Advertisement

Oxygen; ವಾರದೊಳಗೆ ಪೆಸೊ(ಪಿಇಎಸ್‌ಒ)ಪರವಾನಿಗೆ ಸಾಧ್ಯತೆ; ಏಜೆನ್ಸಿ ಅಂತಿಮದ ಬಳಿಕ ಕಾರ್ಯಾರಂಭ

12:47 AM Jan 02, 2024 | Team Udayavani |

ಬಂಟ್ವಾಳ: ಲಿಕ್ವಿಡ್‌ ಆಕ್ಸಿಜನ್‌ ಘಟಕಗಳಿಗೆ ಶೇ. 100 ಶುದ್ಧತೆ (ಪ್ಯೂರಿಟಿ)ಯ ಆಕ್ಸಿಜನ್‌ ಒದಗಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 8 ಸರಕಾರಿ ಆಸ್ಪತ್ರೆಗಳಲ್ಲಿ ಅನುಷ್ಠಾನ ಪೂರ್ಣಗೊಳಿಸಿ ಚೆನ್ನೈಯ ಪೆಸೊ (ಪಿಇಎಸ್‌ಒ) ಪರವಾನಿಗೆಗಾಗಿ ಕಾಯುತ್ತಿದ್ದ ಲಿಕ್ವಿಡ್‌ ಆಕ್ಸಿಜನ್‌ ಘಟಕಗಳಿಗೆ ವಾರದೊಳಗೆ ಪರವಾನಿಗೆ ಸಿಗುವ ಸಾಧ್ಯತೆ ಇದ್ದು, ಬಳಿಕ ಟೆಂಡರ್‌ ಮೂಲಕ ಆಕ್ಸಿಜನ್‌ ತುಂಬಿಸುವ ಏಜೆನ್ಸಿ ಅಂತಿಮಗೊಂಡು ಘಟಕ ಕಾರ್ಯಾರಂಭಗೊಳ್ಳಲಿದೆ.

Advertisement

ಕಳೆದ ಅವಧಿಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ರಾಜ್ಯದ ಪ್ರತೀ ಜಿಲ್ಲೆ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಲಿಕ್ವಿಡ್‌ ಆಕ್ಸಿಜನ್‌ ಘಟಕಗಳನ್ನು ಮಂಜೂರು ಮಾಡಿತ್ತು. ದ.ಕ.ಜಿಲ್ಲೆಯ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ಸರಕಾರಿ ಆಸ್ಪತ್ರೆಗಳು ಸೇರಿ 5 ಘಟಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಸರಕಾರಿ ಆಸ್ಪತ್ರೆಗಳು ಸೇರಿ ಮೂರು ಘಟಕ ಮಂಜೂರಾಗಿತ್ತು.

ಉಭಯ ಜಿಲ್ಲೆಯ 7 ಸರಕಾರಿ ಆಸ್ಪತ್ರೆಗಳಲ್ಲಿ ತಲಾ 6 ಸಾವಿರ ಲೀ. ಸಾಮರ್ಥ್ಯದ ಘಟಕಗಳನ್ನು ತಲಾ 54 ಲಕ್ಷ ರೂ. ವೆಚ್ಚದಲ್ಲಿ ಅನುಷ್ಠಾನ ಮಾಡಲಾಗಿದೆ. ವೆನ್ಲಾಕ್ ನಲ್ಲಿ ಈ ಹಿಂದೆಯೇ ಇಂತಹ ಘಟಕ ಇದ್ದ ಹಿನ್ನೆಲೆಯಲ್ಲಿ ಪ್ರಸ್ತುತ ಅಲ್ಲಿ 13 ಸಾವಿರ ಲೀಟರ್‌ ಸಾಮರ್ಥ್ಯದ ಘಟಕ ಅನುಷ್ಠಾನಗೊಂಡಿದೆ.

