Advertisement

ಕಥೆಗಾರ ಪೇತ್ರಿ ವಿಶ್ವನಾಥ ಶೆಟ್ಟಿ ಅವರ ಕಥಾ ಸಂಕಲನ ಬಿಡುಗಡೆ

03:49 PM Sep 12, 2018 | |

ಮುಂಬಯಿ: ಕವಿ,  ಲೇಖಕರು ಸಮಾಜಕ್ಕೆ ಬದ್ಧರಾಗಿರಬೇಕು. ಒಳ್ಳೆಯ ಸಂಸ್ಕಾರ ಪಡೆದವರು ಉನ್ನತ ಮೌಲ್ಯವುಳ್ಳ ಕಾವ್ಯವನ್ನು ರಚಿಸುತ್ತಾರೆ. ಸರ್ವೋದಯವನ್ನು ಪ್ರತಿಪಾದಿಸುವುದು ಸೃಜನಶೀಲ ಮನಸುಗಳ ಮುಖ್ಯ ಧ್ಯೇಯವಾಗಿರಬೇಕು ಎಂದು ಕನ್ನಡದ ಹೆಸರಾಂತ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ| ದೊಡ್ಡರಂಗೇಗೌಡ ಅವರು ನುಡಿದರು.

Advertisement

ಅವರು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯವು ಸೆ. 8ರಂದು ಕಲಿನಾ ಕ್ಯಾಂಪಸ್ಸಿನ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಆಯೋಜಿಸಿದ್ದ ಸಾಹಿತಿ ಪೇತ್ರಿ ವಿಶ್ವನಾಥ ಶೆಟ್ಟಿ ಅವರ “ತ್ಯಾಂಪರನ ಡೋಲು’ ಕೃತಿಯನ್ನು ಬಿಡುಗಡೆ ಗೊಳಿಸಿ ಮಾತನಾಡಿದರು.

ಪೇತ್ರಿ ವಿಶ್ವನಾಥ ಶೆಟ್ಟಿ ಅವರ ಕಥೆಗಳನ್ನು ಓದಿ ಎರಡೇ ದಿನಗಳಲ್ಲಿ ಮುನ್ನುಡಿ ಬರೆದೆ. ಅವರ ಕಥೆಗಳಲ್ಲಿ ಸಣ್ತೀ ಇದೆ. ಕಥೆ ಹೇಳುವುದು ಹೇಗೆ ಎಂದು ಅವರಿಗೆ ತಿಳಿದಿದೆ. ಅವರು ಕಥೆಗಾರರಾಗಿ ಗೆದ್ದಿದ್ದಾರೆ ಎಂದರು.

ಪೇತ್ರಿ ವಿಶ್ವನಾಥ ಶೆಟ್ಟಿ ಅವರ ಕೃತಿಯನ್ನು ಪರಿಚಯಿಸಿದ ನ್ಯಾಯವಾದಿ ಕಡಂದಲೆ ಪ್ರಕಾಶ್‌ ಎಲ್‌. ಶೆಟ್ಟಿ ಅವರು, ಪೇತ್ರಿ ಅವರ ಕಥೆಗಳಲ್ಲಿ ಜೀವನಾನುಭವವಿದೆ. ಕಥೆಗಳನ್ನು ಓದುವಾಗ ಇದು ನಮ್ಮ ಜೀವನದಲ್ಲಾದ ಘಟನೆಯೋ ಎಂಬ ಭಾವನೆ ಉಂಟಾಗುತ್ತದೆ. ಋಣ, ಟೋಪಿ, ತ್ಯಾಂಪರನ ಡೋಲು ಮೊದಲಾದ ಹಲವು ಸಶಕ್ತ ಕಥೆಗಳು ಈ ಸಂಕಲನದಲ್ಲಿವೆ.  ಟೋಪಿ ಕಥೆಯು ನಮ್ಮ ಆತ್ಮೀಯರೇ ನಮ್ಮನ್ನು ವಂಚಿಸುವ ಕಥೆಯಾದರೆ ಋಣ ಮಾತೃಪ್ರೇಮದ ತುಡಿತ, ದುಡಿಮೆಯ ಸಂಘರ್ಷವನ್ನು ಸಾರುತ್ತದೆ. ತ್ಯಾಂಪರನ ಡೋಲು ನಮ್ಮ ಊರಿನ ಚಿತ್ರಣವನ್ನು ನೀಡುವುದಲ್ಲದೆ ಹಿಂದಿನ ಕಾಲದಲ್ಲಿದ್ದ ಜಾತಿ, ಮತ, ಭೇದ, ಮೇಲು-ಕೀಳು ತಾರತಮ್ಯಗಳ ಅನಾವರಣ ಮಾಡುತ್ತದೆ. ಮುಗ್ಧ ಯುವಕನಿಗೆ ತ್ಯಾಂಪರನ ಕೊಳಲಿನ ದನಿಯ ಸೆಳೆತ ಜಾತಿಯನ್ನು ಮೀರಿದ್ದಾಗಿರುತ್ತದೆ ಎಂದು ಕಥಾ ಸಂಕಲನವನ್ನು ತೆರೆದಿಟ್ಟರು.

