Advertisement
ಪ್ರಸ್ತಾವನೆಯಲ್ಲಿ ಬಾಕಿಐದಾರು ವರ್ಷಗಳ ಹಿಂದೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿತ್ತು. ನ.ಪಂ.ನ ಹಲವು ಸಾಮಾನ್ಯ ಸಭೆಗಳಲ್ಲಿ ಈ ವಿಚಾರ ಪ್ರಸ್ತಾವವಾಗಿತ್ತು. ಅದರಿಂದ ಜನರಿಗೆ ಏನೂ ಪ್ರಯೋಜನ ಆಗಿಲ್ಲ. ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಕೊಟ್ಟ ಆಶ್ವಾಸನೆಯೂ ಈಡೇರಿಲ್ಲ. ಸರ್ವ ಪಕ್ಷ ನಿಯೋಗ ತೆರಳುವ ಪ್ರಸ್ತಾವವೂ ಇಚ್ಛಾಶಕ್ತಿಯ ಕೊರತೆಯಿಂದ ಗುರಿ ಮುಟ್ಟಿಲ್ಲ.
ಕಲ್ಲುಮುಟ್ಲು ಪಂಪ್ ಹೌಸ್‌ನಲ್ಲಿ 50 ಲಕ್ಷ ಗ್ಯಾಲನ್‌ನ ಎರಡು ಹಾಗೂ 1 ಲಕ್ಷ ಒಂದು ಟ್ಯಾಂಕ್ ಇದೆ. ಅಲ್ಲಿಂದ ನಗರದ ಬೇರೆ ಭಾಗಗಳಿಗೆ ನೀರು ಹರಿಸಲಾಗುತ್ತದೆ. ಕೆಲವೆಡೆ ಕೊಳವೆಬಾವಿ ಮೂಲಕ ಬಳಸಲಾಗುತ್ತದೆ. ಆರಂಭದಲ್ಲಿ ಪಯಸ್ವಿನಿ ನದಿಯಿಂದ ಜಾಕ್‌ವೆಲ್ ಮೂಲಕ ನೀರು ಮೇಲೆತ್ತಿ, ಶುದ್ಧೀಕರಣದ ಬಳಿಕ ಕುಡಿಯಲು ಬಳಸಬೇಕು. ಆದರೆ ಇಲ್ಲಿ ಶುದ್ಧೀಕರಣ ಯಂತ್ರ ಸರಿಯಾಗಿಲ್ಲದ ಕಾರಣ ಹೊಳೆಯಲ್ಲಿ ಬರುವ ನೀರನ್ನು ನೇರವಾಗಿ ಜನರು ಬಳಸಬೇಕಿದೆ. ಮಳೆಗಾಲದ ಸಂದರ್ಭದಲ್ಲಿ ಹಲವು ಬಾರಿ ಕೆಸರು ಮಿಶ್ರಿತ ನೀರಿನ ಕಾರಣ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಭಾರೀ ಮಳೆಯ ಮಧ್ಯೆಯೂ ಟ್ಯಾಂಕರ್ ಬಳಸಿ ನೀರು ಹರಿಸುವ ಸ್ಥಿತಿ ಉಂಟಾಗಿತ್ತು. ಮಳೆ ಬಂದರೆ ಪಾರು
ಪಯಸ್ವಿನಿ ನೀರಿನ ಹರಿವು ಕ್ಷೀಣವಾದಂತೆ ನ.ಪಂ. ವತಿಯಿಂದ ನಾಗಪಟ್ಟಣ ಸೇತುವೆ ಬಳಿ ಮರಳಿನ ಕಟ್ಟ ಜೋಡಿಸಿ ನೀರು ಸಂಗ್ರಹಿಸಲಾಗುತ್ತದೆ. 2016ರಲ್ಲಿ ಆ ಕಟ್ಟದಲ್ಲಿ ನೀರು ಬತ್ತಿ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಆತಂಕ ಎದುರಾಗಿತ್ತು. ಅದೇ ಹೊತ್ತಿಗೆ ಮಳೆಯಾದ ಕಾರಣ ನಗರವಾಸಿಗಳು ಪಾರಾಗಿದ್ದರು. ಆದರೆ ಈ ಬಾರಿಯ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ನದಿ ಮಟ್ಟದ ನೀರಿನ ಹರಿವು ಕಡಿಮೆಯಾಗಿದೆ. ಇದರಿಂದ ಬೇಸಗೆಯಲ್ಲಿ ನೀರಿನ ಬರ ಕಾಡುವ ಬಗ್ಗೆ ಜಲ ತಜ್ಞರು ಎಚ್ಚರಿಕೆ ನೀಡಿದ್ದಾರೆ.
