ಹೊಸದಿಲ್ಲಿ : ಕಳೆದ 12 ವರ್ಷಗಳ ಕಾಲ ಪೆಪ್ಸಿಕೋ ಸಿಇಓ ಆಗಿ ದುಡಿದ ಭಾರತೀಯ ಮಹಿಳೆ ಇಂದ್ರಾ ನೂಯಿ ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಪೆಪ್ಸಿಕೋ ಇಂಕ್ ಇಂದು ಸೋಮವಾರ ಪ್ರಕಟಿಸಿದೆ.
ಅಧ್ಯಕ್ಷ ರೇಮನ್ ಲ್ಯಾಗುರ್ತಾ ಅವರನ್ನು ಸಂಸ್ಥೆಯು ಇಂದ್ರಾ ನೂಯಿ ಅವರ ಉತ್ತರಾಧಿಕಾರಿಯಾಗಿ ಹೆಸರಿಸಿದೆ.
ಕಳೆದ 24 ವರ್ಷಗಳಿಂದ ಪೆಪ್ಸಿ ಕೋ ಸಂಸ್ಥೆಯ ಜತೆಗಿದ್ದ 62ರ ಹರೆಯದ ನೂಯಿ ಅವರು 2019ರ ಆದಿಯ ವರೆಗೆ ಕಂಪೆನಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷೆಯಾಗಿರುತ್ತಾರೆ ಎಂದು ಸಂಸ್ಥೆ ಹೇಳಿದೆ.
ಪೆಪ್ಸಿಕೋ ಜತೆಗೆ ಕಳೆದ 22 ವರ್ಷಗಳಿಂದ ಇರುವ ಅಧ್ಯಕ್ಷ ರೇಮನ್ ಲ್ಯಾಗುರ್ತಾ ಅವರು ಸಂಸ್ಥೆಯ ಜಾಗತಿಕ ಕಾರ್ಯ ನಿರ್ವಹಣೆ, ಕಾರ್ಪೊರೇಟ್ ತಂತ್ರಗಾರಿಕೆ, ಸಾರ್ವಜನಿಕ ನೀತಿ ಮತ್ತು ಸರಕಾರಿ ವ್ಯವಹಾರಗಳನ್ನು ನೋಡಿಕೊಂಡಿದ್ದರು.
ಲ್ಯಾಗುರ್ತಾ ಅವರು ಪೆಪ್ಸಿಕೋ ಅಧ್ಯಕ್ಷರಾಗುವ ಮುನ್ನ ಕಂಪೆನಿಯ ಯುರೋಪ್ ಉಪ ಸಹಾರಾ ಆಫ್ರಿಕ ವಿಭಾಗದ ಸಿಇಓ ಆಗಿದ್ದರು.
2006ರಲ್ಲಿ ಇಂದ್ರಾ ನೂಯಿ ಅವರು ಪೆಪ್ಸಿಕೋ ಸಿಇಓ ಆದ ಬಳಿಕದಲ್ಲಿ ಕಂಪೆನಿಯ ಶೇರು ಮೌಲ್ಯ ಶೇ.78ರಷ್ಟು ಹೆಚ್ಚಿರುವುದು ಉಲ್ಲೇಖನೀಯವಾಗಿದೆ.