ಅಮೀನಗಡ: ಜಗತ್ತಿನ ಪ್ರತಿಯೊಬ್ಬ ಸಾಧಕನಿಗೂ ಅವನ ಬೆನ್ನ ಹಿಂದೆ ಒಬ್ಬ ಶ್ರೇಷ್ಠ ಗುರುವಿದ್ದಾಗಲೇ ಸಾಧನೆ ಸಾಧ್ಯವಾಯಿತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ ಎಂದು ಬೆಳಗಾವಿ ಶೇಗುಣಸಿ ವಿರಕ್ತಮಠದ ಮಹಾಂತ ದೇವರು ಹೇಳಿದರು.
ಸಮೀಪದ ಗುಡೂರಿನಲ್ಲಿ 1990ರ ತಂಡದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸ್ನೇಹ ಸಂಗಮ ಹಾಗೂ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ತಾಯಿಯ ನಂತರ ಗುರುವೇ ತಾಯಿ ತಂದೆಯಾಗಿ ಬದುಕು ರೂಪಿಸಿದ ಅನೇಕ ಉದಾಹರಣೆಗಳಿವೆ. ಜ್ಯೋತಿಬಾ ಫುಲೆಯವರ ಉದಾಹರಣೆ ನೀಡಿದ ಅವರು ಪಾಮರರನ್ನು ಪರಮಾತ್ಮನನ್ನಾಗಿಸಿದ ಶಕ್ತಿಯಿರುವುದು ಗುರುವಿನಲ್ಲೇ. ಗುರು ಕರುಣೆ, ಮಮತೆ, ದಯೆ, ಜ್ಞಾನಗಳನ್ನು ಹೊಂದಿರುವ ಕರುಣಾಮಯಮೂರ್ತಿ. 28 ವರ್ಷಗಳ ನಂತರವೂ ವಿದ್ಯಾರ್ಥಿಗಳು ತಮಗೆ ಜ್ಞಾನ ನೀಡಿದ ಗುರುಗಳನ್ನು ನೆನೆಸಿಕೊಂಡು ಅವರನ್ನು ಸತ್ಕರಿಸುವುದರ ಮೂಲಕ ಗುರುಭಕ್ತಿಯನ್ನು ಮೆರೆಯುತ್ತಿರುವುದು ಇಂದಿನ ದಿನಗಳಲ್ಲಿ ಮಾದರಿ. ಇದೊಂದು ಪುಣ್ಯ ಕಾರ್ಯ. ಈ ಸಂಸ್ಕಾರ, ಸಂಸ್ಕೃತಿ ನಿಮ್ಮ ಮಕ್ಕಳಲ್ಲೂ ಬಿತ್ತಿರಿ. ಮಾತಾಪಿತೃ,ಗುರುದೈವ ಸಂಸ್ಕಾರ ಹೆಚ್ಚಾಗಲಿ ಎಂದರು.
ವಿದ್ಯಾರ್ಥಿಗಳ ಗುರುವಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಎ.ಎಸ್.ಗಂಜಿಹಾಳ, ಅಂದಿನ ವಿದ್ಯಾರ್ಥಿಗಳು ಇಂದು ಸಿಗುವುದು ಕಠಿಣವಾಗಿದೆ. ಅಂದಿನ ಗುರುಭಕ್ತಿಯೇ ಇಂದು ಈ ರೂಪದಲ್ಲಿ ಸಾಕಾರಗೊಳ್ಳುತ್ತಿರುವುದು ಸಾರ್ಥಕತೆ ತರುತ್ತದೆ ಎಂದರು.
ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ವೆಂಕಟೇಶ ಜಿತೂರಿ, ಇಷ್ಟು ವರ್ಷ ಗತಿಸಿದರೂ ಗುರುವಂದನೆ ಸಲ್ಲಿಸಬೇಕು. ಸ್ನೇಹ ಬಳಗ ಕೂಡಬೇಕು ಎಂದು ಸಂಘಟಿಸಿರುವುದು ಗುರುಗಳು ನೀಡಿದ ಉತ್ತಮ ಸಂಸ್ಕಾರವೇ ಕಾರಣ. ಈ ಸಂಸ್ಕಾರ ಇಂದಿನ ಶಾಲೆಗಳಲ್ಲಿರುವುದು ದೌರ್ಭಾಗ್ಯ. ಗುರುವಿಗೆ ಶಿಷ್ಯನಲ್ಲಿ ಪ್ರೀತಿಯಿಲ್ಲ, ಶಿಷ್ಯನಿಗೆ ಗುರುಭಕ್ತಿಯಿಲ್ಲ, ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣಗಳಾಗಿವೆ. ಇಂದಿನ ಈ ವಿದ್ಯಾರ್ಥಿಗಳ ಸಂಗಮ ಸಂಘಟನೆಗೊಂಡು, ಬಡ ಸ್ನೇಹಿತರ ಕುಟುಂಬಗಳಿಗೆ ಆರ್ಥಿಕ ಸಹಕಾರ ನೀಡುವಂತಾಗಬೇಕು. ಅದಕ್ಕಾಗಿ ನಾನು ಪ್ರತಿ ವರ್ಷ 25 ಸಾವಿರ ರೂ.ಮೀಸಲಿಡುತ್ತೇನೆ ಎಂದರು.
ವಿಜಯಪುರ ಮಹಿಳಾ ವಿವಿ ಸೆನೆಟ್ ಸದಸ್ಯ ಎಂ.ಎಲ್. ಶಾಂತಗೇರಿ ಮಾತನಾಡಿ, ನಾವು ಇಂದು ಉತ್ತಮ ಸ್ಥಾನಗಳಲ್ಲಿರಬೇಕಾದರೆ, ಅಂದಿನ ಗುರುಗಳ ಶಿಕ್ಷಣದ ಕಳಕಳಿ. ನಮಗೆ ಕಲಿಸುತ್ತಿದ್ದ ಶಿಕ್ಷಣವೇ ಕಾರಣ ಎಂದರು. ಇದೇ ಸಂಧರ್ಭದಲ್ಲಿ ಹಳೆ ವಿದ್ಯಾರ್ಥಿ ಮಲ್ಲಿಕಾರ್ಜುನ ವಸ್ತ್ರದ ಹಾಗೂ ವಿಧ್ಯಾರ್ಥಿಗಳು ಅಂದಿನ ಶಿಕ್ಷಣ ಹಾಗೂ ತಮ್ಮ ಗುರು ಶಿಷ್ಯ ಸಂಬಂಧದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕರಾದ ಎಸ್.ಆರ್. ಶಿರಕನಹಳ್ಳಿ, ಎಸ್. ಆರ್. ವಸ್ತ್ರದ, ಎ.ಎಸ್. ಗಂಜಿಹಾಳ, ಎ.ಎ.ಬದಿ, ಜಿ.ಕೆ. ವ್ಯಾಪಾರಿ, ಜಿ.ಎಂ. ಮೂಲಿಮನಿ, ಸಿ.ಜಿ. ಬಿದರಿ, ವಿ.ಎಂ. ಹಿರೇಮಠ, ಎಸ್.ಎಸ್. ನಗಾರಿ ಗುರುಗಳನ್ನು ಸನ್ಮಾನಿಸಲಾಯಿತು. ಪ್ರಭು ಮಾಲಗಿತ್ತಿಮಠ ಶ್ರೀಗಳ ಪರಿಚಯ ಮಾಡಿದರು. ಸುಮಿತ್ರಾ ಪತ್ತಾರ ಪ್ರಾರ್ಥಿಸಿದರು. ವೆಂಕಟೇಶ ಜಿತೂರಿ ಸ್ವಾಗತಿಸಿದರು.