ಆಕ್ಸಿಜನ್‌ ತುಂಬುವ ಏಜೆನ್ಸಿ ಟೆಂಡರ್‌
ಮಂಗಳೂರಿನ ವೆನ್ಲಾಕ್ ಹಾಗೂ ಲೇಡಿಗೋಶನ್‌ ಆಸ್ಪತ್ರೆಗಳಲ್ಲಿ ಕಾರ್ಯಾಚರಿಸುತ್ತಿರುವ ಲಿಕ್ವಿಡ್‌ ಆಕ್ಸಿಜನ್‌ ಘಟಕಗಳಿಗೆ ಈಗಾಗಲೇ ಏಜೆನ್ಸಿಯೊಂದು ಆಕ್ಸಿಜನ್‌ ತುಂಬುವ ಕಾರ್ಯ ಮಾಡುತ್ತಿದ್ದು, ಆ ಸಂಸ್ಥೆಯೇ ಪ್ರಸ್ತುತ ಅನುಷ್ಠಾನಗೊಂಡಿರುವ ಘಟಕಗಳಿಗೂ ಆಕ್ಸಿಜನ್‌ ತುಂಬುವುದಕ್ಕೆ ಟೆಂಡರ್‌ ಹಾಕುವ ಸಾಧ್ಯತೆ ಇದೆ. ಅಥವಾ ಇತರ ಸಂಸ್ಥೆಗಳು ಕೂಡ ಟೆಂಡರ್‌ ಹಾಕಿ ಬಳಿಕ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಅದರ ಬಳಿಕವೇ ಘಟಕ ಕಾರ್ಯಾರಂಭದ ಹಂತಕ್ಕೆ ಬರಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿದೆ.

ಕೊರೊನಾ ಕಾಲಘಟದಲ್ಲಿ ಸಾಕಷ್ಟು ಸರಕಾರಿ ಆಸ್ಪತ್ರೆಗಳಲ್ಲಿ ಕಂಪೆನಿಗಳ ಸಿಎಸ್‌ಆರ್‌ ಅನುದಾನದಿಂದ ಆಕ್ಸಿಜನ್‌ ಉತ್ಪಾದನೆ ಘಟಕಗಳು ಅನುಷ್ಠಾನಗೊಂಡಿದ್ದವು. ಅದಕ್ಕೂ ಹಾಲಿ ಅನುಷ್ಠಾನ ಗೊಂಡಿರುವ ಲಿಕ್ವಿಡ್‌ ಆಕ್ಸಿಜನ್‌ ಘಟಕಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಆಕ್ಸಿಜನ್‌ ಉತ್ಪಾದನೆ ಘಟಕಗಳಲ್ಲಿ ಗರಿಷ್ಠ ಶೇ. 95ರ ವರೆಗಿನ ಶುದ್ಧತೆಯ ಆಕ್ಸಿಜನ್‌ ಲಭ್ಯವಾದರೆ, ಲಿಕ್ವಿಡ್‌ ಘಟಕದಲ್ಲಿ ದ್ರವರೂಪದ ಆಕ್ಸಿಜನ್‌ ತಂದು ಟ್ಯಾಂಕ್‌ನಲ್ಲಿ ತುಂಬಿಸಿ ಬಳಿಕ ಅದು 100 ಶೇ. ಶುದ್ಧತೆಯ ಅನಿಲ(ಗ್ಯಾಸ್‌)ವಾಗಿ ಪರಿವರ್ತನೆಗೊಳ್ಳುತ್ತದೆ.

Advertisement

ಲಿಕ್ವಿಡ್‌ ಆಕ್ಸಿಜನ್‌ ಘಟಕದ ಅನುಷ್ಠಾನ ಕಾರ್ಯ ಪೂರ್ಣಗೊಂಡು ವಾರದೊಳಗೆ ಪೆಸೊ ಪರವಾನಿಗೆ ಸಿಗುವ ಸಾಧ್ಯತೆ ಇದೆ. ಅದರ ಬಳಿಕ ಘಟಕಗಳಿಗೆ ಆಕ್ಸಿಜನ್‌ ತುಂಬಲು ಟೆಂಡರ್‌ ಮೂಲಕ ಏಜೆನ್ಸಿ ಅಂತಿಮಗೊಂಡು ಮುಂದೆ ಘಟಕ ಕಾರ್ಯಾರಂಭಗೊಳ್ಳುತ್ತದೆ.
– ರಾಜೇಶ್‌ ರೈ, ಸಹಾಯಕ ಎಂಜಿನಿಯರ್‌, ಆರೋಗ್ಯ ಇಲಾಖೆ ಎಂಜಿನಿಯರಿಂಗ್‌ ಉಪವಿಭಾಗ, ಮಂಗಳೂರು (ಉಡುಪಿಜಿಲ್ಲೆ ಒಳಗೊಂಡಂತೆ)

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next