ಚಿಂಚೋಳಿ: ಪ್ರತಿಯೊಬ್ಬರಿಗೂ ದೈಹಿಕ ವ್ಯಾಯಾಮ ಮತ್ತು ಮಾನಸಿಕ ಆರೋಗ್ಯ ಮುಖ್ಯವಾಗಿದ್ದು, ಜೀವನಶೈಲಿ ಬದಲಾದರೂ ಊಟ ಮತ್ತು ನಿದ್ರೆ ಅವಶ್ಯವಾಗಿದೆ ಎಂದು ಮಾನಸಿಕ ಆರೋಗ್ಯ ತಜ್ಞೆ ಡಾ| ಸುಧಾರಾಣಿ ಹೇಳಿದರು.
ತಾಪಂ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಆರೋಗ್ಯ ಇಲಾಖೆ, ತಾಪಂ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
2015-16 ಸಾಲಿನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ ಪ್ರಕಾರ ಶೇ. 10ರಷ್ಟು ಜನರು ಮಾನಸಿಕ ಕಾಯಿಲೆಗೆ ಒಳಗಾಗಿದ್ದಾರೆ. ಪ್ರತಿ 100 ಜನ ಮಾನಸಿಕ ರೋಗಿಗಳಲ್ಲಿ ಕೇವಲ 15 ಜನ ಮಾತ್ರ ಚಿಕಿತ್ಸೆ ಪಡೆಯುತ್ತಾರೆ. ಇನ್ನುಳಿದ ಜನ ಹಲವಾರು ಕಾರಣಗಳಿಂದ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ ಎಂದರು.
ಕಲಬುರಗಿ ಆಸ್ಪತ್ರೆಯ ಮನರೋಗ ತಜ್ಞ ಡಾ| ಇರ್ಫಾನ್ ಮಾತನಾಡಿ, ಮದ್ಯಪಾನ ಸೇವಿಸುವುದು. ಇದರಿಂದ ನಶೆಯಾಗುವುದು ಅತಿದೊಡ್ಡ ಮಾನಸಿಕ ರೋಗವಾಗಿದೆ. ಕೋವಿಡ್ ಹೆಚ್ಚಾದಂತೆ ಜನರಲ್ಲಿ ಓಸಿಡಿ ಬಹಳಷ್ಟು ಹೆಚ್ಚಾಗುತ್ತಿದೆ. ಗಂಭೀರ ಸ್ವರೂಪದ ಮಾನಸಿಕ ಕಾಯಿಲೆಗಳೆಂದರೆ ವಿಚಿತ್ರ ವರ್ತನೆ, ಮಂಕಾಗುವುದು, ಅತಿ ದುಃಖ, ಅತಿ ಸಂಶಯ, ಆತ್ಮಹತ್ಯೆ ಆಲೋಚನೆ, ಅತಿ ಸಂತೋಷ ಮತ್ತು ಜಂಬ ಕೊಚ್ಚಿಕೊಳ್ಳುವುದು, ಬೇರೆಯವರಿಗೆ ಕಾಣಿಸದ, ಕೇಳಿಸದ ದೃಶ್ಯ-ಧ್ವನಿಗಳು ಕಾಣಿಸುವುದು ಸೇರಿದಂತೆ ಇನ್ನಿತರ ಕಾರಣಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಮಹ್ಮದ್ ಗಫಾರ್ ಅಹೆಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಜಗದೀಶ್ಚಂದ್ರ ಬುಳ್ಳ, ಡಾ| ಬಾಲಾಜಿ ಪಾಟೀಲ, ಡಾ| ಅಜೀತ್ ಪಾಟೀಲ, ಡಾ| ಸೈಯದ್ ಲತೀಫ್, ಎಪಿಪಿ ಶಾಂತಕುಮಾರ ಜಿ. ಪಾಟೀಲ, ಬಾಬಾಸಾಬ್ ಕಿಣ್ಣಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸುದರ್ಶನ ಬಿರಾದಾರ, ಎಇಇ ಮಹಮ್ಮದ್ ಅಹೆಮದ್ ಹುಸೇನ, ಪ್ರಕಾಶ ಕುಲಕರ್ಣಿ, ಪಿಡಿಒ ಮತ್ತು ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು. ಡಾ| ಸಂತೋಷಮ್ಮ ಸ್ವಾಗತಿಸಿದರು, ಡಾ| ಜಗದೀಶಚಂದ್ರ ಬುಳ್ಳ ವಂದಿಸಿದರು.