ಹೊಸದಿಲ್ಲಿ: ಪಾಟ್ನಾದಲ್ಲಿ ಶುಕ್ರವಾರ ನಡೆಯುತ್ತಿರುವ ಪ್ರತಿಪಕ್ಷ ನಾಯಕರ ಸಭೆಯನ್ನು “ಫೋಟೋ ಸೆಷನ್” ಎಂದು ಕರೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಒಗ್ಗಟ್ಟು ಬಹುತೇಕ ಅಸಾಧ್ಯ ಮತ್ತು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅವರು ಸೋಲನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಜಮ್ಮುವಿನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ”ರಾಹುಲ್ ಬಾಬಾಗೆ ಎಲ್ಲವನ್ನೂ ಟೀಕಿಸುವ ಅಭ್ಯಾಸವಿದೆ. ಅದು 370 ನೇ ವಿಧಿ ರದ್ದತಿ, ರಾಮಮಂದಿರ ನಿರ್ಮಾಣ ಅಥವಾ ತ್ರಿವಳಿ ತಲಾಖ್ ನಿಷೇಧದ ಬಗ್ಗೆಯೂ ಟೀಕೆ ಮಾಡುತ್ತಾರೆ” ಎಂದರು.
ಬಿಹಾರದ ರಾಜಧಾನಿಯಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಯನ್ನು ಉಲ್ಲೇಖಿಸಿ, “ಪಾಟ್ನಾದಲ್ಲಿ ಫೋಟೋ ಸೆಷನ್ ನಡೆಯುತ್ತಿದೆ. 2024 ರಲ್ಲಿ ಬಿಜೆಪಿ,ಎನ್‌ಡಿಎ ಮತ್ತು ಮೋದಿಗೆ ಸವಾಲು ಹಾಕುತ್ತೇವೆ ಎಂಬ ಸಂದೇಶವನ್ನು ರವಾನಿಸಲು ಎಲ್ಲಾ ವಿರೋಧ ಪಕ್ಷದ ನಾಯಕರು ಒಂದೇ ವೇದಿಕೆಯಲ್ಲಿ ಒಗ್ಗೂಡಿದ್ದಾರೆ. ಈ ವಿರೋಧ ಪಕ್ಷದ ನಾಯಕರಿಗೆ ನಾನು ಹೇಳಲು ಬಯಸುತ್ತೇನೆ ನಿಮ್ಮ ಒಗ್ಗಟ್ಟು ಬಹುತೇಕ ಅಸಾಧ್ಯವಾಗಿದೆ ಮತ್ತು ಅದು ನಿಜವಾಗಿದ್ದರೂ ಸಹ, 2024 ರಲ್ಲಿ ದಯವಿಟ್ಟು ಜನರ ಮುಂದೆ ಬನ್ನಿ, 300 ಪ್ಲಸ್ ಸ್ಥಾನಗಳೊಂದಿಗೆ ಮೋದಿ ಮರಳುವುದು ಖಚಿತವಾಗಿದೆ” ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯನ್ನು ಉಲ್ಲೇಖಿಸಿ “ವಿಶೇಷವಾಗಿ ಬಾಹ್ಯಾಕಾಶ, ರಕ್ಷಣೆ ಮತ್ತು ಅರೆವಾಹಕ ಕ್ಷೇತ್ರದಲ್ಲಿ ಬಹಳಷ್ಟು ಒಪ್ಪಂದಗಳು ನಡೆಯುತ್ತಿವೆ. ವಿಶ್ವದ ದೊಡ್ಡ ಕಂಪನಿಗಳು ಈಗ ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿವೆ.ಒಂಬತ್ತು ವರ್ಷಗಳ ಅವಧಿಯಲ್ಲಿ ಮೋದಿ ಅವರು ಭಾರತವನ್ನು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಿದ್ದಾರೆ, ಅದು ಮೊದಲು 11 ನೇ ಸ್ಥಾನದಲ್ಲಿತ್ತು ಎಂದು ಪ್ರತಿಪಾದಿಸಿದರು.