ಮೈಸೂರು: ವಿದ್ಯಾರ್ಥಿಗಳು ತ್ರಿಕಾಲ ಪ್ರಜ್ಞೆಯನ್ನು ಮೈಗೂಡಿಸಿಕೊಂಡು, ಎಚ್ಚರದಿಂದ ಸಾಗಿದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಬಹುದು ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಪ್ರೊ. ನೀಲಗಿರಿ ಎಂ. ತಳವಾರ್ ಹೇಳಿದರು.
ಕಸಾಪ ಸಹಯೋಗದಲ್ಲಿ ನಗರದ ವಿಜಯ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕುವೆಂಪು-ಕಾವ್ಯ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ ಜೀವನ ತಪಸ್ಸಿನಂತಿದ್ದು, ಸ್ವಪ್ರಯತ್ನ, ಗುರುವಿನ ಮಾರ್ಗದರ್ಶನದ ಜತೆಗೆ ಸ್ವತಂತ್ರ ಚಿಂತನೆ ಹೊಂದಿದಾಗ ಮಾತ್ರ ತಪಸ್ಸಿನ ಫಲ ದೊರಕಲಿದೆ ಎಂದರು.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಉತ್ಸಾಹ ಕಲ್ಲಿದ್ದಲಿನ ಕಾವಿನಂತೆ ನಿರಂತರವಾಗಿರಬೇಕೆ ಹೊರತು ಹುಲ್ಲಿಗೆ ಹತ್ತಿದ ಬೆಂಕಿಯಂತೆ ತಾತ್ಕಾಲಿಕವಾಗಿರಬಾರದು. ವಿದ್ಯಾರ್ಥಿಗಳು ಕೇವಲ ಕಂಠಪಾಠ, ಗಿಳಿಪಾಠಗಳನ್ನು ಅಭ್ಯಾಸ ಮಾಡುವುದರಿಂದ ಗುರಿ ತಲುಪಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕೇ ಹೊರತು ಭತ್ತ ತುಂಬುವ ಚೀಲಗಳಾಗಬಾರದು ಎಂದು ತಿಳಿಸಿದರು.
ಸಾಹಿತ್ಯ ಒಂದು ಸಂಜೀವಿನಿಯಾಗಿದ್ದು, ಅದರ ಅಧ್ಯಯನ ಬದುಕಿನಲ್ಲಿ ಆವರಿಸಿರುವ ಜಡತ್ವ, ಅಂಧಕಾರ ನಿವಾರಿಸುವ ಬೆಳಕಾಗಿದೆ. ಕುವೆಂಪು ಅವರ ಸಾಹಿತ್ಯದ ಮುಖ್ಯಗುಣ ಅದರ ಸಾರ್ವಕಾಲಿಕ ಪ್ರಸ್ತುತತೆಯಾಗಿದ್ದು, ಕುವೆಂಪು ಋಷಿಕವಿ, ಪ್ರಕೃತಿ ಕವಿ, ಮೇರುಕವಿ, ವಿಶ್ವಮಾನವ ಕವಿಯಾಗಿದ್ದಾರೆ. ಈ ಕಾರಣದಿಂದಲೇ ಬೇಂದ್ರೆ ಅವರು ಕುವೆಂಪುರನ್ನು ಜಗದಕವಿ, ಯುಗದಕವಿ ಎಂದು ಹೊಗಳಿದ್ದಾರೆ ಎಂದರು.
ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಪರಿಸರ, ರೈತರ ಹಾಗೂ ಸ್ತ್ರೀ ಸಂವೇದನೆ ವ್ಯಕ್ತಪಡಿಸಿದ್ದು, ಹೀಗಾಗಿಯೇ ಕುವೆಂಪು ಅವರು ಪುರುಷ ಮಣಿಯಂತಿದ್ದು, ಅವರನ್ನು ಸ್ಪರ್ಶಿಸಿದ ಎಲ್ಲರನ್ನು ಹೊನ್ನಾಗಿ ಪರಿವರ್ತಿಸಬಲ್ಲ ಸಾಮರ್ಥ್ಯವುಳ್ಳ ವ್ಯಕ್ತಿತ್ವ ಅವರದಾಗಿತ್ತು ಎಂದು ಬಣ್ಣಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಕುವೆಂಪು ಅವರು ತಮ್ಮ ಕೃತಿಗಳ ಮೂಲಕ ವೈಚಾರಿಕ ಮನೋಭಾವವನ್ನು ವ್ಯಕ್ತಪಡಿಸಿದ್ದು, ಅವರ ಸಾಹಿತ್ಯ ಕಾಲಕ್ಕೆ ಹಿಡಿದ ಕನ್ನಡಿಯಾಗಿದೆ. ಅಲ್ಲದೆ ಪದಗಳ ಔಚಿತ್ಯವನ್ನರಿತು ಕಡಿಮೆ ಅವಧಿಯಲ್ಲಿ ಅಗಾಧವಾದ ಅರ್ಥ ಹೇಳುವ ಸಾಹಿತ್ಯವೇ ಕಾವ್ಯವಾಗಿದ್ದು, ಕಾವ್ಯಕ್ಕೆ ನಮ್ಮೊಳಗಿನ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸುವ ಶಕ್ತಿಯಿದೆ.
ಈ ಹಿನ್ನೆಲೆ ವಿದ್ಯಾರ್ಥಿಗಳು ಜಾnನಸಂಪಾದನೆಗೆ ಕುವೆಂಪು ಅವರಂತಹ ಮಹಾನ್ ಚೇತನರ ಸಾಹಿತ್ಯ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕಿದೆ ಎಂದರು. ವಿಜಯ ವಿಠಲ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಆರ್. ವಾಸುದೇವಭಟ್, ಸಂಸ್ಕೃತಿ ಚಿಂತಕ ಗುಬ್ಬಿಗೂಡು ರಮೇಶ್, ಕಾಲೇಜಿನ ಪ್ರಾಂಶುಪಾಲ ಎಚ್.ಸತ್ಯಪ್ರಸಾದ್, ಸಂಚಾಲಕ ಎಸ್.ಎಸ್. ರಮೇಶ್, ಎನ್. ಅನಿತಾ ಇತರರು ಇದ್ದರು.