ಹೊಸದಿಲ್ಲಿ : ನಿರಂತರ 12ನೇ ದಿನವಾಗಿ ಪೆಟ್ರೋಲ್ ಮತ್ತು ಡೀಸಿಲ್ ದರಗಳನ್ನು ಇಂದು ಶುಕ್ರವಾರ ಏರಿಸಲಾಗಿದೆ.
ಕರ್ನಾಟಕದ ವಿಧಾನಸಭಾ ಚುನಾವಣೆಯ ಪ್ರಯುಕ್ತ 19 ದಿನಗಳ ಕಾಲ ತಡೆಹಿಡಿಯಲಾಗಿದ್ದ ಪೆಟ್ರೋಲ್ – ಡೀಸಿಲ್ ದರ ಏರಿಕೆಯನ್ನು ತೈಲ ಮಾರಾಟ ಕಂಪೆನಿಗಳು, ಈ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಕಚ್ಚಾ ತೈಲ ಬೆಲೆ ಏರಿಕೆಯ ಹೊರೆಯನ್ನು ಗ್ರಾಹಕರಿಗೆ ದಾಟಿಸಿದ್ದಾರೆ.
ಮೇ 14ರ ವರೆಗೆ ಸ್ಥಗಿತಗೊಳಿಸಲಾಗಿದ್ದ ಪ್ರತಿ ನಿತ್ಯದ ಪೆಟ್ರೋಲ್ – ಡೀಸಿಲ್ ಬೆಲೆ ಏರಿಕೆ ಪ್ರಕ್ರಿಯೆಯನ್ನು ಅನಂತರದಲ್ಲಿ ಪುನರಾರಂಭಿಸಲಾಗಿದ್ದು ಪೆಟ್ರೋಲ್ ದರ ಲೀಟರ್ ಗೆ 3.20 ರೂ. ಮತ್ತು ಡೀಸಿಲ್ ದರ ಲೀಟರ್ ಗೆ 2.82 ರೂ. ಏರಿದೆ. ದಿಲ್ಲಿಯಲ್ಲಿ ಪ್ರಕೃತ ಪೆಟ್ರೋಲ್ ಲೀಟರ್ ಬೆಲೆ 77.83 ರೂ ಮತ್ತು ಡೀಸಿಲ್ ಲೀಟರ್ ಬೆಲೆ 68.75 ರೂ. ಇದೆ.
ಇಂಧನ ಸಾರಿಗೆ ಖರ್ಚು, ವಿಭಿನ್ನ ವ್ಯಾಟ್ ಪರಿಣಾಮವಾಗಿ ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ಲೀಟರ್ ದರ ಅನುಕ್ರಮವಾಗಿ 80.47, 85.65 ಮತ್ತು 80.80 ರೂ. ಇದೆ. ಅಂದರೆ ಇವು ಮೇ 13ರ ಮಟ್ಟದಿಂದ ಅನುಕ್ರಮವಾಗಿ 3.15, 3.17 ಮತ್ತು 3.37 ರೂ. ಏರಿದೆ ಎಂಬುದನ್ನು ಐಓಸಿ ವೆಬ್‌ಸೈಟ್ ತಿಳಿಸುತ್ತದೆ.
ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಡೀಸಿಲ್ ಲೀಟರ್ ದರ ಅನುಕ್ರಮವಾಗಿ 71.30, 73.20 ಮತ್ತು 72.58 ರೂ. ಇದೆ. ಮೇ 13ರ ಮಟ್ಟದಿಂದ ಇವು ಅನುಕ್ರಮವಾಗಿ 2.82, 2.67 ಮತ್ತು 3.00 ರೂ. ಏರಿದೆ.