Advertisement

Biological Park: ಪಿಲಿಕುಳಕ್ಕೆ ಪೆಂಗ್ವಿನ್‌, ಅನಕೊಂಡ ತರಿಸುವ ಮಹತ್ವದ ನಿರ್ಧಾರ

01:13 AM Sep 18, 2024 | Team Udayavani |

ಮಂಗಳೂರು: ಪ್ರಾಣಿಗಳ ವಿನಿಮಯ ಯೋಜನೆಯಡಿ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಮುಂಬಯಿಯ ಬೈಕುಲಾ ಮೃಗಾಲಯದಿಂದ ದಕ್ಷಿಣ ಅಮೆರಿಕ ಮೂಲದ “ಪೆಂಗ್ವಿನ್‌’ ಪಕ್ಷಿಯನ್ನು ತರಿಸುವ ಮಹತ್ವದ ನಿರ್ಧಾರವೊಂದು ಕೈಗೊಳ್ಳಲಾಗಿದೆ. ಇದಕ್ಕೆ ಬದಲಾಗಿ ಪಿಲಿಕುಳದಿಂದ “ಮಾರ್ಶ್‌ ಮೊಸಳೆ’ಯನ್ನು ಬೈಕುಲಾಕ್ಕೆ ನೀಡಲಾಗುತ್ತದೆ.

Advertisement

ಸಾಮಾನ್ಯವಾಗಿ ತಂಪಾದ, ಹಿಮಚ್ಛಾದಿತ ವಾತಾವರಣವಿರುವ ದಕ್ಷಿಣಾರ್ಧ ಗೋಲದಲ್ಲಿ, ವಿಶೇಷವಾಗಿ ಅಂಟಾರ್ಟಿಕಾದಲ್ಲಿ ಪೆಂಗ್ವಿನ್‌ಗಳು ಹೆಚ್ಚಾಗಿ ಕಂಡು ಬರುತ್ತದೆ. ಇದು ನೀರು ಮತ್ತು ಭೂಮಿ ಎರಡರಲ್ಲೂ ವಾಸಿಸುತ್ತವೆ. ಪಿಲಿಕುಳದಲ್ಲಿ ಪೆಂಗ್ವಿನ್‌ಗಳಿಗೆ ಪೂರಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ದಾನಿಗಳು ಅಥವಾ ಸಿಎಸ್‌ಆರ್‌ ನೆರವಿನಿಂದ, ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಮೃಗಾಲಯ ವೀಕ್ಷಣೆಗೆ ಆಗಮಿಸುವ ವೀಕ್ಷಕರ, ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಲಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್‌.ಜೆ. ಭಂಡಾರಿ ತಿಳಿಸಿದ್ದಾರೆ.

ಚೆನ್ನೈಯಿಂದ ಹಳದಿ ಅನಕೊಂಡ
ಚೆನ್ನೈಯ ಕ್ರೊಕೊಡೈಲ್‌ ಬ್ಯಾಂಕ್‌ನಿಂದ ಹಳದಿ ಅನಕೊಂಡ ಉರಗಗಳನ್ನು ತರಿಸಲಾಗುತ್ತಿದ್ದು, ಇದಕ್ಕೆ ಬದಲಾಗಿ ಸರ್ಪ ಮತ್ತು ವಿಷಕಾರಿ ಹಾವುಗಳನ್ನು ಪಿಲಿಕುಳದಿಂದ ಅಲ್ಲಿಗೆ ನೀಡಲಾಗುತ್ತದೆ.

ಇತರ ಪ್ರಾಣಿಗಳ ವಿನಿಮಯ
ಒಡಿಶಾದ ನಂದನ್‌ ಕಾನನ್‌ ಮೃಗಾಲಯದಿಂದ ಗಂಡು ಏಷ್ಯಾಟಿಕ್‌ ಸಿಂಹ, ಅಳಿವಿನಂಚಿನಲ್ಲಿರುವ ತೋಳ, ಘರಿಯಾಲ್‌ ಮೊಸಳೆ, ಅಪರೂಪದ ಪಕ್ಷಿಗಳು ಆಗಮಿಸಲಿವೆ. ಪಿಲಿಕುಳದಿಂದ ಹೆಚ್ಚುವರಿ ಪ್ರಾಣಿಗಳಾದ ಧೋಳ (ಕಾಡು ನಾಯಿ), ರೆಟಿಕ್ಯುಲೇಟೆಡ್‌, ಹೆಬ್ಟಾವು, ಮರಬೆಕ್ಕು, ಬಿಳಿ ಗರುಡ ಮೊದಲಾದವುಗಳನ್ನು ನೀಡಲಾಗುತ್ತದೆ. ಪಂಜಾಬ್‌ನ ಮಹೇಂದ್ರ ಚೌದರಿ ಮೃಗಾಲಯದಿಂದ ಅಳಿವಿನಂಚಿನಲ್ಲಿರುವ ತೋಳಗಳು, ಘರಿಯಾಲ್‌ ಮೊಸಳೆ, ಅಪರೂಪದ ಪಕ್ಷಿಗಳು ಬರಲಿವೆ.

ಬದಲಿಗೆ ಹೆಚ್ಚುವರಿ ಪ್ರಾಣಿಗಳಾದ ಧೋಳ, ರೆಟಿಕ್ಯುಲೇಟೆಡ್‌, ಹೆಬ್ಟಾವು, ಮುಸಕೋವಿ ಬಾತುಕೋಳೆ ಹಾಗೂ ಹೈನಾ(ಕತ್ತೆ ಕಿರುಬ)ಗಳನ್ನು ನೀಡಲಾಗುತ್ತದೆ. ತಮಿಳುನಾಡಿನ ವಂಡಲೂರಿನಿಂದ ಅಳಿವಿನಂಚಿನಲ್ಲಿರುವ ತೋಳಗಳು ಹಾಗೂ ಅಪರೂಪದ ಪಕ್ಷಿಗಳನ್ನು ತಂದು ಅಲ್ಲಿಗೆ ಕಾಳಿಂಗ ಸರ್ಪ ಮತ್ತು ಹೈನಾ ನೀಡಲಾಗುವುದು. ಆಂಧ್ರದ ತಿರುಪತಿ ಮೃಗಾಲಯದಿಂದ ಅಪರೂಪದ ಪಕ್ಷಿಗಳನ್ನು ತರಿಸಿ, ಅಲ್ಲಿಗೆ ಮರಬೆಕ್ಕನ್ನು ನೀಡಲಾಗುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next