Advertisement

ಪಿಕೆಪಿಎಸ್‌ಗಳ ಜನಪರ ಕಾಳಜಿ ಮಾದರಿ

03:14 PM Jul 24, 2022 | Team Udayavani |

ಬೀದರ: ಜಿಲ್ಲೆಯಲ್ಲಿ ಶೇ.80 ರಸಗೊಬ್ಬರ ಸಹಕಾರಿ ಸಂಘಗಳ ಮೂಲಕವೇ ವಿತರಣೆಯಾಗುತ್ತಿದ್ದು ರೈತರಿಗೆ ತೊಂದರೆಯಾಗದಂತೆ ಸೇವೆ ನೀಡುತ್ತಿರುವ ಇಲ್ಲಿನ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ಮತ್ತು ಅದರ ನೇತೃತ್ವ ವಹಿಸಿರುವ ಡಿಸಿಸಿ ಬ್ಯಾಂಕಿನ ಜನಪರ ಕಾಳಜಿ ದೇಶಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

Advertisement

ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಬಳ್ಳಾರಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ಯಾಕ್ಸ್‌ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರಿಗಾಗಿ ನಬಾರ್ಡ್‌ ವತಿಯಿಂದ ನಡೆದ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೀದರ ಡಿಸಿಸಿ ಬ್ಯಾಂಕ್‌ ಮತ್ತು ಪ್ಯಾಕ್ಸ್‌ಗಳ ನಡುವಿನ ಸೌಹಾರ್ದಯುತ ಸಂಬಂಧ ಸಹಕಾರಿ ವ್ಯವಸ್ಥೆಯ ಸದೃಢ ಬೆಳವಣಿಗೆಗೆ ಕಾರಣವಾಗಿದೆ ಎಂದರು.

ಸಹಕಾರಿ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಕಡಿಮೆ ದರದಲ್ಲಿ ವಿಶ್ವಾಸಾರ್ಹ ಸೇವೆ ನೀಡುವಲ್ಲಿ ಮುಂದೆ ಬರಬೇಕು, ಅದಕ್ಕಾಗಿ ಯೋಜನೆ ರೂಪಿಸಬೇಕು. ತಮ್ಮ ಸಂಘಗಳ ಅಭಿವೃದ್ಧಿಗಾಗಿ ದೂರದೃಷ್ಟಿ ಹೊಂದಿರಬೇಕು. ಜನರಿಗೆ ತಮ್ಮ ಕೈಗೆಟುಕುವಷ್ಟು ಹತ್ತಿರದಲ್ಲೇ ಸೇವೆಗಳು ದೊರಕಿದಾಗ ಇದು ತಮ್ಮ ಸಂಸ್ಥೆಯೆಂಬ ಭಾವನೆ ಮೂಡುತ್ತದೆ. ಸಹಕಾರದ ಬಲ ವೃದ್ಧಿಯಾಗುತ್ತದೆ. ಸಂಸ್ಥೆಯಲ್ಲಿ ಮಾದರಿ ಸೇವೆ ನೀಡುವ ಯೋಜನೆ ರೂಪಿಸಲು ತರಬೇತಿಗಳಿಗೆ ಹಾಜರಾಗಬೇಕು. ತರಬೇತಿಗಳಲ್ಲಿ ಅನುಭವ ಹಂಚಿಕೊಳ್ಳಬೇಕು. ಉತ್ತಮ ಸಂಗತಿ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮನುಷ್ಯ ಸಂಘಜೀವಿಯಾಗಿದ್ದು ಪರಸ್ಪರ ಅವಲಂಬನೆ ಸ್ವಾಭಾವಿಕ. ಅವರಿಗೆ ಉತ್ತಮ ಸೇವೆ ನೀಡುವಲ್ಲಿ ಸಹಕಾರಿ ಆಂದೋಲನ ಅತ್ಯಂತ ಆದರ್ಶ ಮಾದರಿಯಾಗಿದೆ. ಖಾಸಗಿ ವ್ಯವಸ್ಥೆಯು ಲಾಭಕ್ಕಾಗಿ ಸೇವೆ ನೀಡಿದರೆ ಸಹಕಾರಿ ಸಂಘಗಳು ಕಡಿಮೆ ಲಾಭದಲ್ಲಿ ಸದಸ್ಯರ ಆವಶ್ಯಕತೆ ಪೂರೈಸುತ್ತವೆ. ಸಂಘಗಳ ಅಭಿವೃದ್ಧಿಗೆ ಉತ್ತಮ ನಾಯಕತ್ವ ಬಹಳ ಮುಖ್ಯ. ಬೀದರ ಡಿಸಿಸಿ ಬ್ಯಾಂಕ್‌ ಉತ್ತಮ ನಾಯಕತ್ವ ಹೊಂದಿದ್ದು ಫಸಲ್‌ ಬೀಮಾ ಮತ್ತು ಸ್ವ ಸಹಾಯ ಗುಂಪುಗಳ ಕಾರ್ಯಕ್ರಮ ಜಾರಿಯಲ್ಲಿ ದೇಶಕ್ಕೆ ಮಾದರಿಯಾಗಿದೆ ಎಂದರು.

ಡಿಸಿಸಿ ಬ್ಯಾಂಕ್‌ ಉಪ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ನಾ ಸ್ವಾಮಿ ಮಾತನಾಡಿ, ಬಹುಸೇವಾ ಕೇಂದ್ರವಾಗಿ ಪ್ಯಾಕ್ಸ್‌ಗಳನ್ನು ಮಾರ್ಪಡಿಸಿದಾಗ ರೈತರ ಸೇವೆಗಳಿಗೆ ಮಹತ್ವ ನೀಡಬೇಕು. ಹೆಚ್ಚು ಸದಸ್ಯರನ್ನು ಮಾಡಿ ಶೇರು ಬಂಡವಾಳ ಹೆಚ್ಚಿಸಿಕೊಳ್ಳಬೇಕು. ಸದಸ್ಯರಿಗೆ ಸಾಲ ನೀಡಿ, ಸೇವೆ ಒದಗಿಸಿ, ಸೇವೆ ಮಾಡುವಂತಹ ಹೊಸ ಯೋಜನೆ ರೂಪಿಸಿ ರೈತರ ಮನೆ ಬಾಗಿಲಿಗೆ ಸೇವೆ ತಲುಪಿಸಿ ಎಂದರು.

Advertisement

ಈ ವೇಳೆ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತ ಮೊಹಮ್ಮದ ಮೊಸಿನ್‌, ಬ್ಯಾಂಕಿನ ಸಿಇಒ ಮಹಾಜನ ಮಲ್ಲಿಕಾರ್ಜುನ, ಪ್ರಧಾನ ವ್ಯವಸ್ಥಾಪಕ ವಿಠಲ ರೆಡ್ಡಿ ಇದ್ದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನೀಲ ಪಿ. ನಿರೂಪಿಸಿದರು. ಎಸ್‌.ಜಿ ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next