Advertisement

ತತ್ವಶಾಸ್ತ್ರ ಓದದವ ಉತ್ತಮ ಬರಹಗಾರನಾಗಲಾರ

12:23 PM Mar 23, 2018 | |

ಮೈಸೂರು: ತತ್ವಶಾಸ್ತ್ರ ಹಾಗೂ ಸಾಹಿತ್ಯದ ನಡುವೆ ಪೂರಕವಾದ ಸಂಬಂಧವಿದ್ದು, ಹೀಗಾಗಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡದ ಸಾಹಿತಿ ಉತ್ತಮ ಬರಹಗಾರನಾಗಲು ಸಾಧ್ಯವಿಲ್ಲ ಎಂದು ಕಾದಂಬರಿಕಾರ ಡಾ.ಎಸ್‌.ಎಲ್‌.ಬೈರಪ್ಪ ಹೇಳಿದರು.

Advertisement

ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ಅಧ್ಯಯನ ವಿಭಾಗದಿಂದ ಗುರುವಾರ ಆಯೋಜಿಸಿದ್ದ ಮೈಸೂರು ವಿವಿ ತತ್ವಶಾಸ್ತ್ರ ವಿಭಾಗಕ್ಕೆ 100ರ ಸಂಭ್ರಮ ಹಾಗೂ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ತತ್ವಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಸಂಸ್ಕೃತವನ್ನು ಅರ್ಥಮಾಡಿಕೊಳ್ಳಬೇಕಿದ್ದು, ಸಂಸ್ಕೃತವನ್ನು ತಿಳಿಯದೇ ಭಾರತೀಯ ತತ್ವಶಾಸ್ತ್ರವನ್ನು ಕಲಿಯುವುದು ಅರ್ಥಹೀನವಾಗಲಿದೆ.

ಹೀಗಾಗಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡದ ಸಾಹಿತಿ ದೊಡ್ಡ ಕೃತಿಯನ್ನು ರಚಿಸಲಾರ ಹಾಗೂ ಸಾಹಿತ್ಯವನ್ನು ಓದದ ತತ್ವಶಾಸ್ತ್ರಜ್ಞ ಪರಿಣಾಮಕಾರಿಯಾಗಿ ತತ್ವಶಾಸ್ತ್ರವನ್ನು ಹೇಳಲು ಸಾಧ್ಯವಿಲ್ಲ. ಆದರೆ, ಅದೃಷ್ಟವಶಾತ್‌ ತಾವು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ್ದರ ಪರಿಣಾಮ ಒಳ್ಳೆಯ ಬರಹಗಾರನಾಗಲು ಸಾಧ್ಯವಾಯಿತು ಎಂದರು.

ಸಂಸ್ಕೃತ ಕಲಿಕೆ ನಿರ್ಲಕ್ಷ: ಭಾರತೀಯ ತತ್ವಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಕೇವಲ ಭಾರತೀಯ ಭಾಷೆಗಳ ಮೂಲಕವೇ ಅಧ್ಯಯನ ಮಾಡಬೇಕಿದ್ದು, ಅನೇಕರು ಆಂಗ್ಲ ಭಾಷೆಯಲ್ಲಿ ಭಾರತೀಯ ತತ್ವಶಾಸ್ತ್ರವನ್ನು ಕಲಿಯುತ್ತಿದ್ದಾರೆ.

ಅಲ್ಲದೆ ಸಮಾಜಶಾಸ್ತ್ರ, ಕಾನೂನು ಮತ್ತು ಇನ್ನಿತರ ವಿಷಯಗಳನ್ನು ಕಲಿಯಲು ಸಂಸ್ಕೃತವನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಇದಕ್ಕೂ ಮೊದಲು ಕನ್ನಡವನ್ನು ಕಲಿಯಲು ಮಾತ್ರ ಸಂಸ್ಕೃತವನ್ನು ಬಳಸಲಾಗುತ್ತಿದ್ದು, ಆ ಮೂಲಕ ಸಂಸ್ಕೃತ ಕಲಿಕೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ವಿಷಾದಿಸಿದರು.