ಕೃತಿಯು ಅಂತರ್ಜಾಲದಲ್ಲಿ ಸುಲಭವಾಗಿ ಓದುಗರಿಗೆ ದೊರೆಯುವ ಇ-ಬುಕ್‌ನ್ನು ಮೈಸೂರು ಶ್ರೀಧರ್‌ ಅವರು ಲೋಕಾರ್ಪಣೆ ಗೊಳಿಸಿದರು.

Advertisement

ಮುಖ್ಯ ಅತಿಥಿ, ಉದ್ಯಮಿ, ಸಮಾಜ ಸೇವಕ ಮುದ್ರಾಡಿ ದಿವಾಕರ ಶೆಟ್ಟಿ ಅವರು,  ಪೇತ್ರಿ ವಿಶ್ವನಾಥ ಶೆಟ್ಟಿ ಅವರು ಸಾಹಿತ್ಯದಲ್ಲಿ ಅಪಾರ ಒಲವಿರುವವರು. ನೇರ ನಡೆ, ನುಡಿ ಅವರಲ್ಲಿ ನಾನು ಮೆಚ್ಚುವ ಗುಣ. ಅವರು ಬರೆಯುವ ಶೈಲಿಯೇ ಭಿನ್ನ. ಅವರು ಇನ್ನಷ್ಟು ಬರೆಯಬೇಕು ಎಂದು ಹಾರೈಸಿದರು.

ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ನ
ಮಾಜಿ ಅಧ್ಯಕ್ಷ ಶ್ಯಾಮ್‌ ಎನ್‌. ಶೆಟ್ಟಿ ಮಾತ ನಾಡಿ, ನಮಗೆ ಸಾಹಿತ್ಯದ ಕುರಿತು ಹೆಚ್ಚೇನೂ ಗೊತ್ತಿಲ್ಲದಿದ್ದರೂ ಪೇತ್ರಿ ವಿಶ್ವನಾಥ ಶೆಟ್ಟಿಯಂಥ‌ ಸಾಹಿತಿಗಳ ಒಡನಾಟ ಆ ಕ್ಷೇತ್ರದಲ್ಲಿ ಆಸಕ್ತಿಯನ್ನು ಹುಟ್ಟಿಸಿದೆ. ಬರವಣಿಗೆಯ ಮೂಲಕ ಅವರು ಕ್ರಿಯಾಶೀಲರಾಗಿರಲಿ ಎಂಬುವುದು ನನ್ನ ಹಾರೈಕೆ ಎಂದರು. 

ಬೆಂಗಳೂರಿನ ಟೋಟಲ್‌ ಕನ್ನಡದ ಪ್ರಕಾಶಕ ಲಕ್ಷ್ಮೀಕಾಂತ್‌ ಮಾತನಾಡಿ, ಪೇತ್ರಿ ವಿಶ್ವನಾಥ ಶೆಟ್ಟಿ ಅವರ ಕಥಾ ಸಂಕಲನವನ್ನು ಪ್ರಕಟಿಸಿದ ಖುಷಿ ಇದೆ. ಅವರ ಕಥೆಗಳು ನನಗೆ ತುಂಬಾ ಖುಷಿ ಕೊಟ್ಟಿವೆ ಎಂದರು.

