ಧಾರವಾಡ: ಕೃಷಿ ಅಭಿವೃದ್ಧಿ ಮತ್ತು ಅದರ ಮೌಲ್ಯವರ್ಧನೆಗೆ ಸರ್ಕಾರಗಳು ಹಾಗೆ ಮಾಡಿದ್ದೇವೆ, ಹೀಗೆ ಮಾಡಿದ್ದೇವೆ ಎಂದೆಲ್ಲ ಭಾಷಣ ಕುಟ್ಟುವುದನ್ನು ನಿಜ ಎಂದು ನಂಬಿದರೆ ಅನ್ನದಾತರ ನಿಜವಾದ ಕಷ್ಟಗಳು ಹೊರ ಬರುವುದೇ ಇಲ್ಲ.
ಹೌದು…ಇದಕ್ಕೆ ಮತ್ತೂಂದು ಸಾಕ್ಷಿ ದೊರಕಿದಂತಾಗಿದ್ದು, ಜಿಲ್ಲೆಯಲ್ಲಿನ ರೈತರಿಗೆ ಎರಡು ವರ್ಷಗಳಿಂದ ಕೃಷಿ ಇಲಾಖೆ ಅಡಿಯಲ್ಲಿಯೇ ವಂತಿಗೆ ಹಣ ತುಂಬಿಸಿಕೊಂಡು ನೀರಾವರಿಗೆ ಪೈಪ್
ಗಳನ್ನು ಪೂರೈಸುವುದಾಗಿ ಹೇಳಿದ್ದ ಖಾಸಗಿ ಪೈಪ್ ಪೂರೈಕೆ ಕಂಪನಿಯೊಂದು ಇದೀಗ, ನಾವು ಪೈಪ್ ನೀಡಲು ಆಗುವುದಿಲ್ಲ, ಬೇಕಿದ್ದರೆ ನಿಮ್ಮ ಹಣ ಮರಳಿ ಪಡೆದುಕೊಳ್ಳಿ ಎಂದು ಸೋಡಾ ಚೀಟಿ ಕೊಡುತ್ತಿದೆ.
ಈ ಬಗ್ಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಒಂದು ವೇಳೆ ಹಣ ಮರಳಿಸುವುದಾದರೆ ರೈತರಿಂದ ವಂತಿಗೆ ಪಡೆದುಕೊಂಡಿದ್ದು ಯಾಕೆ? ಇಷ್ಟಕ್ಕೂ ಸರ್ಕಾರ ಯಾಕೆ ನಿಮ್ಮ ಕಂಪನಿಗೆ ಪೈಪ್ ಪೂರೈಕೆ ಮಾಡದಿರಲು ಸೂಚಿಸಿದೆ ಎಂದೆಲ್ಲ ವಾದ ಮಾಡುತ್ತಿದ್ದಾರೆ. ಅಷ್ಟೇಯಲ್ಲ, ಸರ್ಕಾರದ ಮಟ್ಟದಲ್ಲಿಯೇ ಈ ಕಂಪನಿಯ ಪೈಪ್‌ಗ್ಳ ಪೂರೈಕೆಗೆ ತಡೆ ಹೇರಲಾಗಿದ್ದು, ರೈತರಿಗೆ ಆಸಕ್ತ ಕಂಪನಿ ಬಿಟ್ಟು ಇಂತದೇ ಕಂಪನಿ ಪೈಪ್ ಕೊಳ್ಳುವಂತೆ ಅಧಿಕಾರಿಗಳು ಸೂಚಿಸುತ್ತಿರುವುದರ ಹಿಂದೆ ಬೇರೆಯದೇ ವ್ಯವಹಾರ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಏನಿದು ಯೋಜನೆ?: ರೈತರಿಗೆ ನೀರಾವರಿ ಕೃಷಿ ಮಾಡಲು ಅನುಕೂಲವಾಗಲೆಂದು ಸರ್ಕಾರ ಶೇ.90 ಸಬ್ಸಿಡಿಯಲ್ಲಿ ಪೈಪ್‌ಗ್ಳನ್ನು ಪೂರೈಕೆ ಮಾಡುತ್ತಿದ್ದು, ಇದಕ್ಕೆ ಜಿಲ್ಲೆಯಲ್ಲಿ ಕಳೆದ ಆರೇಳು ವರ್ಷಗಳಿಂದಲೂ ಪ್ರತಿವರ್ಷ ಸಾವಿರಕ್ಕೂ ಅಧಿಕ ರೈತರು ಅರ್ಜಿ ಹಾಕುತ್ತಿದ್ದಾರೆ. ಒಬ್ಬ ರೈತ 1900 ರೂ. ಮಾತ್ರ ಹಣ ಕಟ್ಟಿದರೆ ಸಾಕು, ಉಳಿದ ಶೇ.90 ಹಣವನ್ನು ಸರ್ಕಾರವೇ ಕಂಪನಿಗಳಿಗೆ ನೀಡುತ್ತದೆ. ಕಂಪನಿಗಳು ವಂತಿಗೆ ತುಂಬಿದ ಪ್ರತಿ ರೈತನಿಗೆ 30 ಪೈಪ್‌ಗ್ಳು, 5 ತುಂತುರು (ಸ್ಪಿಂಕ್ಲರ್)ಸೆಟ್‌ಗಳನ್ನು ಪೂರೈಸುತ್ತವೆ. ಪ್ರತಿವರ್ಷ ಇಂತಿಷ್ಟೇ ರೈತರಿಗೆ ಪೈಪುಗಳ ಪೂರೈಕೆಗೆಂದು ನಿಗದಿ ಪಡಿಸಲಾಗಿದ್ದು, ಇಲಾಖೆಯಲ್ಲಿ ಲಭ್ಯವಿರುವ ಬಜೆಟ್ ಗೆ ಅನುಗುಣವಾಗಿ ಮಾತ್ರ ಪೈಪ್‌ಗ್ಳನ್ನು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 2019ರಲ್ಲಿ 890 ರೈತರಿಗೆ ಪೂರೈಕೆಯಾದರೆ 2020ರಲ್ಲಿ 1100 ರೈತರಿಗೆ, 2021ರಲ್ಲಿ ಸಾವಿರಕ್ಕೂ ಅಧಿಕ ರೈತರಿಗೆ ನೀರಾವರಿ ಪೈಪ್ ಸೆಟ್ ಗಳನ್ನು ಪೂರೈಸಲಾಗುತ್ತಿದೆ. 2019ರಿಂದ ಜಿಲ್ಲೆಯಲ್ಲಿ ಪ್ರತಿವರ್ಷ 300ರಿಂದ 400 ರೈತರು ಹೆಚ್ಚುವರಿಯಾಗಿ ಪೈಪ್‌ಗ್ಳಿಗೆ ಬೇಡಿಕೆ ಸಲ್ಲಿಸುತ್ತಿದ್ದು, ಇವರಿಗೆ ಪೈಪ್‌ಗ್ಳನ್ನು ಪೂರೈಸುವುದು ಸರ್ಕಾರಕ್ಕೆ ಹೊರೆಯಾಗುತ್ತಿದೆ ಎನ್ನುವ ಮಾತುಗಳು ಅಧಿಕಾರಿ ವಲಯದಲ್ಲಿ ಕೇಳಿಬರುತ್ತಿವೆ.
ವರ್ಷಗಟ್ಟಲೇ ಕಾಯಬೇಕು: ಪೈಪ್ ಗಳಿಗೆ ಅರ್ಜಿ ಹಾಕಿದ ರೈತರಿಗೆ ತಕ್ಷಣವೇ ಪೈಪ್ ಗಳು ಲಭ್ಯವಾಗುವುದೇ ಇಲ್ಲ. ಸರ್ಕಾರದ ಬಜೆಟ್ ವಿಂಗಡಣೆ, ಇಲಾಖೆಗಳಲ್ಲಿನ ಲೋಪದೋಷಗಳು, ಅಧಿಕಾರಿಗಳ ನಿಷ್ಕಾಳಜಿ, ಪೈಪ್ ಪೂರೈಕೆ ಕಂಪನಿ ಮತ್ತು ಸರ್ಕಾರದ ನಡುವಿನ ಒಪ್ಪಂದಗಳಲ್ಲಿನ ಗೊಂದಲ, ಪೈಪ್ ಗಳ ಗುಣಮಟ್ಟ ಇತ್ಯಾದಿ ಕಾರಣಗಳಿಂದಾಗಿ ಮೂರು ವರ್ಷ, ನಾಲ್ಕು
ವರ್ಷಗಟ್ಟಲೇ ರೈತರು ಕಾಯಬೇಕಾದ ಅನಿವಾರ್ಯತೆ ಇದ್ದೇ ಇದೆ. ಈ ಮಧ್ಯೆ ರೈತರು ಖಾಸಗಿ ಕಂಪನಿಗಳ ಪೈಪ್ ಗಳನ್ನು ಮಾರುಕಟ್ಟೆಯಿಂದ ಕೊಳ್ಳಲು ಅತ್ಯಧಿಕ ಹಣ ವ್ಯಯಿಸಬೇಕಾಗಿದೆ.
