ರಾಮದುರ್ಗ: ಜಾನಪದ ಕಲೆಯಲ್ಲಿ ಉತ್ತಮ ತತ್ವಾದರ್ಶ ಅಡಕವಾಗಿದ್ದು, ಮನಸ್ಸಿಗೆ ಮುದ ನೀಡುವುದರೊಂದಿಗೆ ಒಳ್ಳೆಯ ಭಾವ ತುಂಬುವ ಸಾಹಿತ್ಯವಾಗಿದೆ ಎಂದು ಜಾನಪದ ಕಲಾವಿದ ಜೀವನಸಾಬ ವಾಲಿಕಾರ ಹೇಳಿದರು.
ಮನಿಹಾಳ-ಸುರೇಬಾನದ ಶ್ರೀ ಕವಿರತ್ನ ಕಾಳಿದಾಸ ಯುವಕ ಮಂಡಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಾಂಸ್ಕೃತಿಕ ಲೋಕದ 22ನೇ ವರ್ಷದ ಅಂಗವಾಗಿ ಜಾನಪದ ಸಂಗೀತೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಹಿರಿಯರು ಬಿಟ್ಟುಹೋದ ಅಮೂಲ್ಯ ಆಸ್ತಿ ಜಾನಪದ ಸಾಹಿತ್ಯ. ಆಧುನಿಕ ಕಾಲಘಟ್ಟದಲ್ಲಿ ಜಾನಪದ ಕಲೆ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ. ಜಾನಪದ ಉಳಿದರೆ ಕನ್ನಡ ಭಾಷೆ ಉಳಿಯುತ್ತದೆ. ಕನ್ನಡ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದರು.
ಸುರೇಬಾನ ಪಿಎಚ್‌ಸಿ ಕೇಂದ್ರದ ಆರೋಗ್ಯಾಧಿಕಾರಿ ಡಾ| ರಾಜೇಂದ್ರ ಕಿಲಬನೂರ ಮಾತನಾಡಿ, ಜಾನಪದ ಸಾಹಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ, ಆರೋಗ್ಯಕರವಾದ ವಾತಾವರಣ ಸೃಷ್ಟಿಯಾಗುತ್ತದೆ ಎಂದರು. ಸುರೇಬಾನ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಈರಣ್ಣ ಬಟಕುರ್ಕಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕವಿರತ್ನ ಕಾಳಿದಾಸ ಪ್ರಶಸ್ತಿಯನ್ನು ಸಮಾಜ ಸೇವಕ ಚಿಕ್ಕರೇವಣ್ಣ, ಆರೋಗ್ಯ ಇಲಾಖೆಯ ಡಾ| ರಾಜೇಂದ್ರ ಕಿಲಬನೂರ, ಪತ್ರಕರ್ತ ಶಿವರಡ್ಡಿ ಜಗಾಪೂರ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಿದ್ದಣ್ಣ ದುರಗುಂಡಿ, ಮೂಡಲಗಿ ತಾಲೂಕಿನ ಮುನ್ಯಾಳದ ಗಾಯಕಿ ಕುಮಾರಿ ಐಶ್ವರ್ಯ ತಳವಾರ ಅವರಿಗೆ ನೀಡಿ ಗೌರವಿಸಲಾಯಿತು. ಸುರೇಬಾನ ಗ್ರಾಪಂ ಅಧ್ಯಕ್ಷೆ ಜಯಶ್ರೀ ಬೆಳಗಂಟಿ, ಮನಿಹಾಳ ಗ್ರಾಪಂ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಗಂಗವ್ವ ಆವೋಜಿ ಅವರನ್ನು ಸನ್ಮಾನಿಸಲಾಯಿತು.
ಶಂಕ್ರಯ್ಯಸ್ವಾಮಿ ಹಿರೇಮಠ, ಸಿದ್ದಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ, ರಮೇಶ ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಪರಪ್ಪ ಜಂಗವಾಡ, ರೂರಲ್ ಸೊಸೈಟಿ ಅಧ್ಯಕ್ಷ ಚಿನ್ನಪ್ಪ ಕಳಸನ್ನವರ, ಎಪಿಎಂಸಿ ಸದಸ್ಯ ಗಿರಿಯಪ್ಪ ಹಣಸಿ, ಮಾರುತಿ ಪ್ಯಾಟಿ, ಪ್ರವೀಣ ಗೊನಬಾಳ ಇತರರು ಇದ್ದರು.
ಧಾರವಾಡದ ರಂಗಾಯಣ ಕಲಾವಿದರಾದ ರಾಘವ್ ಕಮ್ಮಾರ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ. ಕೊಪ್ಪಳ ಜಿಲ್ಲೆಯ ಬಿನ್ನಾಳದ ಜಾನಪದ ಕಲಾವಿದ ಜೀವನಸಾಬ ವಾಲಿಕಾರ ಮತ್ತು ತಂಡದಿಂದ ಜಾನಪದ ಹಾಗೂ ಹಾಸ್ಯ ಕಾರ್ಯಕ್ರಮ ನಡೆಯಿತು. ಆರ್.ಬಿ. ಚಿನಿವಾಲರ ನಿರೂಪಿಸಿದರು. ಪುಷ್ಪಾ ಪಾವಲಿ ಸ್ವಾಗತಿಸಿ, ವಂದಿಸಿದರು.