ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖಾ ವ್ಯಾಪ್ತಿಯ ಅನುದಾನಿತ ಎಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.
ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ವೇತನಾನುದಾನಕ್ಕೆ ಒಳಪಟ್ಟು, ನಂತರ ರಾಜೀನಾಮೆ, ನಿವೃತ್ತಿ ಅಥವಾ ಅಕಾಲಿಕ ನಿಧನದಿಂದ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ಮೀಸಲಾತಿ ಪದ್ಧತಿಯ ಅನುಸಾರ ಭರ್ತಿ ಮಾಡಬಹುದಾಗಿದೆ.
ಕಾರ್ಯಭಾರವಿರುವ ಹುದ್ದೆಗಳನ್ನು ಗುರುತಿಸಿ, ಆರ್ಥಿಕ ಇಲಾಖೆಯು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸಹಮತಿಸಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಮಾಹಿತಿಯೊಂದಿಗೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸಲು ಇಲಾಖೆ ಕಾಲೇಜಿನ ಪ್ರಾಂಶುಪಾಲರಿಗೆ ತಿಳಿಸಿದೆ.
ಶೈಕ್ಷಣಿಕ ಕಾರ್ಯಭಾರಕ್ಕೆ ಅನುಗುಣವಾಗಿ ಭರ್ತಿ ಮಾಡಬೇಕಾದ ಹುದ್ದೆಗಳ ವಿವರವನ್ನು ಮೀಸಲಾತಿಯನ್ವಯ ವರ್ಗೀಕರಿಸಬೇಕು. ಹುದ್ದೆ ತೆರವಾದ ದಿನಾಂಕ, ಕಾರಣ ಮತ್ತು ಇದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಪ್ರಸ್ತಾವನೆಯೊಂದಿಗೆ ಕಳುಹಿಸಬೇಕು.
ಖಾಲಿ ಇರುವ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಕ್‌ಲಾಗ್ ಹುದ್ದೆಗಳ ಪ್ರಸ್ತಾವನೆಯನ್ನು ಕೂಡಲೇ ಸಲ್ಲಿಸುವಂತೆ ಇಲಾಖೆ ನಿರ್ದೇಶಿಸಿದೆ.