ಕಳೆದ ವರ್ಷ ಅನಿರೀಕ್ಷಿತವಾಗಿ ನಡೆದ ರಸ್ತೆ ಅಪಘಾತದಲ್ಲಿ ನಾನು ಮತ್ತು ನನ್ನ ಮಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದೆವು. ನಾವು ರಸ್ತೆ ಮೇಲೆ ನರಳಾಡುತ್ತಿದ್ದಾಗ, ನನ್ನ ಪತಿ ಸಹಾಯಕ್ಕಾಗಿ ವಿನಂತಿಸುತ್ತಿದ್ದರಂತೆ. ಆಗ ಒಬ್ಬ ಆಟೋ ಚಾಲಕ ಮತ್ತು ಇನ್ನೊಬ್ಬ ಬೈಕ್ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ, ನನ್ನನ್ನು ಎತ್ತಿ ಆಟೋದಲ್ಲಿ ಮಲಗಿಸಿದರು. ಕಣ್ಣುಬಿಟ್ಟು ನೋಡಲಾರದ ಸ್ಥಿತಿಯಲ್ಲಿ ನಾನಿದ್ದೆ. ಹಾಗೆ ಆಟೋದಲ್ಲಿ ಮಲಗಿಸಿದ ತಕ್ಷಣ, “ಅಯ್ಯೋ… ನಾನು ಸತ್ತೆ… ಕಾಲು ಕೆಳಗೆ ಬಿಡಬೇಡಿ’ ಎಂದು ಗಂಟಲಿಗೆ ಶಕ್ತಿ ತಂದುಕೊಂಡು ಕೂಗಿದೆ. ಆಗ ಆ ಬೈಕ್ ಸವಾರ ಆಟೋದಲ್ಲಿ ಕುಳಿತು ತನ್ನ ಕಾಲಿನ ಮೇಲೆ ನನ್ನ ಕಾಲನ್ನು ಎತ್ತರಿಸಿಟ್ಟು ಕುಳಿತಿದ್ದರು. ನಾನು ಬದುಕುಳಿದಿದ್ದೇ ಒಂದು ಪವಾಡ. ಒಂದು ವರ್ಷದ ನಂತರ ಎದ್ದು ಓಡಾಡುವಂತಾದೆ. ಅವರಿಬ್ಬರಿಗೂ ಥ್ಯಾಂಕ್ಸ್ ಹೇಳಲು ತುಂಬಾ ಯತ್ನಿಸಿದೆ. ಹಲವರನ್ನು ವಿಚಾರಿಸಿದೆ. ಆದರೆ, ಇಂದಿಗೂ ಅವರಿಬ್ಬರು ಯಾರೆಂದು ಕಂಡುಹಿಡಿಯಲಾಗಲಿಲ್ಲ. ಅಂಥ ಸಂಕಷ್ಟಕರ ಪರಿಸ್ಥಿತಿಯಲ್ಲಿ ನಮ್ಮನ್ನು ಕಾಪಾಡಲು ಧಾವಿಸಿದ ಅವರಿಬ್ಬರೂ ನನ್ನ ಪಾಲಿಗೆ ದೇವರಂತೆ ಭಾಸವಾದರು. ಎಲ್ಲೇ ಇರಲಿ, ಅವರನ್ನು ದೇವರು ಚೆನ್ನಾಗಿಟ್ಟಿರಲಿ. ಈ ವಿಷಯ ನನಗೆ ಕ್ಷಣಕ್ಷಣಕ್ಕೂ ಕಾಡುತ್ತಿದೆ.