ಪಿರಿಯಾಪಟ್ಟಣ: ರಸ್ತೆ ಹಾಗೂ ಚರಂಡಿ ಮೂಲಸೌಕರ್ಯಗಳ ಕೊರತೆಯಿಂದ ಜನತೆ ರೋಗಪೀಡಿತರಾಗುತ್ತಿದ್ದು, ಸೌಲಭ್ಯ ಕಲ್ಪಿಸಿ ಸ್ವತ್ಛತೆ ಕಾಪಾಡಬೇಕು ಎಂದು ಪರಿಸರ ಹೋರಾಟಗಾರ ಕೆ.ಎನ್.ಸೋಮಶೇಖರ್ ಆಗ್ರಹಿಸಿದರು. ಪಿರಿಯಾಪಟ್ಟಣ ಟೌನ್‌ನ ಮೇದರ್‌ಬ್ಲಾಕ್‌ನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮೇದರ್‌ಬ್ಲಾಕ್‌ನಲ್ಲಿ 700ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಕೊಳಚೆ ನೀರು ಮನೆಯ ಮುಂದೆ ನಿಲ್ಲುವಂತಾಗಿದೆ. ಹಲವಾರು ಮಂದಿ ಡೆಂಘೀ, ಚಿಕುನ್‌ಗುನ್ಯಾ ಮತ್ತಿತರ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದು, ಶೀಘ್ರದಲ್ಲಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ವಿಶೇಷ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದರು.
ಇಲ್ಲಿ ವಾಸಿಸುವ ಜನರು ಕೂಲಿ ಕಾರ್ಮಿಕರಾಗಿದ್ದು, ಸೌಲಭ್ಯ ಕೊರತೆಯಿಂದ ನಲುಗಿ ಹೋಗಿದ್ದಾರೆ. 10ಕ್ಕೂ ಹೆಚ್ಚು ಮಕ್ಕಳು ಡೆಂಘೀ ಮತ್ತಿತರರ ರೋಗಗಳಿಗೆ ತುತ್ತಾಗಿದ್ದಾರೆ. 11ನೇ ವಾರ್ಡ್ ಜನರಿಗೆ ಎದುರಾಗಿರುವ ಸಮಸ್ಯೆಯ ಬಗ್ಗೆ ಈಗಾಗಲೇ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ.
ತ್ವರಿತಗತಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ. ಜೊತೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರಸ್ತೆ ಹಾಗೂ ಚರಂಡಿ ನಿರ್ಮಿಸುವ ಜಾಗವನ್ನು ಪ್ರಭಾವಿಗಳು ಅತಿಕ್ರಮಿಸಿಕೊಂಡಿದ್ದು, ತೆರವುಗೊಳಿಸಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ವೈದ್ಯಾಧಿಕಾರಿ ಡಾ.ವಿಜಯ್ ಕುಲಕರ್ಣಿ ಮಾತನಾಡಿ, ಸುತ್ತಮುತ್ತಲ ಪರಿಸರ ಸ್ವತ್ಛವಾಗಿಟ್ಟುಕೊಳ್ಳಬೇಕು. ಇಲ್ಲಿನ ಜನರು ಕಲುಷಿತ ಪರಿಸರದಲ್ಲಿ ಬದುಕುವಂತಾಗಿರುವುದು ಖಂಡನೀಯ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು. ಶಿಬಿರದಲ್ಲಿ 150ಕ್ಕೂ ಹೆಚ್ಚು ರೋಗಿಗಳಿಗೆ ಡಾ.ಪ್ರಕಾಶ್‌ಬಾಬುರಾವ್ ಮತ್ತು ಲಕ್ಷ್ಮೀ ಹೆಲ್ತಕೇರ್ ಕ್ಲೀನಿಕ್ ಸಿಬ್ಬಂದಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.