ಸುಳ್ಯ: ಇಲ್ಲಿನ ಮುಖ್ಯ ಪೇಟೆಯ ಹೆದ್ದಾರಿಯ ಮಧ್ಯದಲ್ಲಿ ಹೊಂಡ ನಿರ್ಮಾಣಗೊಂಡು ಬಹಳ ಸಮಯ ಕಳೆದರೂ ಅದನ್ನು ದುರಸ್ತಿ ಪಡಿಸುವ ಕಾರ್ಯವನ್ನು ಸಂಬಂಧಿಸಿದವರು ಇನ್ನೂ ಮಾಡಿಲ್ಲ. ಇದರಿಂದಾಗಿ ವಾಹನ ಸಂಚಾರಕ್ಕೆ ನಿತ್ಯ ಸಮಸ್ಯೆಯಾಗುತ್ತಿದೆ. ಸಂಬಂಧಿಸಿದವರ ನಿರ್ಲಕ್ಷ್ಯಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಯ ಮುಖ್ಯ ಪೇಟೆಯ ಕೆಎಸ್‌ಆರ್‌ಟಿ ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ಜಂಕ್ಷನ್ ರಸ್ತೆಯಲ್ಲಿ ಚರಂಡಿಯ ಮ್ಯಾನ್ ಹೋಲ್‌ನ ಡಾಮಾರು ಕಿತ್ತು ಹೊಂಡ ನಿರ್ಮಾಣಗೊಂಡಿದೆ. ಇದರಿಂದ ಮಲಿನ ನೀರು ಹೊರ ಬರುತ್ತಿರುತ್ತದೆ. ಅಪಾಯಕಾರಿ ಸ್ಥಿತಿ ಯಲ್ಲಿರುವ ಇಲ್ಲಿ ಬ್ಯಾರಿ ಕೇಡ್ ಅಳವಡಿಕೆ ಮಾಡಿ ದ್ದಾರೆಯೇ ಹೊರತು ಸೂಕ್ತ ದುರಸ್ತಿ ಮಾಡಲು ಇನ್ನೂ ಕ್ರಮ ಕೈಗೊಂಡಿಲ್ಲ.
ಸವಾರರಿಗೆ ಸಂಕಷ್ಟ
ಹೆದ್ದಾರಿ ಮಧ್ಯೆ ನಿರ್ಮಾಣಗೊಂಡಿರುವ ಹೊಂಡದ ಬಳಿ ವಾನಗಳು ಇಳಿಯದಂತೆ ಮುನ್ನಚ್ಚರಿಕೆಯಾಗಿ ಎರಡು ಬ್ಯಾರಿಕೇಡ್ ಅಳವಡಿಸಿ ತಿಂಗಳುಗಳೇ ಕಳೆದಿದೆ. ಆದರೆ ಇದರಿಂದಾಗಿ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ ಬಸ್ ನಿಲ್ದಾಣಕ್ಕೆ ತೆರಳುವ ಹಾಗೂ ನಿರ್ಗಮಿಸುವ ಬಸ್ ಗಳು ಇಲ್ಲಿ ತಿರುಗಿಸಲು ಕಷ್ಟ ಪಡಬೇಕಾಗಿದೆ. ಜತೆಗೆ ಟ್ರಾಫಿಕ್ ಜಾಮ್ ಸಮಸ್ಯೆಯೂ ಎದುರಾಗುತ್ತದೆ.
ಪೈಚಾರು ವರೆಗೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯವರು ಸ್ಥಳೀಯಾಡಳಿತಕ್ಕೆ ಹಸ್ತಾಂತರ ಮಾಡಿಲ್ಲ. ಈ ಬಗ್ಗೆ ಎಂಜಿನಿಯರ್ ವಿಭಾಗದಿಂದ ಹೆದ್ದಾರಿ ಇಲಾಖೆಗೆ ಪತ್ರ ಬರೆಯಲಾಗಿದೆ. ಹೆದ್ದಾರಿಯ ಸಮಸ್ಯೆಯಾಗಿರುವುದರಿಂದ ಹೆದ್ದಾರಿ ಇಲಾಖೆಯವರು ದುರಸ್ತಿ ಮಾಡಬೇಕಾಗಿದೆ. ಆದರೆ ಅವರು ಇನ್ನೂ ಮುಂದಾಗದೆ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.
ದ್ವಿಚಕ್ರ ವಾಹನ ಸವಾರರಿಗೆ ಕಷ್ಟ
ಮ್ಯಾನ್‌ಹೋಲ್‌ನಿಂದ ಮಲಿನ ನೀರು ಹೊರ ಬರುತ್ತಿದ್ದು, ಇದು ಹೆದ್ದಾರಿಯಲ್ಲೇ ಹರಿಯುತ್ತಾ ಮುಂದೆ ಚರಂಡಿ ಸೇರುತ್ತಿದೆ. ಅಕ್ಕ ಪಕ್ಕದ ಅಂಗಡಿಯವರು, ವಾಹನ ಸವಾರರು, ಪಾದಚಾರಿಗಳು ಇಲ್ಲಿನ ಮಲಿನ ನೀರಿನ ಗಬ್ಬು ವಾಸನೆಗೆ ಮೂಗು ಮುಚ್ಚಿಕೊಂಡು ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಲಿನ ನೀರು ರಸ್ತೆಯಲ್ಲೇ ಹರಿಯುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಪಾದಚಾರಿಗಳಿಕೆ ಸಂಕಟ ಕಟ್ಟಿಟ್ಟ ಬುತ್ತಿಯಾಗಿದೆ.