಲಿ ರಸ್ತೆಯ ಮೇಲೆ ಪ್ರಸ್ತಾಪಿಸಲಾಗಿದೆ ಮತ್ತು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅನುಮೋದಿಸಿರುವ ಖಾಸಗಿ ಬಡಾವಣೆಗಳಲ್ಲಿ ಪರಿಧಿ ರಸ್ತೆಯನ್ನು ಅಳವಡಿಸಿ ಅನುಮೋದಿಸಲಾಗಿದೆ. ಈ ಪರಿಧಿ ರಸ್ತೆಯ ಸರ್ವೇ ಕಾರ್ಯವನ್ನು ಕೈಗೆತ್ತಿಕೊಳ್ಳಲು ಈ ಸಾಲಿನಲ್ಲಿ 1 ಕೋಟಿ ಅನುದಾನ ಕಾಯ್ದಿರಿಸಿದೆ.
ಗುಂಪು ಮನೆಗಳ ನಿರ್ಮಾಣ: ಮುಡಾ ಅಭಿವೃದ್ಧಿಪಡಿಸಿರುವ ವಿವಿಧ ಬಡಾವಣೆಗಳನ್ನು ಸುಮಾರು 29 ಎಕರೆ ಜಮೀನಿನಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ವಸತಿ ಸಮುತ್ಛಯ ನಿರ್ಮಿಸಲು ಉದ್ದೇಶಿಸಿದ್ದು, ಬಿಡಿಎ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರದ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ. ಈ ಯೋಜನೆಯ ಕಾಮಗಾರಿಗೆ ಈ ಸಾಲಿನಲ್ಲಿ 5ಕೋಟಿ ಅನುದಾನ ಕಾಯ್ದಿರಿಸಿದೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿ: ಮುಡಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಅಲೆಮಾರಿ ಮತ್ತು ಬುಡಕಟ್ಟು ಪಂಗಡಗಳಿಗೆ ಸೇರಿದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು, 3 ಕೋಟಿ ಅನುದಾನ ಕಾಯ್ದಿರಿಸಿದೆ.
ವಾಣಿಜ್ಯ ಸಂಕೀರ್ಣ ನಿರ್ಮಾಣ: ಮುಡಾ ಬಡಾವಣೆಗಳಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಕಾಯ್ದಿರಿಸಿದ್ದ ಪ್ರದೇಶಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಈಗಾಗಲೇ ದಟ್ಟಗಳ್ಳಿ 3ನೇ ಹಂತ ಮತ್ತು ವಿಜಯನಗರ 2ನೇ ಹಂತದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಯೋಜನಾ ವರದಿ ತಯಾರಿಸಲು ಐಡೆಕ್ ಸಂಸ್ಥೆಗೆ ವಹಿಸಲಾಗಿದೆ. ಈ ಯೋಜನೆ ಅನುಷ್ಠಾನಕ್ಕಾಗಿ 3 ಕೋಟಿ ಕಾಯ್ದಿರಿಸಿದೆ.
ಹೈಟೆಕ್ ಸ್ಮಶಾನಗಳ ಅಭಿವೃದ್ಧಿ: ಮುಡಾದಿಂದ ವಿಜಯನಗರ 4ನೇ ಹಂತ ಮತ್ತು ಜನಯನಗರ ಸ್ಮಶಾನಗಳನ್ನು ಹೈಟೆಕ್ ಆಗಿ ಅಭಿವೃದ್ಧಿಪಡಿಸಲಾಗಿದೆ. ಇದೇ ಮಾದರಿಯಲ್ಲಿ ಚಾಮರಾಜ, ಕೃಷ್ಣರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ್ಲಿ ತಲಾ ಒಂದೊಂದು ಹೈಟೆಕ್ ಸ್ಮಶಾನಗಳನ್ನು ಅಭಿವೃದ್ಧಿಪಡಿಸಲು 3 ಕೋಟಿ ಅನುದಾನ ಕಾಯ್ದಿರಿಸಿದೆ.
ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆ: ಮುಡಾ ಅಭಿವೃದ್ಧಿಪಡಿಸಿರುವ ವಸಂತ ನಗರ, ಲಾಲ್ ಬಹದ್ದೂರ್ ಶಾಸ್ತ್ರೀ ನಗರ, ಶಾಂತವೇರಿ ಗೋಪಾಲಗೌಡ ನಗರ ಮತ್ತು ಲಲಿತಾದ್ರಿನಗರ ಬಡಾವಣೆಗಳಿಗೆ ಹೊಸ ವಿದ್ಯುತ್ ಸೌಲಭ್ಯ ಕಲ್ಪಿಸುವ ಕಾಮಗಾರಿಯನ್ನು 12.25 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, ಈ ಸಾಲಿನಲ್ಲಿ 50 ಲಕ್ಷ ಅನುದಾನ ಮೀಸಲಿರಿಸಿದೆ.
ರಮ್ಮನಹಳ್ಳಿ ಆಶ್ರಯ ಬಡಾವಣೆಗೆ ಒಳ ಮತ್ತು ಹೊರ ವಿದ್ಯುತ್ ಸೌಲಭ್ಯ ಕಲ್ಪಿಸುವ 28.80 ಕೋಟಿ ಮೊತ್ತದ ಕಾಮಗಾರಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ್ ಕರೆಯಲಾಗಿದ್ದು, ಈ ಕಾಮಗಾರಿಯ ತಾಂತ್ರಿಕ ಬಿಡ್ ಅನ್ನು ತೆರೆದು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಸಾಲಿನಲ್ಲಿ 50 ಲಕ್ಷ ಅನುದಾನ ಕಾಯ್ದಿರಿಸಿದೆ.
ಮುಡಾ ಸದಸ್ಯರಾದ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ, ಆರ್.ಧರ್ಮಸೇನ, ಮಹಾ ನಗರಪಾಲಿಕೆ ಪ್ರತಿನಿಧಿ ಎಸ್.ಬಿ.ಎಂ.ಮಂಜು, ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಮುಡಾ ಕಾರ್ಯದರ್ಶಿ ಯಲ್ಲಾಪುರ ಹಾಜರಿದ್ದರು.
ಮಾರುಕಟ್ಟೆ ಅಭಿವೃದ್ಧಿ: ಮುಡಾ ನಿರ್ಮಿಸಿರುವ ಬಡಾವಣೆಗಳಲ್ಲಿ ಮೂಲ ಸೌಕರ್ಯ ಒದಗಿಸುವ ಉದ್ದೇಶದಿಂದ ವಿಜಯ ನಗರ 4ನೇ ಹಂತದ ಬಸವನಹಳ್ಳಿ ಮುಖ್ಯ ರಸ್ತೆ, ವಿಜಯನಗರ 2ನೇ ಹಂತದ ಕೃಷಿಕ್ ಭವನ ಮುಂಭಾಗ, ಹೆಬ್ಟಾಳು 1ನೇ ಹಂತದ ಕಿರು ಮಾರುಕಟ್ಟೆ ಹತ್ತಿರ, ಯಾದವಗಿರಿ, ರಣಜಿತ್ ಚಿತ್ರಮಂದಿರದ ಎದುರು, ಪ್ರಭುದೇವ ಚಿತ್ರಮಂದಿರದ ಎದುರು ಮಾರುಕಟ್ಟೆ ಸಂಕೀರ್ಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದಲ್ಲದೆ ಈಗಾಗಲೇ ನಿರ್ಮಿಸಿರುವ 9 ಕಿರು ಮಾರುಕಟ್ಟೆಗಳನ್ನು ಪೂರ್ಣವಾಗಿ ಉಪಯೋಗಿಸದೆ ಇರುವುದರಿಂದ ಅವುಗಳನ್ನು ಅಂಗಡಿಗಳಾಗಿ ಮಾರ್ಪಡಿಸಲು ಯೋಜಿಸಿದ್ದು, ಈ ಎಲ್ಲಾ ಕಾಮಗಾರಿಗಳಿಗೆ ಈ ಸಾಲಿನಲ್ಲಿ 5 ಕೋಟಿ ಅನುದಾನ ಕಾಯ್ದಿರಿಸಲಾಗಿದೆ.