ರೈತರಿಗೆ ಕಿರಿ ಕಿರಿ
ಸರ್ಕಾರ ನೀಡುವ ಪೈಪ್ ಗಳನ್ನು ಪಡೆದುಕೊಳ್ಳಲು ರೈತರು ಸಹಜವಾಗಿಯೇ ತೀವ್ರ ಪೈಪೋಟಿ ಎದುರಿಸುವುದು ಸಾಮಾನ್ಯ. ವರ್ಷಗಟ್ಟಲೇ ಕಾಯುವುದು ಸಹಜ. ಮೊದಲು ಸಾಲಿನಲ್ಲಿ ನಿಂತು ಅರ್ಜಿ ಫಾರಂಗಳನ್ನು ಭರ್ತಿ ಮಾಡಬೇಕು. ಹಣ ಕಟ್ಟಬೇಕು. ಇದೀಗ ಹಣ ಮರಳಿಸಿದರೆ ಮತ್ತೂಂದು ಕಂಪನಿಗೆ ಮೊದಲಿನಿಂದ ಮತ್ತೆ ಸರತಿ ಸಾಲಿನಲ್ಲಿ ನಿಲ್ಲಬೇಕು.ಅಷ್ಟೇಯಲ್ಲ, ಈ ಮುಂಚಿನ ಕಂಪನಿಯ ಒಂದಿಷ್ಟು ಪೈಪ್ ಗಳನ್ನು ಅವಿಭಕ್ತ ಕುಟುಂಬಗಳು ಪಡೆದುಕೊಂಡಿದ್ದರೆ, ಇನ್ನೊಂದು ಕಂಪನಿಯ ಸೈಜ್‌ಗಳು ಈ ಪೈಪ್ ಗಳೊಂದಿಗೆ ಹೊಂದಾಣಿಕೆಯಾಗುವುದಿಲ್ಲ.
ಒಳ ಒಪ್ಪಂದದ ಅನುಮಾನ
ಸರ್ಕಾರ, ರೈತರು ಮತ್ತು ಪೈಪ್ ಪೂರೈಕೆ ಕಂಪನಿ ಇಲ್ಲಿ ತ್ರಿಕೋನ ರೂಪದಲ್ಲಿದ್ದು, ಪರಸ್ಪರ ಕೊಡುಕೊಳ್ಳುವಿಕೆ ಹೊಂದಾಣಿಕೆ ಅಗತ್ಯವಿರುತ್ತದೆ. ಆದರೆ ಸರ್ಕಾರ ಮೊದಲೇ ಕಂಪನಿಯ ವ್ಯವಹಾರ ಕುರಿತು ಸರಿಯಾಗಿ ಒಪ್ಪಂದ ಮಾಡಿಕೊಂಡು ರೈತರಿಂದ ವಂತಿಗೆ ತುಂಬಿಸಿಕೊಳ್ಳಬೇಕು. ಅದನ್ನು ಬಿಟ್ಟು ಮೊದಲು ರೈತರಿಂದ ವಂತಿಗೆ ಪಡೆದುಕೊಂಡು ನಂತರ ನಿಮ್ಮ ಹಣ ಮರಳಿ ತೆಗೆದುಕೊಳ್ಳಿ ಎಂದು ಹೇಳುವುದನ್ನು ನೋಡಿದರೆ ಸರ್ಕಾರ ಮತ್ತು ಕಂಪನಿ ಮಧ್ಯೆ ಏನೇನೋ ಒಳಒಪ್ಪಂದಗಳು ಏರ್ಪಟ್ಟಿವೆ ಎನ್ನುವ ಅನುಮಾನ ಬರುತ್ತಿದೆ ಎನ್ನುತ್ತಿದ್ದಾರೆ ರೈತ ಮುಖಂಡರು..
– ಬಸವರಾಜ ಹೊಂಗಲ್