Advertisement

ಆನೆಕೆರೆ, ದಾನಶಾಲೆ ರಸ್ತೆಯಲ್ಲಿ ನಿತ್ಯ ಧೂಳಿನ ಮಜ್ಜನ

05:29 PM Dec 15, 2021 | Team Udayavani |

ಕಾರ್ಕಳ: ನಗರದ ಆನೆಕೆರೆ-ದಾನ ಶಾಲೆ ಪರಿಸರದಲ್ಲಿ ಕಾಮಗಾರಿ ಸಲುವಾಗಿ ಅಗೆದಿದ್ದ ರಸ್ತೆ ಈಗ ಧೂಳುಮಯವಾಗಿದೆ. ಇದರಿಂದಾಗಿ ಪರಿಸರದ ಜನ ಕಂಗೆಟ್ಟು ಹೋಗಿದ್ದಾರೆ.

Advertisement

ನಗರದ ಆನೆಕೆರೆ, ದಾನಶಾಲೆ ಭಾಗದಲ್ಲಿ ಕುಡಿಯುವ ನೀರು ಸರಬರಾಜಿಗೆಂದು ಪೈಪ್‌ ಅಳವಡಿಸುವ ಕಾಮಗಾರಿ ನಡೆದಿತ್ತು. ಬಳಿಕ ಅಲ್ಲಿ ಧೂಳಿನ ಸಮಸ್ಯೆ ಸ್ಥಳೀಯ ನಾಗರಿಕರನ್ನು ಅತೀವವಾಗಿ ಕಾಡುತ್ತಿದೆ. ತಿಂಗಳಿನಿಂದ ಈ ಸಮಸ್ಯೆಯಿದೆ. ದಾನಶಾಲೆ ಜಂಕ್ಷನ್‌ನಲ್ಲಿ ಹೆಚ್ಚು ಸಮಸ್ಯೆ ಕಂಡುಬರುತ್ತಿದೆ.

ಕಾಂಕ್ರೀಟ್‌ ಒಡೆದು ರಸ್ತೆ ಬದಿ ಕಣಿವೆ ನಿರ್ಮಿಸಲಾಗಿದೆ. 350 ಹಾಗೂ 300 ಎಂಎಂ ಗಾತ್ರದ ಪೈಪ್‌ಗ್ಳನ್ನು ಈ ಭಾಗದಲ್ಲಿ ಅಳವಡಿಸಲಾಗಿದೆ. ಒಂದು ವಾಹನ ಹೋದ ಮರುಕ್ಷಣದಲ್ಲೇ ಧೂಳು ಏಳುತ್ತಿರುವುದರಿಂದ ರಸ್ತೆ ಬದಿಗಳ ಅಂಗಡಿ, ಮನೆಗಳ ನಿವಾಸಿಗಳು ಧೂಳು ಸೇವಿಸುವಂತಾಗಿದೆ.

ಆನೆಕೆರೆ-ದಾನಶಾಲೆ ಮಾರ್ಗವಾಗಿ ತೆರಳುವ ಆನೆಕೆರೆ ಜಂಕ್ಷನ್‌ನ ಸಹಿತ ಇನ್ನಿತರ ಕಡೆ ಅಂಗಡಿ ವ್ಯಾಪಾರ ವಹಿವಾಟು ನಡೆಸುತ್ತಿರುವವರೆಲ್ಲರೂ ರಸ್ತೆ ಬದಿಯ ಧೂಳು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ಇಲ್ಲಿನ ನಿವಾ ಸಿ ಗಳ ಮನೆಯ ಕಿಟಕಿ, ಬಾಗಿಲುಗಳ ಮೂಲಕ ಧೂಳು ಒಳಹೊಕ್ಕು ಸಮಸ್ಯೆ ಸೃಷ್ಟಿಸುತ್ತಿದೆ. ಬಿಸಿಲ ತಾಪ ಹೆಚ್ಚಿದಂತೆ ಸಮಸ್ಯೆ ಹಿರಿದಾಗುತ್ತದೆ.

ವ್ಯಾಪಾರಿಗಳು, ಪರಿಸರದ ನಿವಾಸಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೋಗಬೇಕಿದೆ. ಧೂಳಿನಿಂದ ಅಲರ್ಜಿ, ಕೆಮ್ಮು, ಶೀತ ಇನ್ನಿತರ ಸಮಸ್ಯೆಗಳು ಕಾಣಬರುತ್ತಿದ್ದು. ಆಸ್ಪತ್ರೆ ಬಾಗಿಲು ತಟ್ಟುತ್ತಿದ್ದಾರೆ. ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಹೆಚ್ಚಾಗಿ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ರೋಗದ ಆತಂಕ ಜನರನ್ನು ಕಾಡುತ್ತಿದೆ.
ಧೂಳು ಎದ್ದಾಗಲೆಲ್ಲ ನೀರು ಹಾಯಿಸುವುದೇ ನಿತ್ಯದ ಕೆಲಸ ಎನ್ನುವಂತಾಗಿದೆ. ರಸ್ತೆ ಬದಿ ತೆರಳುವವರು ಕೂಡ ಧೂಳಿನ ಸಮಸ್ಯೆಗೆ ಒಳಗಾಗಿ ರೋಗಗಳನ್ನು ತಂದುಕೊಳ್ಳುತ್ತಿದ್ದಾರೆ. ಪರಿಸರದ ಮನೆಗಳು ಧೂಳಿನಿಂದ ಕೆಂಬಣ್ಣಕ್ಕೆ ತಿರುಗಿದೆ.

Advertisement

2019-20ನೇ ಸಾಲಿನಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ಕರ್ನಾಟಕ ಸರಕಾರ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಯೋಜನೆಯಡಿ ಕುಡಿಯುವ ನೀರು ಸರಬರಾಜು ಈ ಕಾಮಗಾರಿ ಈ ಭಾಗದಲ್ಲಿ ನಡೆಸಲಾಗಿತ್ತು.

ವಾಹನ ದಟ್ಟಣೆ ಹೆಚ್ಚು
ಕಾರ್ಕಳ ನಗರಕ್ಕೆ ಮಂಗಳೂರು ಹಾಗೂ ಬೆಳ್ತಂಗಡಿ ಭಾಗಗಳಿಂದ ದಾನಶಾಲೆ- ಆನೆಕೆರೆ ರಸ್ತೆಯ ಮೂಲಕ ಸಹಸ್ರಾರು ವಾಹನಗಳು ಸಂಚಾರ ಬೆಳೆಸುತ್ತವೆ. ಇದರಿಂದ ಮತ್ತಷ್ಟೂ ಧೂಳು ಎದ್ದು ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಸ್ಥಳಿಯರು ಹೇಳುತ್ತಿದ್ದು, ಸಮಸ್ಯೆಯ ಬಗ್ಗೆ ಪುರಸಭೆ ಗಮನಕ್ಕೆ ತರಲಾಗಿದೆ. ಆದಷ್ಟೂ ಬೇಗ ಸರಿ ಪ ಡಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗಮನಕ್ಕೆ ತರುವೆ
ಧೂಳಿನಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಕುಡಿಯುವ ನೀರು ಮಂಡಳಿಯ ಒಳಚರಂಡಿ, ನೀರು ಸರಬರಾಜು ಮಂಡಳಿಯ ಎಂಜಿನಿಯರ್‌ ಗಮನಕ್ಕೆ ತರಲಾಗುವುದು.
-ರೂಪಾ ಟಿ. ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ ಕಾರ್ಕಳ

ಡಾಮರು ಹಾಕಿ ಕೊಡುತ್ತೇವೆ
ಕಾರ್ಕಳ ಉತ್ಸವ ನಡೆಯಲಿದೆ ಎನ್ನುವ ಕಾರಣದಿಂದ ಸ್ವಲ್ಪ ದಿನ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದೆವು. ಇದೀಗ ಉತ್ಸವ ಮುಂದೂಡಿಕೆ ಆಗಿರುವುದರಿಂದ ಮತ್ತೆ ಕಾಮಗಾರಿ ಆರಂಭಿಸುತ್ತೇವೆ. ಮುಖ್ಯವಾಗಿ ದಾನಶಾಲೆ ಜಂಕ್ಷನ್‌ನಲ್ಲಿ ಧೂಳಿನ ಸಮಸ್ಯೆ ಹೆಚ್ಚು ಇರುವುದರಿಂದ ಇಲ್ಲಿ ಡಾಮರು ಕಾಮಗಾರಿಗೊಳಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಲಾಗುವುದು.
– ರಕ್ಷಿತ್‌, ಎಂಜಿನಿಯರ್‌ ಒಳಚರಂಡಿ, ನೀರು ಸರಬರಾಜು ಮಂಡಳಿ

Advertisement

Udayavani is now on Telegram. Click here to join our channel and stay updated with the latest news.

Next