ಉಡುಪಿ: ಪಿಎಫ್ಐನಂತಹ ಮತಾಂಧ ಶಕ್ತಿಗಳು ನಮ್ಮ ನಡುವೆ ಇವೆ. ಹಿಜಾಬ್‌ನಿಂದ ಆರಂಭಿಸಿ ಏನೆಲ್ಲ ಮಾಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ.
ಸೂಕ್ತ ಸಮಯ ಬಂದಾಗ ನಿಷೇಧ ಮಾಡುತ್ತೇವೆ. ರಾಜ್ಯದಲ್ಲಿರುವ ಪಿಎಫ್ಐ ಚಟುವಟಿಕೆಗಳ ಬಗ್ಗೆ ಕೇಂದ್ರಕ್ಕೆ ವರದಿ ಕಳುಹಿಸುತ್ತಿದ್ದೇವೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಮಂಗಳವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಹುಲ್ ಗಾಂಧಿ ಇ.ಡಿ. ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಕಾಂಗ್ರೆಸ್ ನಾಯಕರಿಗೊಂದು, ಜನಸಾಮಾನ್ಯರಿಗೆ ಒಂದು ಅಂತೇನಿಲ್ಲ. ಕೋರ್ಟ್ ವಿಚಾರಣೆಗೆ ಕರೆದರೆ ಹೋಗಿ ಹೇಳಿಕೆ ಕೊಡಬೇಕು. ನಿರಪರಾಧಿಯಾದರೆ ಹೊರಬರುತ್ತಾರೆ. ಅಪರಾಧಿಗಳಾದರೆ ಶಿಕ್ಷೆ ಅನುಭವಿಸುತ್ತಾರೆ ಎಂದರು.
ಹಿಂದೂ ಮುಖಂಡ ಯಶ್‌ಪಾಲ್ ಸುವರ್ಣ ಅವರಿಗೆ ಸಾಮಾಜಿಕ ಜಾಲ ತಾಣದಲ್ಲಿ ಬೆದರಿಕೆ ಬಂದಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸರು ನಿಗಾ ಇರಿಸಿದ್ದಾರೆ ಎಂದರು. ಮತಾಂತರ ನಿಷೇಧ ಕಾಯ್ದೆಗೆ ಈಗಾಗಲೇ ಅಧ್ಯಾದೇಶ ಹೊರಡಿಸಲಾಗಿದೆ.
ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ವಿಧಾನ ಪರಿಷತ್‌ನಲ್ಲಿ ಮಂಡನೆ ಮಾಡಬೇಕಿದೆ ಎಂದರು.