Advertisement

ಸಾವಿನಿಂದ ತತ್ವಶಾಸ್ತ್ರ: ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತತ್ವಶಾಸ್ತ್ರ ಎಂಬುದು ಹಲವು ವಿಷಯಗಳಿಂದ ಕೂಡಿದ್ದು, ಕೆಲವು ರಾಷ್ಟ್ರಗಳಲ್ಲಿ ತತ್ವಶಾಸ್ತ್ರ ಎಂಬುದು ಈ ಪ್ರಪಂಚದ ಸೃಷ್ಠಿಯಿಂದ ವಿಜಾnನದ ಅಭಿವೃದ್ಧಿ ವಿಷಯದಲ್ಲಿ ರೂಪಿತವಾಗಿದೆ. ಹೀಗಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತತ್ವ ಶಾಸ್ತ್ರವು ವಿಜಾnನದ ಅಭಿವೃದ್ಧಿಗೆ ಮೂಲವಾಗಿದ್ದು, ಭಾರತದಲ್ಲಿ ಈ ರೀತಿ ಆಗಲಿಲ್ಲ. ಭಾರತದಲ್ಲಿ ತತ್ವಶಾಸ್ತ್ರ ಎಂಬುದು ಸಾವಿನ ವಿಷಯದ ಮೂಲಕವೇ ಹುಟ್ಟಿಕೊಂಡಿದ್ದು, ಇದಕ್ಕೆ ಕಠೊಪನಿಷತ್‌ ಹಾಗೂ ಬುದ್ಧನ ವಿಚಾರಗಳು ಉದಾಹರಣೆಯಾಗಿದೆ.

ತಾವು ಸಹ ಸಾವು ಎಂದರೇನು? ಎಂಬುದನ್ನು ಹುಡುಕುವ ಉದ್ದೇಶದಿಂದಲೇ ತತ್ವಶಾಸ್ತ್ರ ಅಧ್ಯಯನದತ್ತ ಆಸಕ್ತಿ ತೋರಿದ್ದು, ತಮ್ಮ ಕಾದಂಬರಿಗಳಲ್ಲೂ ಸಹ ಸಾವಿನ ಕುರಿತ ಚಿತ್ರಣಗಳು ಕೂಡಿವೆ. ಅಲ್ಲದೆ ಭಾರತದ ಸಂಸ್ಕೃತಿಗೆ ಮೂಲ ಸಾರವೇ ವೇದವಾಗಿದ್ದು, ವೇದ ಎಂಬುದು ಉಪನಿಷತ್ತುಗಳಿಂದ ಕೂಡಿವೆ. ಇದೇ ಕಾರಣಕ್ಕಾಗಿ ಬುದ್ಧನನ್ನು ಉಪನಿಷತ್‌ ಕಾಲದ ಉತ್ಪನ್ನವೆಂದು ಹೇಳಲಾಗಿದೆ ಎಂದರು.

ಜನರಿಗೆ ತಲುಪಲಿಲ್ಲ: ನಮ್ಮ ನಾಗರಿಕತೆಗೆ ವೇದಗಳೇ ಮೂಲ ಆಧಾರವಾಗಿದ್ದು, ಬಾದರಾಯಣ ಎಂಬ ಋಷಿಯು ಬ್ರಹ್ಮಸೂತ್ರ ಎಂಬ ಹೆಸರಿನಲ್ಲಿ ಉಪನಿಷತ್ತುಗಳ ಕುರಿತು ಸಾರಾಂಶವನ್ನು ಬರೆಯುತ್ತಾನೆ. ಆದರೆ, ಇದನ್ನು ಟೀಕಿಸಿದ ಅನೇಕ ಆಚಾರ್ಯರುಗಳು ತಮ್ಮದೇ ರೀತಿಯಲ್ಲಿ ಸೂತ್ರಗಳನ್ನು ಬರೆದರೂ, ವೇದದ ಸಾರವೇನೆಂಬುದು ಸಾಮಾನ್ಯಜನರಿಗೆ ತಲುಪಲಿಲ್ಲ.

