Advertisement

ಉತ್ತಮ ಹವ್ಯಾಸದಿಂದ ವ್ಯಕ್ತಿತ್ವ ನಿರ್ಮಾಣ

12:58 AM Apr 06, 2022 | Team Udayavani |

ಪ್ರತಿಯೊಬ್ಬರೂ ಜೀವನದಲ್ಲಿ ಉತ್ತಮ ಹವ್ಯಾಸವನ್ನು ಹೊಂದಿರುವುದು ಅತೀಮುಖ್ಯ. ನಾವು ದಿನಂಪ್ರತಿ ಹಲವರನ್ನು ಭೇಟಿಯಾಗುತ್ತೇವೆ. ಈ ವೇಳೆ ನಾವು ನಮ್ಮ ಹವ್ಯಾಸಗಳ ಬಗೆಗೆ ಹೇಳಿಕೊಳ್ಳಲು ಮರೆಯುವುದಿಲ್ಲ. ಈ ಹವ್ಯಾಸಗಳು ನಮ್ಮ ಜೀವನದಲ್ಲಿ ಎಷ್ಟೊಂದು ಹಾಸುಹೊಕ್ಕಾಗಿರುತ್ತವೆ ಎಂದರೆ ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿರುತ್ತದೆ ಮಾತ್ರವಲ್ಲದೆ ಅದು ನಮ್ಮ ವ್ಯಕ್ತಿತ್ವವನ್ನು ರೂಪಿಸಿರುತ್ತದೆ.

Advertisement

“ಹವ್ಯಾಸ ಎನ್ನುವುದು ಜೀವನೋಪಾಯಕ್ಕಾಗಿ ಅಲ್ಲ, ಅದು ಆತ್ಮ ಸಂತೋಷಕ್ಕಾಗಿ ಮಾಡುವ ಕೆಲಸ’ ಇದು ಬೀಚಿ ಅವರು ಹವ್ಯಾಸಕ್ಕೆ ನೀಡಿದ್ದ ವ್ಯಾಖ್ಯಾನ. ಬದುಕನ್ನು ಆಸಕ್ತಿದಾಯಕವನ್ನಾಗಿ ಮಾಡಲು, ಸದಾ ಕ್ರಿಯಾಶೀಲ ರಾಗಿರಲು ಹವ್ಯಾಸ ಪೂರಕ. ನಮ್ಮ ದಿನನಿತ್ಯದ ಚಟುವಟಿಕೆ, ಕೆಲಸಕಾರ್ಯಗಳು, ಕ್ರೀಡೆ, ಆಹಾರ-ವಿಹಾರ.. ಇವೆಲ್ಲದರ ಜತೆಗೆ ಉತ್ತಮ ಹವ್ಯಾಸಗಳು ಜತೆಗೂಡಿದರೆ ನಾವು ನಮ್ಮ ಜೀವನವನ್ನು ಸಂತೋಷ ದೊಂದಿಗೆ ಸುಂದರದಾಯಕವಾಗಿ ಕಳೆಯಲು ಸಾಧ್ಯ. ಹವ್ಯಾಸಗಳು ನಮ್ಮ ಮನಸ್ಸನ್ನು ಸಕಾರಾತ್ಮಕ ಚಿಂತನೆಗಳತ್ತ ಪ್ರೇರೇಪಿಸುತ್ತದೆ.

ಇನ್ನೂ ಅತ್ಯಂತ ಸುಲಭವಾಗಿ ಹವ್ಯಾಸವನ್ನು ವಿವರಿಸಬೇಕೆಂದರೆ ಬಿಡುವಿನ ವೇಳೆಯನ್ನು ಆನಂದಿಸುವ ಮಾರ್ಗವೇ ಹವ್ಯಾಸ. ಪ್ರತಿದಿನ ನಮ್ಮನ್ನು ನಾವು ವಿವಿಧ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಆ ಕೆಲಸ ಕಾರ್ಯಗಳು ನಮಗೆ ಇಷ್ಟವಿರಲಿ, ಇಲ್ಲದಿರಲಿ ಅದನ್ನು ನಾವು ಅನಿವಾರ್ಯವಾಗಿ ಮಾಡಲೇಬೇಕಿರುತ್ತದೆ. ಇದರಿಂದ ನಮಗೆ ದೈಹಿಕ ಮತ್ತು ಮಾನಸಿಕ ಒತ್ತಡ ಉಂಟಾಗುವುದು ಸಹಜ. ಆದರೆ ಹವ್ಯಾಸ ಎನ್ನುವುದು ಹಾಗಲ್ಲ. ಹವ್ಯಾಸವು ನಮ್ಮ ಮನಸ್ಸಿಗೆ ಹತ್ತಿರವಾದುದರಿಂದ ನಮಗೆ ಸಂತೋಷ ನೀಡುತ್ತದೆ. ಹೀಗಾಗಿ ನಾವು ಪ್ರತೀ ದಿನ ಸ್ವಲ್ಪ ಸಮಯವನ್ನು ಹವ್ಯಾಸಕ್ಕಾಗಿ ಮೀಸಲಿರಿಸಬೇಕು. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿ ಚೈತನ್ಯ, ಉಲ್ಲಾಸ, ಆನಂದಭರಿತ ಜೀವನ ನಮ್ಮದಾಗುತ್ತದೆ. ಇದರ ಜತೆಯಲ್ಲಿ ಆತ್ಮವಿಶ್ವಾಸ ವೃದ್ಧಿಯಾಗಿ ಮನೋಚೈತನ್ಯ ಮತ್ತು ಮನೋವಿಕಾಸಕ್ಕೆ ಸಹಕಾರಿಯಾಗುತ್ತದೆ.