ಉದ್ಯಾನಗಳ ಅಭಿವೃದ್ಧಿ: ಮುಡಾ ನಿರ್ಮಿಸಿ ಮೈಸೂರು ಮಹಾ ನಗರಪಾಲಿಕೆಗೆ ಹಸ್ತಾಂತರಿಸದೇ ಇರುವ ಬಡಾವಣೆಗಳಲ್ಲಿ 156 ಉದ್ಯಾನಗಳಿದ್ದು, ಹಲವು ಉದ್ಯಾನಗಳನ್ನು ಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ. ಪ್ರಾಧಿಕಾರದಲ್ಲಿ ಉದ್ಯಾನಗಳ ನಿರ್ವಹಣೆಗೆ ಸಿಬ್ಬಂದಿ ಇಲ್ಲದಿರುವುದರಿಂದ ಜನ ವಸತಿ ಪ್ರದೇಶಗಳಲ್ಲಿರುವ ಉದ್ಯಾನಗಳ ನಿರ್ವಹಣೆಗೆ ಖಾಸಗಿಯವರು, ಸ್ಥಳೀಯ ಸಂಘಸಂಸ್ಥೆಗಳವರು ಮುಂದೆ ಬಂದಲ್ಲಿ ಅಂಥವರಿಂದ ಉದ್ಯಾನ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 5 ಕೋಟಿ ಅನುದಾನ ಕಾಯ್ದಿರಿಸಲಾಗಿದೆ.
ಕೆರೆಗಳ ಅಭಿವೃದ್ಧಿ: ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ದೇವನೂರು ಕೆರೆ ಅಭಿವೃದ್ಧಿಪಡಿಸಲು 18 ಕೋಟಿ ರೂ.ಗಳಿಗೆ ಯೋಜನಾ ವರದಿ ತಯಾರಿಸಿ ಈಗಾಗಲೇ ಕೆರೆ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಬೋಗಾದಿ ಮರಿಯಪ್ಪನ ಕೆರೆ ಅಭಿವೃದ್ಧಿಪಡಿಸುವುದು ಮತ್ತು ಕೆರೆ ಕೋಡಿಯು ಬಹಳ ಕಿರಿದಾಗಿದ್ದು, ಅಕ್ಕಪಕ್ಕದ ಪ್ರದೇಶಗಳಿಗೆ ನೀರು ನುಗ್ಗುತ್ತಿರುವುದರಿಂದ ಕೋಡಿ ಹಳವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು, ಎರಡೂ ಕಾಮಗಾರಿಗಳಿಗಾಗಿ 5 ಕೋಟಿ ಕಾಯ್ದಿರಿಸಲಾಗಿದೆ.
ಬಲ್ಲಹಳ್ಳಿ ವಸತಿ ಬಡಾವಣೆ ಅಭಿವೃದ್ಧಿ: ಮೈಸೂರು ತಾಲೂಕು ಜಯಪುರ ಹೋಬಳಿ ಬಲ್ಲಹಳ್ಳಿ ಗ್ರಾಮದಲ್ಲಿ ಪ್ರಾಧಿಕಾರದಿಂದ ವಸತಿ ಬಡಾವಣೆ ರಚಿಸಲು 484 ಎಕರೆ 24 ಗುಂಟೆ ವಿಸ್ತೀರ್ಣದ ಪ್ರದೇಶಕ್ಕೆ ಯೋಜನೆ ತಯಾರಿಸಿ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದ್ದು, ಈ ಪೈಕಿ 381 ಎಕರೆ 1ಗುಂಟೆ ವಿಸ್ತೀರ್ಣಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಉದ್ದೇಶಿತ ವಸತಿ ಬಡಾವಣೆಯಲ್ಲಿ ವಿವಿಧ ಅಳತೆಯ 6,155 ನಿವೇಶನ ರಚಿಸಲು ಉದ್ದೇಶಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಇದಕ್ಕಾಗಿ 2.50 ಕೋಟಿ ಅನುದಾನ ಮೀಸಲಿರಿಸಿದೆ.