ಇಂತಹ ಸಂದರ್ಭದಲ್ಲಿ ವಾಲ್ಮೀಕಿ ಹಾಗೂ ವ್ಯಾಸ ಅವರುಗಳು ತಮ್ಮ ಕಲ್ಪನೆಯ ಮೂಲಕ ವೇದದ ಸಾರವನ್ನು ಎಲ್ಲರಿಗೂ ತಲುಪಿಸಿದರು. ಇದೇ ಕಾರಣದಿಂದಲೇ ಭಗವದ್ಗೀತೆ ಇಂದು ಪರಿಣಾಮಕಾರಿಯಾಗಲು ಸಾಧ್ಯವಾಗಿದ್ದು, ಸಾಹಿತ್ಯ ಎಂಬುದು ಇಂತಹ ಮೌಲ್ಯಗಳ ಆಳವಾದ ಅಧ್ಯಯನಕ್ಕೆ ಕಾರಣವಾಗಿದೆ.

ಅಲ್ಲದೆ ನಮ್ಮಲ್ಲಿ ವ್ಯಾಸ-ವಾಲ್ಮೀಕಿ ಕಾಳಿದಾಸನ ಸಾಹಿತ್ಯ ಶ್ರೇಣಿಗಳಿದ್ದು, ವ್ಯಾಸ-ವಾಲ್ಮೀಕಿ ಅವರದ್ದು ಋಷಿ ಪರಂಪರೆಯಾದರೆ, ಕಾಳಿದಾಸನದ್ದು ಕವಿ ಪರಂಪರೆಯಾಗಿದೆ ಎಂದು ಹೇಳಿದರು. ಸಮಾರಂಭದಲ್ಲಿ ಮೈಸೂರು ವಿವಿ ಪ್ರಭಾರ ಕುಲಪತಿ ಪೊ›.ಸಿ.ಬಸವರಾಜು, ಪೊ›. ಜಿ.ಹೇಮಂತ್‌ ಕುಮಾರ್‌, ಬಿ.ಎನ್‌.ಶೇಷಗಿರಿರಾವ್‌ ಹಾಗೂ ವಿಭಾಗದ ಮುಖ್ಯಸ್ಥ ಡಾ.ಎಸ್‌.ವೆಂಕಟೇಶ್‌ ಹಾಜರಿದ್ದರು.

ತತ್ವಶಾಸ್ತ್ರ ಅಧ್ಯಯನ ಏಕೆ?: ಸಮಾರಂಭ ಉದ್ಘಾಟಿಸಿ ಮಾತನಾಡಿದ ಡಾ.ಎಸ್‌.ಎಲ್‌.ಬೈರಪ್ಪ, ತಾವು ತತ್ವಶಾಸ್ತ್ರ ವಿಷಯದ ಅಧ್ಯಯನ ಮಾಡಲು ಕಾರಣವೇನೆಂಬುದನ್ನು ಹಂಚಿಕೊಂಡರು. ತಾವು 10ನೇ ವಯಸ್ಸಿನಲ್ಲಿವಾಗ ತಮ್ಮ ಅಣ್ಣ ಹಾಗೂ ಅಕ್ಕ, ಪ್ಲೇಗ್‌ನಿಂದ ಬಳಲುತ್ತಿದ್ದರು, ಅಲ್ಲದೆ ಈ ಇಬ್ಬರು ಕೇವಲ ಎರಡು ಗಂಟೆಗಳ ಅಂತರದಲ್ಲಿ ಮೃತಪಟ್ಟರು.

