Advertisement
ಪ್ರಾಣಿಗಳನ್ನು ತಂಪಾಗಿಡುವ ಕಾರಣದಿಂದ ಪಿಲಿಕುಳದಲ್ಲಿ ಈ ಬಾರಿಯೂ ಹೆಚ್ಚುವರಿ ಫ್ಯಾನ್ ಹಾಗೂ ಪ್ರಾಣಿಗಳಿಗೆ ನಿಗದಿತವಾಗಿ ನೀರು ಚಿಮ್ಮಿಸುವ ಕಾರ್ಯ ನಡೆಯುತ್ತಿದೆ. ವಿಶೇಷವಾಗಿ ಹುಲಿ, ಸಿಂಹ, ಚಿರತೆ, ಕರಡಿ ಸೇರಿದಂತೆ ದೊಡ್ಡ ಪ್ರಾಣಿಗಳು ಸೆಕೆಯಿಂದ ಸಾಮಾನ್ಯವಾಗಿ ಸಮಸ್ಯೆ ಎದುರಿಸುತ್ತದೆ. ಹೀಗಾಗಿ ಅವುಗಳಿಗೆ ವಿಶೇಷ ನೆಲೆಯಲ್ಲಿ ನೀರು ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಕುಡಿಯಲು ನೀರು ಸಮರ್ಪಕವಾಗಿ ಸಿಗುವ ಜತೆಗೆ, ಪ್ರಾಣಿಗಳು ಸುತ್ತಾಡುವ ಪ್ರದೇಶದಲ್ಲಿ ನೀರು ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಅದರಲ್ಲಿಯೂ ಪ್ರಾಣಿಗಳನ್ನು ಇರಿಸಲಾಗಿರುವ ಗೂಡಿನ ಹೊರಭಾಗದಲ್ಲಿ ಫ್ಯಾನ್ ಸೌಕರ್ಯವನ್ನು ಮಾಡಿಸಲಾಗಿದೆ. ಈ ಹಿಂದೆ ಫ್ಯಾನ್ ಸೌಕರ್ಯ ಮಾಡಲಾಗಿತ್ತಾದರೂ, ಮಾರ್ಚ್, ಎಪ್ರಿಲ್, ಮೇ ನ ಸೆಕೆಗೆ ಹೆಚ್ಚುವರಿಯಾಗಿ ಸುಮಾರು 10ರಷ್ಟು ಫ್ಯಾನ್‌ಗಳನ್ನು ಪ್ರಾಣಿಗಳ ಗೂಡಿನ ಬಳಿಯಲ್ಲಿ ಅಳವಡಿಸಲಾಗಿದೆ. ಸೆಕೆ ಹೆಚ್ಚಿರುವ ಸಮಯದಲ್ಲಿ ಪೈಪ್ ಗಳ ಮೂಲಕ ಪ್ರಾಣಿಗಳ ಮೈಮೇಲೆ ನೀರು ಚಿಮ್ಮಿಸಲಾಗುತ್ತಿದೆ. ಮಧ್ಯಾಹ್ನ ಸುಮಾರು 2-3 ಬಾರಿ ಇದನ್ನು ನಿಯಮಿತವಾಗಿ ಮಾಡಲಾಗುತ್ತಿದೆ. ಆರಂಭದಲ್ಲಿ ಪ್ರಾಣಿಗಳು ಇದಕ್ಕೆ ಹೆದರಿಕೊಂಡು ಪ್ರತಿರೋಧ ವ್ಯಕ್ತಪಡಿಸಿದರೂ ಬಳಿಕ ತಂಪಾಗಿ ನೀರಿಗೆ ಮೈಯೊಡ್ಡುತ್ತವೆ. ವಿಶೇಷವೆಂದರೆ, ಉದ್ಯಾನ ವನದಲ್ಲಿ ಪ್ರಾಣಿಗಳು ಓಡಾಡುವ ಸ್ಥಳದ ಮೇಲ್ಭಾಗದಲ್ಲಿ ನೀರಿಗಾಗಿ ಸ್ಪ್ರಿಂಕ್ಲ ರ್‌ಗಳನ್ನು ಅಳವಡಿಸಲಾಗಿದೆ.