ಅಧ್ಯಕ್ಷತೆ ವಹಿಸಿದ ಮುಂಬಯಿ ವಿಶ್ವವಿದ್ಯಾ ಲಯ ಕನ್ನಡ ವಿಭಾಗ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಮಾತನಾಡಿ, ಪೇತ್ರಿ ವಿಶ್ವನಾಥ ಶೆಟ್ಟಿ ಅವರು ಬದುಕಿನ ಅನುಭವಗಳನ್ನು ಕಥೆಯಾಗಿಸಿದ್ದಾರೆ. ಅವರ ಕೃತಿ ಮುಂಬಯಿ ವಿವಿಯಲ್ಲಿ ಬಿಡುಗಡೆಗೊಂಡಿರುವುದು ಕನ್ನಡಿಗರಿಗೆ ಹೆಮ್ಮೆ ಎಂದರು. 
ಖ್ಯಾತ ಗಾಯಕರಾದ ಗಣೇಶ್‌ ಎರ್ಮಾಳ್‌ ಹಾಗೂ ಲಕ್ಷಿ$¾à ಸತೀಶ್‌ ಶೆಟ್ಟಿ ಅವರಿಂದ “ಗೀತ ಗುಂಜನ’ ನೆರವೇರಿತು.

ಕನ್ನಡ ವಿಭಾಗದ  ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಅತಿಥಿ
ಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. 

ಸುಶೀಲಾ ದೇವಾಡಿಗ ಅವರ ನೇತೃತ್ವದಲ್ಲಿ ಪೂರ್ತಿ ಕಾರ್ಯಕ್ರಮವನ್ನು ಮುಂಬಯಿ ಆಕಾಶವಾಣಿಯವರು ಧ್ವನಿ ಮುದ್ರಣ ಮಾಡಿದರು. 

ವಿಭಾಗದ ಸಂಶೋಧನ ವಿದ್ಯಾರ್ಥಿಗಳಾದ ಸುರೇಖಾ ದೇವಾಡಿಗ, ಸುರೇಖಾ ರಾವ್‌, ಕುಮುದಾ ಆಳ್ವ, ಅನಿತಾ ಶೆಟ್ಟಿ, ಉದಯ ಶೆಟ್ಟಿ, ಸೋಮಶೇಖರ ಮಸಳಿ, ದಿನಕರ ನಂದಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ನಾನು ಶಾಲೆಗಿಂತ ಗ್ರಂಥಾಲಯದಲ್ಲಿ ಹೆಚ್ಚು ಓದಿದವನು. ಹೊಟ್ಟೆ ಹೊರೆಯಲು ಮಾಡುತ್ತಿದ್ದ ಸಣ್ಣ ವ್ಯಾಪಾರದ ನಡುವೆಯೂ ಪುಸ್ತಕ ನನ್ನ ಸಂಗಾತಿಯಾಗಿತ್ತು. ನಾನು ಕಥೆಗಾರನಾಗಬೇಕೆಂದು ಬಯಸಿದವನಲ್ಲ. ಜೀವನಾನುಭವಗಳನ್ನು ಬರೆಯುತ್ತಾ ನಾನೂ ಕಥೆ ಬರೆಯಬಲ್ಲೆನೆಂಬ ಧೈರ್ಯ, ಹುಮ್ಮಸ್ಸು ನನ್ನಲ್ಲಿ ಮೂಡಿದೆ. ಡಾ| ದೊಡ್ಡರಂಗೇಗೌಡರ ಮುನ್ನುಡಿಯ ಸೇಸೆ, ಡಾ|  ಜಿ.ಎನ್‌. ಉಪಾಧ್ಯ ಅವರ ಸಲಹೆ ನನ್ನಲ್ಲಿ  ಓದುವ ಛಲ, ಬರೆಯುವ ಆಸಕ್ತಿ ಹೆಚ್ಚಿಸಿದೆ. ಬದುಕು ಕಲಿಸಿದ ಪಾಠ, ಶಿಕ್ಷಕರಿಂದ ಕಲಿತಿರುವುದಕ್ಕಿಂತ ಹೆಚ್ಚು.
-ಪೇತ್ರಿ ವಿಶ್ವನಾಥ ಶೆಟ್ಟಿ, ಕಥೆಗಾರ 

Advertisement

Udayavani is now on Telegram. Click here to join our channel and stay updated with the latest news.

Next