ಈ ಸಂದರ್ಭದಲ್ಲಿ ನಾನು ಸಹ ಪ್ಲೇಗ್‌ನಿಂದ ಬಳಲುತ್ತಿದ್ದೆ. ಈ ಘಟನೆ ನಡೆದ ಎರಡು ವರ್ಷಗಳ ನಂತರ ನನ್ನ ತಾಯಿ ಸಹ ಪ್ಲೇಗ್‌ನಿಂದ ಮರಣ ಹೊಂದಿದರು. ಆದರೆ, ನನ್ನ ತಾಯಿ ಬಿಳಿ ಬಣ್ಣದ ಸೀರೆ ಧರಿಸಿ, ಪದೇ ಪದೇ ನನ್ನ ಕನಸಿನಲ್ಲಿ ಕಾಣುತ್ತಿದ್ದರು, ನಾನು ಆಕೆಯ ಬಳಿ ಹೋದಾಗ ಆಕೆ ಮಾಯವಾಗುತ್ತಿದ್ದಳು. ಇದೇ ರೀತಿಯ ಕನಸು ಎರಡು ವರ್ಷದವರೆಗೂ ನನ್ನನ್ನು ಕಾಡುತ್ತಿತ್ತು. ನಂತರ ನಾನು 15ನೇ ವಯಸ್ಸಿನವನಾಗಿದ್ದಾಗ, ನನ್ನ 5 ವರ್ಷದ ತಮ್ಮ ಸಹ ಪ್ಲೇಗ್‌ನಿಂದ ಮೃತಪಟ್ಟ,

ಆತನ ಅಂತ್ಯಸಂಸ್ಕಾರವನ್ನು ನಾನೇ ಮಾಡಿದೆ. ಈ ಎಲ್ಲಾ ಘಟನೆಗಳ ಬಳಿಕ ಸಾವು ಎಂದರೇನು? ಎಂಬುದನ್ನು ತಿಳಿಯಲು ಬಯಸಿದೆ. ನಂತರ ವ್ಯಾಸಂಗಕ್ಕೆಂದು ಮೈಸೂರಿಗೆ ಬಂದು ಪ್ರಾಧ್ಯಾಪಕರೊಬ್ಬರನ್ನು ಭೇಟಿಯಾದಾಗ ಮರಣ ಎಂದರೇನು? ಎಂದು ಕೇಳಿದೆ. ಆ ಸಂದರ್ಭದಲ್ಲಿ ಅವರು ತತ್ವಶಾಸ್ತ್ರವನ್ನು ಅಧ್ಯಯನ ಮಾಡುವಂತೆ ಸಲಹೆ ನೀಡಿದರು, ಇದರಿಂದಾಗಿ ತಾವು ಬಿಎ ಪದವಿ ಮುಗಿಸಿದ ನಂತರ ತತ್ವಶಾಸ್ತ್ರ ಅಧ್ಯಯನಕ್ಕೆ ಮುಂದಾದೆ ಎಂದು ಹೇಳಿದರು.

ಭಾರತದಲ್ಲಿ ತತ್ವಶಾಸ್ತ್ರ ಎಂಬುದು ಸಾವಿನ ವಿಷಯದ ಮೂಲಕವೇ ಹುಟ್ಟಿಕೊಂಡಿದ್ದು, ಇದಕ್ಕೆ ಕಠೊಪನಿಷತ್‌ ಹಾಗೂ ಬುದ್ಧನ ವಿಚಾರಗಳು ಉದಾಹರಣೆಯಾಗಿದೆ. ತಾವು ಸಹ ಸಾವು ಎಂದರೇನು? ಎಂಬುದನ್ನು ಹುಡುಕುವ ಉದ್ದೇಶದಿಂದಲೇ ತತ್ವಶಾಸ್ತ್ರ ಅಧ್ಯಯನದತ್ತ ಆಸಕ್ತಿ ತೋರಿದ್ದು.
-ಡಾ.ಎಸ್‌.ಎಲ್‌.ಬೈರಪ್ಪ, ಕಾದಂಬರಿಕಾರ 

Advertisement

Udayavani is now on Telegram. Click here to join our channel and stay updated with the latest news.

Next