Advertisement

Kushtagi: ಸಾಕುದಾರರಿಗೆ ಬೆದರಿಸಿ, ಖಾರದ ಪುಡಿ ಎರಚಿ, ಕೈ-ಕಾಲು ಕಟ್ಟಿ 30 ಹಂದಿಗಳ ಕಳವು

11:44 AM Jan 09, 2024 | Team Udayavani |

ಕುಷ್ಟಗಿ: ತಾಲೂಕಿನ ವಣಗೇರಾ ಗ್ರಾಮದ ಹಂದಿ ಸಾಕಾಣಿಕ‌ ಘಟಕದಲ್ಲಿ ದುಷ್ಕರ್ಮಿಗಳು ಸಾಕಾಣಿಕದಾರನಿಗೆ ಚಾಕು ತೋರಿಸಿ, ಖಾರದ ಪುಡಿ ಎರಚಿ, ಕೈ ಕಾಲು ಕಟ್ಟಿ ಹಾಕಿ 30 ಹಂದಿಗಳನ್ನು ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ವಣಗೇರಾ ಗ್ರಾಮದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸ್ಥಳದಲ್ಲಿ ರವಿಕುಮಾರ ಭಜಂತ್ರಿ ಅವರಿಗೆ ಸೇರಿದ ಹಂದಿ‌ ಸಾಕಾಣಿಕ‌ ಘಟಕದಲ್ಲಿ 31 ಮಾಂಸದ ಹಂದಿ ಸಾಕಿ ಸ್ವ ಉದ್ಯೋಗ ಆರಂಭಿಸಿದ್ದರು.

ಕಳೆದ ರವಿವಾರ ರಾತ್ರಿ ನಾಲ್ಕೈದು ಜನ ದುಷ್ಕರ್ಮಿಗಳು, ಸಾಕಾಣಿಕ ಘಟಕದಲ್ಲಿ ಮಲಗಿದ್ದ ರವಿಕುಮಾರ ಭಜಂತ್ರಿ ಹಾಗೂ ಅವರ ಸಂಬಂದಿಕರಿಗೆ ಚಾಕು ತೋರಿಸಿ  ಕೊಲೆ‌ ಮಾಡುವುದಾಗಿ ಬೆದರಿಸಿದ್ದಾರೆ.

‌ಇಬ್ಬರ ಕಣ್ಣಿಗೂ ಖಾರಪುಡಿ ಎರಚಿ ಹಗ್ಗದಿಂದ ಕಟ್ಟಿಹಾಕಿ ಕೂಡಿ ಹಾಕಿದ್ದಾರೆ.  ನಂತರ ಗಾಯಾವಾಗಿದ್ದ ಒಂದು ಹಂದಿಯನ್ನು ಮಾತ್ರ ಬಿಟ್ಟು ಉಳಿದ 30 ಹಂದಿಗಳನ್ನು ಒಂದೊಂದೆ ವಾಹನದಲ್ಲಿ ತರಾತುರಿಯಲ್ಲಿ ಹೇರಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಾಕು ಹಂದಿಗಳ‌ ಮೌಲ್ಯ 6 ರಿಂದ 7 ಲಕ್ಷ ರೂ. ಎಂದು ‌ಅಂದಾಜಿಸಲಾಗಿದೆ.

ದುಷ್ಕರ್ಮಿಗಳು ಹಂದಿಗಳನ್ನು ಕಳವು ಮಾಡುವ ಮುನ್ನ ಅಲ್ಲಿದ್ದ ನಾಯಿಗಳು ಬೊಗಳದಂತೆ ಮಾಂಸದ ಆಸೆ ತೋರಿಸಿ ಕಳ್ಳತನಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.

Advertisement

ಬೆಳಗ್ಗೆ ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಹೆಚ್ಚುವರಿ‌ ಎಸ್ಪಿ ಹೇಮಂತ್, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ಸಿಪಿಐ ಯಶವಂತ ಬಿಸನಳ್ಳಿ,  ಪಿಎಸೈ ಮುದ್ದುರಂಗಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇವರು ವೃತ್ತಿ ನಿರತ ಹಂದಿ ಕಳ್ಳರಾಗಿರುವುದಾಗಿ ಶಂಕಿಸಲಾಗಿದೆ. ಇಂತಹುದೇ ಪ್ರಕರಣ ಕೊಪ್ಪಳ ಜಿಲ್ಲೆಯ ಹುಣಸಿಹಾಳ‌ದಲ್ಲಿ ನಡೆದಿತ್ತು.

ವಣಗೇರಾ ಹಂದಿ ಕಳವು  ಪ್ರಕರಣದ ಬೆನ್ನಲ್ಲೇ  ಹೆದ್ದಾರಿ ಟೋಲ್ ಗಳ‌ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿದೆ. ಚಾಲಾಕಿ ಕಳ್ಳರು ಟೋಲ್ ಮೂಲಕ ಸಾಗದೇ ಟೋಲ್ ತಪ್ಪಿಸಿ  ಹೋಗಿರಬಹುದು ಎನ್ನಲಾಗುತ್ತಿದೆ. ಕುಷ್ಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂದಿ ಕಳ್ಳರ ಪತ್ತೆಗೆ ಕ್ರಮ‌ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next