Advertisement

ಲೋಡ್‌ ಶೆಡ್ಡಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ 

04:15 PM Nov 12, 2017 | |

ಮಂಗಳೂರು: ವಿದ್ಯುತ್‌ ಕೊರತೆ ನಿರಂತರ ಕಾಡುವ ಸಮಸ್ಯೆ. ಪ್ರತಿ ಬೇಸಗೆಯಲ್ಲೂ ಲೋಡ್‌ ಶೆಡ್ಡಿಂಗ್‌ ಗುಮ್ಮ ಎದುರಾಗುತ್ತದೆ. ಸರಕಾರ ಎಷ್ಟೇ ಪ್ರಯತ್ನ ಮಾಡಿದರೂ ವಿದ್ಯುತ್‌ ಸಮಸ್ಯೆಗೆ ಪೂರ್ಣ ವಿರಾಮ ಹಾಕಲು ಸಾಧ್ಯವಾಗಿಲ್ಲ. ಹೆಚ್ಚಿನ ದರ ತೆತ್ತು ಹೊರ ರಾಜ್ಯಗಳಿಂದ, ಖಾಸಗಿ ಕಂಪೆನಿಗಳಿಂದ ವಿದ್ಯುತ್‌ ಖರೀದಿಸುವುದು ಹೊರೆಯಾಗುತ್ತಿದೆ. ಇದನ್ನು ಪರೋಕ್ಷವಾಗಿ ಭರಿಸುವುದು ಜನರೇ. ನವೀಕರಿಸಬಹುದಾದ ಸೋಲಾರ್‌ ವಿದ್ಯುತ್‌ ಮಾತ್ರ ಇದಕ್ಕೆ ಪರಿಹಾರ.

Advertisement

ಸೂರ್ಯನ ಬೆಳಕಿಗೆ ದುಡ್ಡು ಕೊಡ ಬೇಕಾಗಿಲ್ಲ. ಮುಗಿಯುವ ಭಯವಿಲ್ಲ. ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಮಂಗಳೂರಿನಲ್ಲಿ ಅನುಕೂಲಕರ ವಾತಾವರಣವಿದೆ. ವರ್ಷದ 6 ತಿಂಗಳು ತೀಕ್ಷ್ಣ ಬಿಸಿಲು ಲಭ್ಯವಿದೆ. ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಕೇಂದ್ರ, ರಾಜ್ಯ ಸರಕಾರಗಳಿಂದ ಉತ್ತೇಜನವಿದೆ. ಮೆಸ್ಕಾಂನಿಂದ ಪ್ರೋತ್ಸಾಹವಿದೆ. ಇದೆಲ್ಲವನ್ನು ಕ್ರೋಢೀಕರಿಸಿ, ಎಲ್ಲ ಉತ್ತೇಜನಕಾರಿ ಕ್ರಮಗಳನ್ನು ಒಂದು ಇಲಾಖೆಯಡಿ ಸಮೀಕರಿಸಿ ವಸತಿ ಯೋಜನೆ, ಅನಿಲ ಭಾಗ್ಯ ಯೋಜನೆಗಳ ಮಾದರಿಯಲ್ಲೇ ಸೋಲಾರ್‌ ಭಾಗ್ಯವೂ ರೂಪುಗೊಂಡಲ್ಲಿ ಸೌರವಿದ್ಯುತ್‌ ಉತ್ಪಾದನೆಗೆ ಹೆಚ್ಚು ಒತ್ತು ಸಿಗುವ ಜತೆಗೆ, ವಿದ್ಯುತ್‌ ಸಮಸ್ಯೆಗೆ ಶಾಶ್ವತ ಪರಿಹಾರವೂ ದೊರೆಯುತ್ತದೆ.

ವ್ಯಾಪಕ ಪ್ರಚಾರ ಬೇಕಾಗಿದೆ
ಮಂಗಳೂರಿನಲ್ಲಿ ಸೋಲಾರ್‌ ವಿದ್ಯುತ್‌ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಿದೆ. ಇದು ಇನ್ನಷ್ಟು ವ್ಯಾಪಕವಾಗಬೇಕಿದೆ. ರಾಜ್ಯದಲ್ಲಿ ಸರಕಾರದ ಸೌರಶಕ್ತಿ ನೀತಿ 2014- 21ರನ್ವಯ ಮೇಲ್ಛಾವಣಿ ಸೌರಶಕ್ತಿ ವ್ಯವಸ್ಥೆಯ ಸಂಪರ್ಕ ಜಾಲದ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ನೆಟ್‌ ಹಾಗೂ ಗ್ರಾಸ್‌ ಮೀಟರಿಂಗ್‌ ಆಧಾರದ ಮೇಲೆ ಸೋಲಾರ್‌ ವಿದ್ಯುತ್‌ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ. ನೆಟ್‌ ಮೀಟರಿಂಗ್‌ ವ್ಯವಸ್ಥೆಯಲ್ಲಿ ಬಳಕೆ ಮಾಡಿ ಉಳಿದ ವಿದ್ಯುತ್ತನ್ನು ಗ್ರೀಡ್‌ಗೆ ನೀಡಬಹುದಾಗಿದೆ.

ಗ್ರಾಸ್‌ ಮೀಟರಿಂಗ್‌ ವ್ಯವಸ್ಥೆಯಲ್ಲಿ ಉತ್ಪಾದನೆ ಮಾಡಿದ ಎಲ್ಲ ವಿದ್ಯುತ್ತನ್ನು ಗ್ರೀಡ್‌ಗೆ ನೀಡುವುದಾಗಿದೆ. ಸೌರ ಫಲಕಗಳು ಸೂರ್ಯನ ಕಿರಣಗಳನ್ನು ಹೀರಿಕೊಂಡು ಸೌರ ಸೆಲ್‌ಗ‌ಳ ಮೂಲಕ ವಿದ್ಯುತ್ಛಕ್ತಿಯನ್ನು ಡಿಸಿ (ಡೈರೆಕ್ಟ್ ಕರೆಂಟ್‌) ಯಲ್ಲಿ ಉತ್ಪಾದಿಸುತ್ತದೆ. ಸೌರ ಇಂಧನದ ಉತ್ಪಾದನೆಯ ಪ್ರಮಾಣವನ್ನು ಗುರುತಿಸಲು 1 ಮೀಟರ್‌ ಅಳವಡಿಕೆ ಮಾಡಲಾಗುತ್ತದೆ. ಉತ್ಪಾದಿತ ವಿದ್ಯುತ್‌ ಮನೆಯ ಬಳಕೆಗೆ ಇರಿಸಿಕೊಂಡು, ಉಳಿದುದನ್ನು ವಿದ್ಯುತ್‌ ತಂತಿಯ ಮೂಲಕ ಹರಿಯಬಿಡಲಾಗುತ್ತದೆ.

ಸೌರವಿದ್ಯುತ್‌ ಖರೀದಿಸಲು ಗ್ರಾಹ ಕರೊಂದಿಗೆ ಮೆಸ್ಕಾಂ ಒಪ್ಪಂದ ಮಾಡಿ ಕೊಳ್ಳುತ್ತದೆ. ಸೌರ ಇಂಧನದ ಪ್ಲಾಂಟ್‌ ಅಳವಡಿಸಲು ಇಚ್ಛಿಸುವವರು ಮೆಸ್ಕಾಂ ಸಬ್‌ಡಿವಿಶನ್‌ ಕಚೇರಿಗೆ ಭೇಟಿ ನೀಡಬಹುದು. ಸೋಲಾರ್‌ ಮೇಲ್ಛಾವಣಿ ಘಟಕಗಳ ಸ್ಥಾಪನೆಗೆ ವಿದ್ಯುತ್‌ ಸರಬರಾಜು ಕಂಪೆನಿಗಳ ವತಿಯಿಂದ ಪ್ರೋತ್ಸಾಹಧನ ಸಿಗದು. ಆದರೆ, ಫಲಾನುಭವಿಗಳು ಎಂ.ಆನ್‌.ಆರ್‌.ಇ. ವತಿಯಿಂದ ಯೋಜನಾ ವೆಚ್ಚದ ಶೇ. 25ರಷ್ಟು ಸಹಾಯಧನ ಪಡೆಯಲು ಅವಕಾಶವಿದೆ.

Advertisement

ಒಂದಷ್ಟು ಪ್ರಯತ್ನ
ದಕ್ಷಿಣ ಕನ್ನಡದಲ್ಲಿ ರೂಫ್‌ಟಾಪ್‌ ಸೋಲಾರ್‌ ವ್ಯವಸ್ಥೆಯಲ್ಲಿ 1000 ಕಿಲೋ ವ್ಯಾಟ್‌ ಸಾಮರ್ಥಯದ ಸೌರಶಕ್ತಿ ಉತ್ಪಾದ ನೆಯ ಗುರಿ ಇರಿಸಿಕೊಳ್ಳಲಾಗಿತ್ತು. ಸರಕಾರಿ ಕಟ್ಟಡಗಳು ರೂಫ್‌ಟಾಪ್‌ ಸೋಲಾರ್‌ ವ್ಯವಸ್ಥೆ ಅಳವಡಿಸಿಕೊಂಡು ಖಾಸಗಿಯವರಿಗೆ ಪ್ರೇರಣೆ ನೀಡುವಂಥ ಕಾರ್ಯಯೋಜನೆ ಮಂಗಳೂರಿನಲ್ಲಿ ರೂಪಿಸಲಾಗಿತ್ತು. ಸರಕಾರಿ ಕಟ್ಟಡಗಳಿಗೆ ಸೋಲಾರ್‌ ಅಳವಡಿಕೆಯಿಂದ ಒಟ್ಟು 550 ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಗುರಿ ಹೊಂದಲಾಗಿತ್ತು. ಜಿಲ್ಲಾಧಿಕಾರಿ, ಮೂಡಾ, ಜಿಲ್ಲಾ ಪಂಚಾಯತ್‌, ಎನ್‌ ಎಂಪಿಟಿ ಸಹಿತ ಕೆಲವು ಸರಕಾರಿ ಕಚೇರಿಗಳಲ್ಲಿ, ಫ್ಲ್ಯಾಟ್‌ ಗಳಲ್ಲಿ, ಮನೆಗಳಲ್ಲಿ ರೂಫ್‌ಟಾಪ್‌ ಸೋಲಾರ್‌ ವ್ಯವಸ್ಥೆ ಅಳವಡಿಕೆಯಾಗಿದೆ.

ಅಭಿಯಾನ ರೂಪ ಪಡೆದುಕೊಳ್ಳಲಿ
ಪರಿಸರ ಸಹ್ಯ, ಪ್ರಕೃತಿದತ್ತ ಸೋಲಾರ್‌ ವಿದ್ಯುತ್‌ ವ್ಯವಸ್ಥೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ, ಜನರಿಂದ ಸ್ಪಂದನೆ ಲಭಿಸುವಂತಹ ಕಾರ್ಯಯೋಜನೆ ರೂಪಿಸಬೇಕಿದೆ. ರೂಫ್‌ಟಾಪ್‌ ಸೋಲಾರ್‌ ವಿದ್ಯುತ್‌ ಉತ್ಪಾದನೆ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜ ಒಂದಷ್ಟು ಜಾಗೃತಿ ಅಭಿಯಾನ ನಡೆಸಿದ್ದಾರೆ. ಜಿಲ್ಲೆಯ 50 ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸೋಲಾರ್‌ ನಿರ್ಮಾಣಕ್ಕೆ ಅವರು ಶಾಸಕರ ನಿಧಿಯಿಂದ ಅನುದಾನ ನೀಡಿದ್ದು, ಅಳವಡಿಕೆಯಾಗಿದೆ.

ವಿದ್ಯುತ್‌ ಕೊರತೆಗೆ ಪರಿಹಾರ
ಮಂಗಳೂರು ತಾಲೂಕಿಗೆ ನಿತ್ಯ ಸರಾಸರಿ 230 ಮೆಗಾ ವ್ಯಾಟ್‌ ವಿದ್ಯುತ್‌ನ ಅಗತ್ಯವಿದೆ. ಸದ್ಯಕ್ಕೆ 200ರಿಂದ 210 ಮೆ.ವ್ಯಾ. ಮಾತ್ರ ಲಭ್ಯವಿದ್ದು, 20ರಿಂದ 30 ಮೆ.ವ್ಯಾಟ್‌ನಷ್ಟು ವಿದ್ಯುತ್‌ ಕೊರತೆ ಎದುರಾಗಿದೆ. ಇದನ್ನು ಸರಿದೂಗಿಸಲು ನಗರ ಹಾಗೂ ಗ್ರಾಮಾಂತರದಲ್ಲಿ ಅನಿರ್ದಿಷ್ಟ ವೇಳೆಯಲ್ಲಿ ವಿದ್ಯುತ್‌ ಕಡಿತ ಅನಿವಾರ್ಯವಾಗುತ್ತದೆ. ಸೋಲಾರ್‌ ವಿದ್ಯುತ್‌ನತ್ತ ಆಸ್ಥೆ ವಹಿಸಿದರೆ, ವಿದ್ಯುತ್‌ ಅಭಾವ ಕೊಂಚ ತಗ್ಗಬಹುದು.

ಉತ್ತಮ ಸ್ಪಂದನೆ
‘ರೂಪ್‌ಟಾಪ್‌ನಲ್ಲಿ ಸೋಲಾರ್‌ ವಿದ್ಯುತ್‌ ಉತ್ಪಾದನೆಯಲ್ಲಿ ದಕ್ಷಿಣ ಕನ್ನಡವು ರಾಜ್ಯದ ಇತರ ಜಿಲ್ಲೆಗಳಿಗಿಂತ ಮುಂದಿದೆ. ಈ ಮಾದರಿಯನ್ನು ಇತರ ಜಿಲ್ಲೆಗಳು ಅನುಸರಿಸುತ್ತಿವೆ. ಮಂಗಳೂರಿನ ಪ್ರಮುಖ ಸರಕಾರಿ ಕಚೇರಿಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಅಳವಡಿಕೆಯಾಗಿದೆ. ಇದು ಹೆಚ್ಚಬೇಕು. ಮೂರು ವರ್ಷಗಳಿಂದ ಸೋಲಾರ್‌ ವಿದ್ಯುತ್‌ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತನಾಗಿದ್ದೇನೆ. ನನ್ನ ಅನುದಾನದಲ್ಲಿ ನೆರವು ನೀಡಿ ಪ್ರೋತ್ಸಾಹಿಸಿದ್ದೇನೆ. ಸರಕಾರದ ಮಟ್ಟದಲ್ಲೂ ಇದಕ್ಕೆ ವಿಶೇಷ ಒತ್ತು ನೀಡುವ
ಪ್ರಯತ್ನಗಳನ್ನು ಮಾಡಿದ್ದು, ಉತ್ತಮ ಸ್ಪಂದನೆ ದೊರಕಿದೆ.
–  ಐವನ್‌ ಡಿ’ಸೋಜಾ,
   ವಿಧಾನ ಪರಿಷತ್‌ ಮುಖ್ಯ ಸಚೇತಕ

   ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next