ಹುಬ್ಬಳ್ಳಿ: ಆರೆಸ್ಸೆಸ್-ಬಿಜೆಪಿ ಕುಮ್ಮಕ್ಕಿನಿಂದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದವರು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ಪೀಪಲ್ಸ್ ಪಾರ್ಟಿ ಆಫ್ ಇಂಡಿಯಾ (ಪಿಎಫ್‌ಐ) ಮುಖಂಡರು ಮತ್ತು ಕಾರ್ಯಕರ್ತರ ಮನೆ-ಕಚೇರಿಗಳ ಮೇಲೆ ದಾಳಿ ಮಾಡುತ್ತಿದ್ದಾರೆಂದು ಆರೋಪಿಸಿ ಪಿಎಫ್‌ಐ ಕಾರ್ಯಕರ್ತರು ಕೌಲಪೇಟೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪಿಎಫ್‌ಐ ಸ್ಥಳೀಯ ಮುಖಂಡ ರಿಯಾಜ್ ನೇತೃತ್ವದಲ್ಲಿ ಗೋ ಬ್ಯಾಕ್ ಎನ್‌ಐಎ ಎಂದು ಘೋಷಣೆ ಕೂಗುತ್ತ ಪ್ರತಿಭಟನಾಕಾರರು ಏಕಾಏಕಿ ಪುಣೆ-ಬೆಂಗಳೂರು ರಸ್ತೆ ತಡೆಗೆ ಮುಂದಾದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲ ಬ್ಯಾಕೋಡ, ಎಸಿಪಿಗಳಾದ ವಿನೋದ ಮುಕ್ತೇದಾರ, ಆರ್.ಕೆ. ಪಾಟೀಲ ಸೇರಿದಂತೆ ಪೊಲೀಸರು ರಸ್ತೆ ತಡೆ ಮಾಡದಂತೆ ಸೂಚಿಸಿದರೂ ಕೇಳಲಿಲ್ಲ. ಈ ವೇಳೆ ಪರಸ್ಪರ ತಳ್ಳಾಟ, ನೂಕಾಟ ಉಂಟಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಅವರನ್ನು ಚದುರಿಸಿ ಹತೋಟಿಗೆ ತಂದು, ಕೆಲವರನ್ನು ತಮ್ಮ ವಶಕ್ಕೆ ಪಡೆದರು. ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ತಳ್ಳಾಟ-ನೂಕಾಟದ ವೇಳೆ ಡಿಸಿಪಿ ಸಾಹಿಲ್ ಬಾಗ್ಲಾ ಅವರು ನೆಲಕ್ಕೆ ಬಿದ್ದಿದ್ದಾರೆ. ಆದರೂ ಸಾವರಿಸಿಕೊಂಡು ಎದ್ದು ಪ್ರತಿಭಟನಾಕಾರರನ್ನು ನಿಯಂತ್ರಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಪ್ರತಿಭಟನೆಯಲ್ಲಿ ಹುಬ್ಬಳ್ಳಿಯವರಿಗಿಂತ ಗದಗ, ನೂಲ್ವಿ, ಶೆರೇವಾಡ, ಅದರಗುಂಚಿ ಸೇರಿದಂತೆ ಗ್ರಾಮೀಣ ಭಾಗದವರೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.
ಸಂಘಟನೆಯೊಂದರ ಕಾರ್ಯಕರ್ತರು ಏಕಾಏಕಿ ರಸ್ತೆ ತಡೆಮಾಡಿ ಪ್ರತಿಭಟನೆ ನಡೆಸಿದಾಗ ಅವರನ್ನು ಚದುರಿಸಿ, ನಿಯಂತ್ರಿಸಲಾಗಿದೆ. 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ವಶಕ್ಕೆ ಪಡೆದಿರುವವರ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ವಿವಿಧೆಡೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಲಾಭೂ ರಾಮ ಸುದ್ದಿಗಾರರಿಗೆ ತಿಳಿಸಿದರು.
48 ಜನರ ವಿರುದ್ಧ ಪ್ರಕರಣ
ಎನ್‌ಐಎ ದಾಳಿ ಖಂಡಿಸಿ ಇಲ್ಲಿನ ಕೌಲಪೇಟೆ ಬಳಿ ಏಕಾಏಕಿ ಪಿಬಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಪಿಎಫ್‌ಐ ಮುಖಂಡರಾದ ಅಲ್ತಾಫ, ರಿಯಾಜ ಸೇರಿದಂತೆ ಒಟ್ಟು 48 ಜನರ ವಿರುದ್ಧ ಕಮರಿಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.