ಹವ್ಯಾಸಗಳು ಎಂದಿಗೂ ಸಮಯ ವ್ಯರ್ಥ ಮಾಡುವುದಕ್ಕಾಗಿ ಅಲ್ಲ. ಮಾನಸಿಕ ಆರೋಗ್ಯ, ನೆಮ್ಮದಿ ಮತ್ತು ಸಂತೃಪ್ತಿಯ ಜೀವನಕ್ಕೆ ಮಾಡುವ ಹೂಡಿಕೆಯಾಗಿದೆ. ತರಹೇವಾರಿ ಹವ್ಯಾಸಗಳಿವೆ. ವಸ್ತುಗಳ ತಯಾರಿ, ಸಂಗ್ರಹಣೆ, ಕಲಿಕೆ ಹೀಗೆ ಮೂರು ವಿಧದ ಹವ್ಯಾಸಗಳನ್ನು ನಾವು ಹೊಂದಬಹುದಾಗಿದೆ. ಯಾವುದೇ ಹವ್ಯಾಸವನ್ನು ಮೈಗೂಡಿಸಿಕೊಳ್ಳುವ ಆರಂಭದಲ್ಲಿ ಅದು ಕಠಿನ ಎಂದೆನಿಸುವುದು ಸಹಜ. ಪ್ರಯತ್ನಿಸದ ಹೊರತು ನಿಮ್ಮ ಸಾಮರ್ಥ್ಯ ಏನು ಎಂದು ತಿಳಿಯಲಾರದು. ಸತತ ಪ್ರಯತ್ನದಿಂದ ಹವ್ಯಾಸಗಳು ನಿಮಗೆ ಕರಗತವಾಗಬಲ್ಲುದು. ಇನ್ನು ಎಷ್ಟೋ ಬಾರಿ ಹವ್ಯಾಸಗಳನ್ನು ನಾವು ನಮಗೆ ಗೊತ್ತಿಲ್ಲದಂತೆ ಬೆಳೆಸಿಕೊಂಡಿರುತ್ತೇವೆ. ಬೇರೆಯವರು ಅದನ್ನು ಗುರುತಿಸಿ ಪ್ರಶಂಸಿಸಿದಾಗಲೇ ನಮಗೆ ಅದರ ಮಹತ್ವ ತಿಳಿಯುವುದು.

ಹವ್ಯಾಸ ನಮ್ಮ ಜೀವನದ ಪಥವನ್ನೇ ಬದಲಿಸಬಲ್ಲುದು. ಹವ್ಯಾಸಗಳನ್ನೇ ವೃತ್ತಿಯನ್ನಾಗಿಸಿಕೊಂಡವರನ್ನು ನಾವು ನಮ್ಮ ಸಮಾಜದಲ್ಲಿ ಕಾಣಬಹುದು. ಹವ್ಯಾಸಗಳು ಜೀವನ ದಿಸೆಯನ್ನೇ ಬದಲಿಸಿ ಅವರನ್ನು ಸಾಧನೆಯ ಉತ್ತುಂಗಕ್ಕೇರಿಸಿದ ಉದಾಹರಣೆಗಳೂ ಇವೆ. ಹವ್ಯಾಸ ಎಂದಾಕ್ಷಣ ಯಾರೋ ಏನೋ ಮಾಡುತ್ತಿದ್ದಾರೆ ಎಂದು ಅವರನ್ನು ಅನುಸರಿಸುವುದೂ ಸರಿಯಲ್ಲ. ನಮಗೆ ಅದರಲ್ಲಿ ಆಸಕ್ತಿ ಇದ್ದರೆ ಮಾತ್ರ ಅತ್ತ ದೃಷ್ಟಿ ಹರಿಸಬೇಕು. ಇಲ್ಲವಾದಲ್ಲಿ ನಮ್ಮ ಆಸಕ್ತಿಯ ವಿಷಯಗಳನ್ನೇ ಹವ್ಯಾಸವನ್ನಾಗಿಸಿಕೊಂಡು ಮುನ್ನಡೆದಲ್ಲಿ ನಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ನಾವು ಕಾಣಬಹುದಾಗಿದೆ. ಹವ್ಯಾಸದ ಮಹತ್ವವನ್ನು ಅರಿತುಕೊಂಡು ನಮ್ಮ ಬಿಡುವಿನ ವೇಳೆಯನ್ನು ಇದಕ್ಕಾಗಿ ಸಮರ್ಪಕವಾಗಿ ಬಳಸಿಕೊಂಡಲ್ಲಿ ಕೇವಲ ಆ ದಿನ ಮಾತ್ರವಲ್ಲ ನಮ್ಮ ಇಡೀ ಜೀವನವೇ ಸಂತಸಮಯವಾಗಿರಲು ಸಾಧ್ಯ. ಹವ್ಯಾಸಗಳು ನಮ್ಮ ಜೀವನಕ್ಕೆ ಉತ್ತಮ ಅಡಿಪಾಯವನ್ನು ಹಾಕಿಕೊಡುವುದಂತೂ ದಿಟ.

Advertisement

- ಜ್ಯೋತಿ ಕಿಣಿ, ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next