Related Articles
40ಕ್ಕೂ ಅಧಿಕ ವರ್ಷಗಳ ಹಿಂದೆ ನಿರ್ಮಿಸಿದ ಕುಡಿಯುವ ನೀರಿನ ಘಟಕವೇ ಈಗಲೂ ಇದೆ. ನಗರದ ಜನಸಂಖ್ಯೆ ನಾಲ್ಕು ಪಟ್ಟು ಏರಿದೆ. 18 ವಾರ್ಡ್ ಇದ್ದುದು ಈ ಸಲ 20 ಆಗಿವೆ. 4,000ಕ್ಕೂ ಮಿಕ್ಕಿ ನಳ್ಳಿ ಸಂಪರ್ಕ ಬಳಕೆದಾರರು ಇದ್ದಾರೆ. ಕಲ್ಲುಮುಟ್ಲು ಪಂಪ್‌ಹೌಸ್‌ನ ಹಳೆಯ ವಾಟರ್ ಟ್ರೀಟ್ ಪ್ಲಾಂಟ್‌ನಿಂದ ನಗರಕ್ಕೆ ನೀರೊದಗಿಸಲಾಗುತ್ತಿದೆ. ಆದರೆ ಇದು ಇಲ್ಲಿನ ಬೇಡಿಕೆಗೆ ತಕ್ಕಂತೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ವರ್ಷವಿಡೀ ಪೂರೈಕೆ ವ್ಯವಸ್ಥೆ ಲೋಪ, ಬೇಸಗೆಯ ಶಾಪ ಜನರಿಗೆ ತಪ್ಪಿಲ್ಲ.
Advertisement
ಏನಿದು ಯೋಜನೆ?ಶಾಶ್ವತ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಒಟ್ಟು 65.5 ಕೋಟಿ ರೂ. ಯೋಜನೆಯಿದು. ನಾಗಪಟ್ಟಣ ಸೇತುವೆ ಬಳಿ 13.4 ಕೋ.ರೂ. ವೆಚ್ಚದ ವೆಂಟೆಡ್ ಡ್ಯಾಂ, ಜಾಕ್ ವೆಲ್, ಪಂಪ್ ಹೌಸ್, 200 ಎಚ್‌ಪಿಯ ಎರಡು ಪಂಪ್ ಅಳವಡಿಕೆ, 8.5 ಎಂಎಲ್‌ಡಿ ವಾಟರ್ ಟ್ರೀಟ್ ಪ್ಲಾಂಟ್ ನಿರ್ಮಾಣ, ಕುರುಂಜಿಗುಡ್ಡೆಯಲ್ಲಿ 2.8 ಕೋಟಿ ರೂ. ವೆಚ್ಚದಲ್ಲಿ 15 ಲಕ್ಷ ಲೀಟರ್ ನೀರು ಸಂಗ್ರಹದ ಟ್ಯಾಂಕ್, ಜಯನಗರ, ಬೋರುಗುಡ್ಡೆ, ಕಲ್ಲುಮುಟ್ಲುವಿನಲ್ಲಿ 3.38 ಕೋಟಿ ರೂ. ವೆಚ್ಚದಲ್ಲಿ 5 ಲಕ್ಷ ಲೀ. ನೀರು ಸಂಗ್ರಹದ ಮೂರು ಟ್ಯಾಂಕ್, 84 ಲಕ್ಷ ರೂ. ವೆಚ್ಚದಲ್ಲಿ 2.5 ಲಕ್ಷ ಲೀ. ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಕಾಮಗಾರಿ ಕೈಗೆತ್ತಿಕೊಳ್ಳುವ ಕುರಿತು ಪ್ರಸ್ತಾವಿಸಲಾಗಿತ್ತು. ವಿಶೇಷ ವರದಿ