ಪಿಲಿಕುಳ ಮೃಗಾಲಯದ ಪರಿಸರದಲ್ಲಿ ಹೇರಳವಾಗಿ ಗಿಡ- ಮರಗಳಿದ್ದರೂ ಬಿಸಿಲಿನ ತಾಪ ಕಡಿಮೆ ಇಲ್ಲ. ಹಾಗಾಗಿ ಹೆಚ್ಚಿನ ಪ್ರಮಾಣದ ಕುಡಿಯುವ ನೀರು ಪ್ರಾಣಿಗಳಿಗೆ ಅಗತ್ಯವಿದೆ. ಸುಮಾರು 150 ಎಕ್ರೆಯಲ್ಲಿ ಹರಡಿಕೊಂಡ ಉದ್ಯಾನವನದಲ್ಲಿ 98 ಪ್ರಭೇದಗಳ ಸಾವಿರಕ್ಕೂ ಅಧಿಕ ಪ್ರಾಣಿ- ಪಕ್ಷಿಗಳಿವೆ. ಅತಿ ಹೆಚ್ಚಿನ ಹುಲಿಗಳನ್ನು ಹೊಂದಿರುವ ಮೃಗಾಲಯ ಎಂಬ ಮಾನ್ಯತೆಯೂ ಪಿಲಿಕುಳಕ್ಕಿದೆ. ಸದ್ಯ ಪಿಲಿಕುಳಕ್ಕೆ ಫಲ್ಗುಣಿ ನದಿಯಿಂದ 25 ಎಚ್‌ಪಿ ಪಂಪ್‌ಸೆಟ್ ಮೂಲಕ ನೀರೆತ್ತಲಾಗುತ್ತದೆ. ಅದನ್ನು ಪಿಲಿಕುಳದ 4 ಓವರ್‌ಲೋಡ್ ಟ್ಯಾಂಕ್ ಗೆ ತುಂಬಿಸಿ ಅಲ್ಲಿಂದ ಪಿಲಿಕುಳಕ್ಕೆ ಸರಬರಾಜು ಮಾಡಲಾಗುತ್ತಿದೆ. ಜತೆಗೆ ಪಿಲಿಕುಳದಲ್ಲಿ 5 ಬೋರ್‌ವೆಲ್‌ನಿಂದ ನೀರೆತ್ತಲಾಗುತ್ತದೆ.
Related Articles
ವಿಪರೀತ ಸೆಕೆಯಿಂದ ಪ್ರಾಣಿ- ಪಕ್ಷಿಗಳ ಸೆಕೆ ನಿಯಂತ್ರಣಕ್ಕೆ ಪಿಲಿಕುಳದಲ್ಲಿ ಕ್ರಮಕೈಗೊಳ್ಳಲಾಗಿದೆ. ಫ್ಯಾನ್, ನೀರು ಚಿಮ್ಮಿಸುವ ಮೂಲಕ ವಾತಾವರಣವನ್ನು ತಂಪಾಗಿಸಲು ಪ್ರಯತ್ನಿಸಲಾಗುತ್ತಿದೆ. ಜತೆಗೆ, ಅಲ್ಲಲ್ಲಿ ನೀರಿನ ಕೊಳ, ಟ್ಯಾಂಕ್ ಗಳನ್ನೂ ಅಳವಡಿಸಲಾಗಿದೆ.
– ಎಚ್. ಜಯಪ್ರಕಾಶ್ ಭಂಡಾರಿ, ನಿರ್ದೇಶಕರು,
ಪಿಲಿಕುಳ ಜೈವಿಕ ಉದ್ಯಾನವನ.
Advertisement
ದಿನೇಶ್ ಇರಾ