ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (ಇಫಿ) ದ ಪ್ರಧಾನ ಧಾರೆ ಭಾರತೀಯ ಪನೋರಮಾ ವಿಭಾಗಕ್ಕೆ ಚಾಲನೆ ಸಿಕ್ಕಿದ್ದು ಸೋಮವಾರ.
ಒಟ್ಟು 23 ಭಾರತೀಯ ಚಲನಚಿತ್ರಗಳ ಪ್ರದರ್ಶನ ಕಥಾ ವಿಭಾಗದಲ್ಲಿ ಪ್ರದರ್ಶನಗೊಂಡರೆ, 20 ಚಿತ್ರಗಳು ಕಥೇತರ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಕನ್ನಡದ ಪೃಥ್ವಿ ಕೊಣನೂರು ನಿರ್ದೇಶನದ ಪಿಂಕಿ ಎಲ್ಲಿ? ಪ್ರದರ್ಶನ ವಿಭಾಗದ ಉದ್ಘಾಟನಾ ದಿನವೇ ಐನಾಕ್ಸ್ 2 ರಲ್ಲಿ ಪ್ರದರ್ಶನವಾಯಿತು.
ಅಂಕಿತ್ ಕೊಥಾರಿಯವರ ‘ಪಂಚಿಕಾ’ ಕಥೇತರ ವಿಭಾಗದ ಉದ್ಘಾಟನಾ ಚಿತ್ರವಾದರೆ, ‘ಸಾಂದ್ ಕಿ ಆಂಖ್’ಕಥಾ ವಿಭಾಗದ ಉದ್ಘಾಟನಾ ಚಿತ್ರ. ಪನೋರಮಾ ವಿಭಾಗದ ಚಿತ್ರ ಪ್ರದರ್ಶನ ಉದ್ಘಾಟನಾ ಸಂದರ್ಭ ಮಾತನಾಡಿದ ಸಾಂದ್ ಕಿ ಆಂಖ್ ಚಿತ್ರ ನಿರ್ದೇಶಕ ತುಷಾರ್ ಹಿರಾನಂದನಿ, ತಮ್ಮ ಮಗಳನ್ನು ಹುರಿದುಂಬಿಸುವ ಸಲುವಾಗಿ ಇಬ್ಬರು ಅಜ್ಜಿಯರು ಸ್ಥಳೀಯ ಶೂಟಿಂಗ್ ತರಬೇತಿ ಗೆ ಸೇರಿ, 352 ಮೆಡಲ್‌ಗಳನ್ನು ಗಳಿಸುವ ಕಥೆ ನನ್ನ ಚಿತ್ರದ್ದು. ಇಡೀ ಚಿತ್ರ ನಿಮಗೆ ಹೊಸ ಅನುಭವವನ್ನೇ ನೀಡುತ್ತದೆ ಎಂದರು.
ಹಾಗೆಯೇ ಪಂಚಿಕಾ ಸಹ ಗುಜರಾತ್‌ನ ರಣ್ ನಲ್ಲಿ ನಡೆಯುವ ಇಬ್ವರು ಪುಟ್ಟ ಮಕ್ಕಳ ನಡುವಿನ ಸ್ನೇಹ ಸಂಬಂಧಗಳು ಹಾಗೂ ಅದರ ಹಿಂದಿನ ಸಮಾಜದ ನೇತ್ಯಾತ್ಮಕ ಛಾಯೆ ಕುರಿತಾದದ್ದು.
ಇದನ್ನೂ ಓದಿ:ಎಪ್ಪತ್ತರ ದಶಕ ಹಿಂದಿ ಚಿತ್ರರಂಗದ ಸುವರ್ಣ ಯುಗ: ಗೋವಾ ಚಿತ್ರೋತ್ಸವದಲ್ಲಿ ರಾಹುಲ್ ರವೇಲ್
ಈ ವಿಭಾಗದಲ್ಲಿ ಹಿಂದಿ, ಅಸ್ಸಾಮಿ, ಕನ್ನಡ, ಮಲಯಾಳಂ, ಮರಾಠಿ, ಬಂಗಾಳಿ, ತಮಿಳು, ತೆಲುಗು, ಸಂಸ್ಕೃತ, ಛತ್ತೀಸ್‌ಗರಿ, ಮಣಿಪುರಿ, ಒರಿಯಾ ಸೇರಿದಂತೆ ಹಲವಾರು ಭಾರತೀಯ ಭಾಷೆಯ ಚಲನಚಿತ್ರಗಳು ಪ್ರದರ್ಶಿತವಾಗುತ್ತಿವೆ.
ಬ್ರಿಡ್ಜ್, ಅವಿಜಾಂತ್ರಿಕ್, ಬ್ರಹ್ಮ ಜಾನೆ ಗೋಪೋನ್ ಕೊಮ್ಮೊಟಿ, ಆ ಡಾಗ್ ಆ್ಯಂಡ್ ಹಿಸ್ ಮ್ಯಾನ್, ಅಪ್ ಅಪ್ ಅಪ್, ಆವರ್ತನ್, ಸಾಂದ್‌ಕ ಆಂಖ್, ಪಿಂಕಿ ಎಲ್ಲಿ?, ಸೇಫ್, ಟ್ರಾನ್ಸ್, ಕೆಟ್ಟಿಯೊಳನು ಎಂತೆ ಮಲಕಾ, ತಹಿರಾ, ಇಗಿ ಕೊನ, ಜೂನ್, ಪ್ರವಾಸ್, ಕರ್ಖಾನಿಸಾಂಚಿ ವಾರಿ, ಕಲಿರಾ ಆಟಿಟ, ನಮೊ, ತಾಯೇನ್ ಹಾಗೂ ಘಟಂ ಚಿತ್ರಗಳಿವೆ. ಇದರೊಂದಿಗೆ ಜನಪ್ರಿಯ ಧಾರೆಯಿಂದ ಅಸುರನ್, ಕಪ್ಪೆಲಾ ಹಾಗೂ ಚಿತ್ ಚೋರ್ ಚಿತ್ರಗಳು ಪ್ರದರ್ಶಿತವಾಗುತ್ತಿವೆ.
ಒಳ್ಳೆಯ ಅಭಿಪ್ರಾಯ
ಸೋಮವಾರ ಪ್ರದರ್ಶನದ ಬಳಿಕ ಚಿತ್ರರಸಿಕರು ‘ಪಿಂಕಿ ಎಲ್ಲಿ’ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಒಳ್ಳೆಯ ಎಳೆಯನ್ನು ಆಧರಿಸಿ ಚೆನ್ನಾಗಿ ಸಿನಿಮಾ ಮಾಡಿದ್ದೀರಿ. ನಟರೂ ಚೆನ್ನಾಗಿ ನಟಿಸಿದ್ದಾರೆ ಎಂದು ಪ್ರೇಕ್ಷಕರು ತಂಡಕ್ಕೆ ತಿಳಿಸಿದರು. ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ ಗುಂಜಾಲಮ್ಮರ ಅಭಿನಯಕ್ಕೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಯಿತು.