Advertisement

ನೀರಿನ ಸಮಸ್ಯೆ ನಿರ್ವಹಣೆಗೆ ಗ್ರಾ.ಪಂ.ನಿಂದ ಶಾಶ್ವತ ಪರಿಹಾರ ಕ್ರಮ

11:02 AM Mar 22, 2020 | mahesh |

ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್‌ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ. ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ.

Advertisement

ಒಂದು ಗ್ರಾಮವೇ ಒಂದು ಗ್ರಾ.ಪಂ. ಆಗಿರುವ ಬೆಳುವಾಯಿ ಪಂಚಾಯತ್‌ನಿಂದ ಈ ಬೇಸಗೆ ನೀರಿನ ಸಮಸ್ಯೆ ನಿರ್ವಹಣೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲವೆಡೆ ಬೋರ್‌ವೆಲ್‌ಗ‌ಳನ್ನು ಕೂಡ ಕೊರೆಸಲಾಗಿದೆ. ಇದರಿಂದಾಗಿ ನೀರಿನ ಸಮಸ್ಯೆ ನಿರ್ವಹಣೆೆಯಾಗುತ್ತದೆ. ಅಗತ್ಯವಿದ್ದಲ್ಲಿ ನೀರು ಪೂರೈಸಲು ಪಂಚಾಯತ್‌ ಸದಾ ಸಿದ್ಧವಾಗಿದೆ.

ಮೂಡುಬಿದಿರೆ: ಬೆಳುವಾಯಿ ಗ್ರಾಮ ಪಂಚಾಯತ್‌ನಲ್ಲಿರುವುದು ಒಂದೇ ಗ್ರಾಮ. ಇಡೀ ಪಂಚಾಯತ್‌ ಒಂದು ತಾ.ಪಂ. ಕ್ಷೇತ್ರ. ಹಾಗಾಗಿ ಇದೊಂದು ವಿಶಿಷ್ಟ ಗ್ರಾಮ ಪಂಚಾಯತ್‌. ಏಳು ವಾರ್ಡ್‌ ಗಳಲ್ಲಿರುವ 3,650 ಮನೆಗಳ ಪೈಕಿ ಸುಮಾರು 1,300 ಮನೆಗಳಿಗೆ ಸ್ವಂತ ತೆರೆದ ಬಾವಿ ಇದೆ. 1,100 ನಳ್ಳಿ ನೀರಿನ ಸಂಪರ್ಕ ಇದೆ. ಎಲ್ಲ ಸಂಪರ್ಕಗಳಿಗೂ ಮೀಟರ್‌ ಅಳವಡಿಸಲಾಗಿದೆ.

ಮಲೆಬೆಟ್ಟು, ಮಾಲಾಡಿ 5 ಸೆಂಟ್ಸ್‌, ಕಾನ, ಅಂಬೂರಿ, ಕುಕ್ಕುಡೇಲು, ಮೂಡಾಯಿಕಾಡ್‌, ಪಾದೆ, ಪೆಲಕುಂಜ, ಚಂದಯ್ಯ ಕಂಪೌಂಡ್‌, ಖಂಡಿಗ ದರ್ಕಾಸ್‌, ಅಕ್ಷರಪುರ ಇಲ್ಲೆಲ್ಲ ನೀರನ್ನು ಟ್ಯಾಂಕರ್‌ ಮೂಲಕ ನಿಯಮಿತವಾಗಿ ಪೂರೈಸಬೇಕಾಗಿತ್ತು. ಆಗ ಇದ್ದ 18 ಬೋರ್‌ವೆಲ್‌ಗ‌ಳಿಂದಲೇ ನೀರಿನ ಸಮಸ್ಯೆ ಇರುವಲ್ಲಿಗೆ ಪೂರೈಸಬೇಕಾಗಿತ್ತು. ಅದಕ್ಕಾಗಿ ರೂ. 3.47 ಲಕ್ಷ ವೆಚ್ಚವಾಗಿತ್ತು. ಟ್ಯಾಂಕರ್‌ನಿಂದ ನೀರು ಪೂರೈಸುವ ತಾತ್ಕಾಲಿಕ ಕ್ರಮಗಳಿಗೆ ಜಿಲ್ಲಾಡಳಿತ ಒಪ್ಪದೆ ಶಾಶ್ವತ ಪರಿಹಾರ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚಿಸಿದ ಕಾರಣ ಈಗ ಒಟ್ಟು 9 ಬೋರ್‌ವೆಲ್‌ಗ‌ಳನ್ನು ನಿರ್ಮಿಸಲಾಗಿದೆ. ಹಾಗಾಗಿ, ಈ ಬಾರಿ ಎಲ್ಲೂ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗದು ಎಂಬ ಭರವಸೆ ಇದೆ.
ಜಿ.ಪಂ. ಅನುದಾನದಿಂದ ಕಾನ, ಚಿಲಿಂಬಿ, ಪಾದೆ ಪರಿಸರದ ಅಳಿಯೂರು ರಸ್ತೆ, ಬಡಕಾಯಿ ಜಾಲು ಹಾಗೂ ಗ್ರಾ.ಪಂ. ಕಚೇರಿ ಪ್ರದೇಶ ಹೀಗೆ 5 ಕಡೆಗಳಲ್ಲಿ ರೂ. 10 ಲಕ್ಷ ವೆಚ್ಚದಲ್ಲಿ ಬೋರ್‌ವೆಲ್‌ಗ‌ಳನ್ನು ಕೊರೆಯಲಾಗಿದೆ. ಪಂಚಾಯತ್‌ನಿಂದ 4 ಬೋರ್‌ವೆಲ್‌ಗ‌ಳನ್ನು ಕಾನ ಬ್ರಹ್ಮಲಿಂಗೇಶ್ವರ ಸ್ಥಾನ, ಗಾಂಧಿನಗರ, ಮಂಜನಕಟ್ಟೆ, ಮಲೆಬೆಟ್ಟು, ನಡಿಗುಡ್ಡೆ ಇಲ್ಲೆಲ್ಲ ತೋಡಲಾಗಿದೆ.

ಪೈಪ್‌ಲೈನ್‌ ವಿಸ್ತರಣೆ
ಗ್ರಾ.ಪಂ. ಕಚೇರಿಯಿಂದ ಹೈಸ್ಕೂಲ್‌ವರೆಗೆ (ರೂ. 0.50 ಲಕ್ಷ), ಮಂಜನಕಟ್ಟೆ (ರೂ.1.00 ಲಕ್ಷ), ಅಳಿಯೂರು ರಸ್ತೆ (0.50 ಲಕ್ಷ), ಬಡಕಬೈಲು (0.60 ಲಕ್ಷ), ಚಿಲಿಂಬಿ (ಜಿ.ಪಂ. ಬೋರ್‌ವೆಲ್‌ ಕೊರೆದು ಪೈಪ್‌ಲೈನ್‌ ವಿಸ್ತರಣೆ -ರೂ. 2 ಲಕ್ಷ ), ಚೇತನಾ ಬಾರ್‌ ಬೋರ್‌ವೆಲ್‌ ವಿದ್ಯುದೀಕರಣ (0.45 ಲಕ್ಷ), ನಡಿಗುಡ್ಡೆ ಮೂರು ಮಾರ್ಗ ಬೈಲಬರಿ (1.107 ಲಕ್ಷ) ಇಲ್ಲೆಲ್ಲ ಪೈಪ್‌ಲೈನ್‌ ವಿಸ್ತರಣೆ ಆಗಿದೆ.

Advertisement

ರೂ. 27.19 ಲಕ್ಷ ವಿನಿಯೋಗ
ಗ್ರಾ. ಪಂ. ವತಿಯಿಂದ ವಿವಿಧೆಡೆ ಕುಡಿಯುವ ನೀರಿನ ಪೂರೈಕೆಗಾಗಿ (ಬೋರ್‌ವೆಲ್‌ ರಚನೆ, ಪಂಪು, ವಿದ್ಯುದೀಕರಣ, ಪೈಪ್‌ಲೈನ್‌ ವಿಸ್ತರಣೆ , ಕಾನದಲ್ಲಿ ತಡೆಗೋಡೆ ಅಭಿವೃದ್ಧಿ, ಹಲಗೆ ಜೋಡಣೆ ಸಹಿತ) 14ನೇ ಹಣಕಾಸು ಯೋಜನೆಯಿಂದ ರೂ. 13,64,807, ಪಂಚಾಯತ್‌ ನಿಧಿ 1ರಲ್ಲಿ 3.55 ಲಕ್ಷ, ಜಿಲ್ಲಾ ಪಂಚಾಯತ್‌ನಿಂದ ರೂ. 10 ಲಕ್ಷ ಹೀಗೆ ಒಟ್ಟು ರೂ. 27,19,807 ವಿನಿಯೋಗವಾಗಿದೆ. ಕಿಂಡಿ ಅಣೆಕಟ್ಟು ಗುಜ್ಜರಗುಂಡಿಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. ಇದರಿಂದ ಹತ್ತಿರದ ದಡ್ಡು ಪ್ರದೇಶದಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ. ಕಾನದಲ್ಲಿ 75 ಸಾವಿರ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ಅಭಿವೃದ್ಧಿಪಡಿಸಲಾಗಿದೆ. ಕಟ್ಟದಪಲ್ಕೆ, ಮೂಡಾಯಿಕಾಡ್‌, ಶಾಂತಿನಗರ, ಹೇನ್‌ಬೆಟ್ಟು, ಪೆಲಕುಂಜ, ಪೆರೋಡಿ ಕಾಪಿಕಾಡ್‌ ಇಲ್ಲಿ ಬೋರ್‌ವೆಲ್‌ ರೀಚಾರ್ಜ್‌ ಮಾಡುವ ಮೂಲಕ ಜಲನಿಧಿಗೆ ಬಲ ನೀಡಿದಂತಾಗಿದೆ.

9 ಹೊಸ ಬೋರ್‌ವೆಲ್‌ ಕೊರೆಸಲಾಗಿದೆ
ಈ ಹಿಂದೆ ಕೆಲವೆಡೆ ಟ್ಯಾಂಕರ್‌ ನಲ್ಲಿ ನಿಯಮಿತ ವಾಗಿ ನೀರು ಪೂರೈಸ ಲಾಗಿತ್ತಾದರೆ ಈ ಬಾರಿ ಈ ಎಲ್ಲ ಪ್ರದೇಶಗಳಿಗೆ ನೀರು ಒದಗಿಸಲು ಸದಾ ಸಿದ್ಧವಾಗಿರಲು 9 ಹೊಸ ಬೋರ್‌ವೆಲ್‌ ಕೊರೆಸಲಾಗಿದೆ. ಕೆಲವು ಕೊಳವೆ ಬಾವಿಗಳಿಗೆ ನೀರು ಮರುಪೂರಣ ಮಾಡಲಾಗಿರುವುದರಿಂದ, ಹಲವೆಡೆ ಕಿಂಡಿ ಅಣೆಕಟ್ಟು ನಿರ್ಮಿಸಿರುವುದರಿಂದ ನೀರಿನ ಮಟ್ಟದಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದೆ. ಹೀಗಾಗಿ ಈ ಬಾರಿ ಎಲ್ಲೂ ನೀರಿನ ಪೂರೈಕೆಯಲ್ಲಿ ಕೊರತೆ ಕಂಡುಬರುವ ಸಾಧ್ಯತೆಯೇ ಇಲ್ಲ ಎಂಬ ವಿಶ್ವಾಸವಿದೆ.
– ಭೀಮಾ ನಾಯ್ಕ, ಪಂಚಾಯತ್‌ಅಭಿವೃದ್ಧಿ ಅಧಿಕಾರಿ

ಮಠದ ಕೆರೆಯ ಉದ್ಧಾರವೂ ಈ ಹಿಂದೆಯೇ ಆಗಿದ್ದು ಅದರಿಂದಲೂ ಉತ್ತಮ ಫಲಿತಾಂಶ ದೊರೆತಿದೆ.

ವಿದ್ಯುತ್‌ ಸಂಪರ್ಕ ಸಮಸ್ಯೆ
ಹೊಸದಾಗಿ ನಿರ್ಮಾಣ ವಾಗಿರುವ ಬೋರ್‌ವೆಲ್‌ಗ‌ಳಿಗೆ ಮೋಟಾರ್‌ ಪಂಪ್‌ ಜೋಡಿಸಲಾಗಿದೆ. ಆದರೆ ವಿದ್ಯುತ್‌ ಸಂಪರ್ಕ ಇನ್ನೂ ಕೊಡಲಾಗಿಲ್ಲ. ಕಾರಣ ಸ್ಪಷ್ಟ: ಈ ಎಲ್ಲ ಬೋರ್‌ವೆಲ್‌ಗ‌ಳಿಗೆ ವಿದ್ಯುತ್‌ ಸಂಪರ್ಕ ನೀಡಲು ಅಗತ್ಯವಾದ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಾಪಿಸಲು ರೂ. 3 ಲಕ್ಷ ಶುಲ್ಕ ಪಾವತಿಸಬೇಕಾಗಿದೆ. ಗ್ರಾ.ಪಂ. ಗಳಲ್ಲಿ ಅಷ್ಟೊಂದು ದೊಡ್ಡ ಸಂಪನ್ಮೂಲ ಇಲ್ಲ. ಕುಡಿಯುವ ನೀರು ಪೂರೈಕೆ ಒಂದು ಮೂಲ ಆವಶ್ಯಕತೆಯಾಗಿದ್ದು ಸರಕಾರ ಈ ಶುಲ್ಕದಲ್ಲಿ ರಿಯಾಯಿತಿ ತೋರಿಸಿದರೆ ಮುಂದೆ ಬಳಕೆಯಾದ ನೀರಿನ ಬಗ್ಗೆ ಮೀಟರ್‌ ಓಡಿದಷ್ಟು ಶುಲ್ಕ ಪಾವತಿಸಲು ಸಾಧ್ಯವಾಗುತ್ತದೆ
– ಸೋಮನಾಥ ಕೋಟ್ಯಾನ್‌ಅಧ್ಯಕ್ಷರು, ಬೆಳುವಾಯಿ ಗ್ರಾ.ಪಂ.

ಬೆಳುವಾಯಿ ಮತ್ತು ಕಾನ ಪ್ರದೇಶಗಳಿಗೆ ನೀರು ನಿರ್ವಹಣ ಸಮಿತಿಗಳನ್ನು ರೂಪಿಸಿ ಕಾರ್ಯಾಚರಿಸಲಾಗುತ್ತಿದೆ. ಸಮಿತಿಯು ಆಗಾಗ ಸಭೆ ಸೇರಿ ಎಲ್ಲರಿಗೂ ನೀರಿನ ಹಂಚಿಕೆ ಸಮರ್ಪಕವಾಗಿ ನಡೆಸುವ ಬಗ್ಗೆ ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡು ಜಾರಿಗೊಳಿಸಲಾಗುತ್ತಿದೆ.ಕಾನ ಪ್ರದೇಶದ ಉದಯ ದೇವಾಡಿಗ, ಡೊಂಬಯ್ಯ ಮೂಲ್ಯ ಅವರು ತಮ್ಮ ಜಲಮೂಲಗಳಿಂದ ಪರಿಸರದ ಸುಮಾರು 20 ಮನೆಗಳಿಗೆ ಪಂಚಾಯತ್‌ ಪೈಪ್‌ಲೈನ್‌ ಮೂಲಕ ನೀರು ಒದಗಿಸಿದೆ.

 ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next