ಹೊಸದಿಲ್ಲಿ : ‘ಮಹಿಳೆಯರ ಕುರಿತಾದ ಪುರುಷರ ದೃಷ್ಟಿಕೋನ, ಮನೋಭಾವ ಬದಲಾಗಿಲ್ಲ’ ಎಂದು ದಿಲ್ಲಿ ಗ್ಯಾಂಗ್ ರೇಪ್ ಬಲಿಪಶು ನಿರ್ಭಯಾಳ ತಾಯಿ ಆಶಾ ದೇವಿ ಅವರು ಕರ್ನಾಟಕದ ಮಾಜಿ ಡಿಜಿಪಿ ಎಚ್ ಟಿ ಸಾಂಗ್ಲಿಯಾನಾ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
‘ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ನಾವು ಮಾಡುತ್ತಿರುವ ಹೋರಾಟವನ್ನು ಸಾಂಗ್ಲಿಯಾನಾ ಅವರು ಬೆಂಬಲಿಸಿ ಮಾತನಾಡಿದ್ದರೆ ಒಳ್ಳೆಯದಿತ್ತು. ಅದು ಬಿಟ್ಟು ಅವರು ಅನಪೇಕ್ಷಿತ ಮತ್ತು ಜುಗುಪ್ಸೆ ತರುವ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿರುವುದು ದುರದೃಷ್ಟಕರ’ ಎಂದು ಆಶಾ ದೇವಿ ಹೇಳಿದರು.
ಕರ್ನಾಟಕದ ಮಾಜಿ ಡಿಜಿಪಿ ಸಾಂಗ್ಲಿಯಾನಾ ಅವರು ನಿನ್ನೆ ಗುರುವಾರ “ನಿರ್ಭಯಾಳ ತಾಯಿಗೆ ಉತ್ತಮ ಅಂಗ ಸೌಷ್ಠವ ಇದೆ. ಹಾಗಿರುವಾಗ ನಿರ್ಭಯಾ ಎಷ್ಟು ಸುಂದರಿಯಾಗಿದ್ದಳು ಎನ್ನುವುದನ್ನು ನಾನು ಊಹಿಸಲಾರೆ. ಕಾಮಾಂಧ ಪುರುಷರು ದುರ್ಬಲ ಮಹಿಳೆಯರ ಮೇಲೆ ಎರಗಿದಾಗ, ತಮ್ಮನ್ನು ಅವರು ಕೊಲ್ಲುವುದನ್ನು ತಡೆಯಲು, ಅವರಿಗೆ (ಕಾಮಾಂಧ ಪುರುಷರಿಗೆ) ಶರಣಾಗುವುದೇ ಲೇಸು; ಅನಂತರದಲ್ಲಿ ಕೇಸು ಇತ್ಯಾದಿ ಕಾನೂನು ಕ್ರಮ ನಡೆಸಬಹುದು” ಎಂದು ಹೇಳಿದ್ದರು.
ತಮ್ಮ ಈ ಹೇಳಿಕೆ ವ್ಯಾಪಕ ಖಂಡನೆ, ಟೀಕೆಗೆ ಗುರಿಯಾದ ಹೊರತಾಗಿಯೂ ಸಾಂಗ್ಲಿಯಾನ ಅವರು ಇಂದು ಶುಕ್ರವಾರ ತಮ್ಮ ಮಾತಿಗೆ ಕ್ಷಮೆಯಾಚಿಸುವ ಬದಲು “ನನ್ನ ಹೇಳಿಕೆಯಲ್ಲಿ ವಿವಾದದ ವಿಷಯವೇ ಇಲ್ಲ” ಎಂದು ಹೇಳಿದರು.
“ನಾನು ಮಹಿಳೆಯರ ರಕ್ಷಣೆ, ಸುರಕ್ಷೆ ಭದ್ರತೆಗೆ ಮಹತ್ವಕ್ಕೆ ಒತ್ತು ನೀಡಿ ಮಾತನಾಡಿದ್ದೆ; ಮಹಿಳೆಯರಿಗೆ ಎಲ್ಲ ಕಾಲಕ್ಕೂ ರಕ್ಷಣೆ ನೀಡಬೇಕು ಎಂದು ನಾನು ಹೇಳಿದ್ದೆ ‘ ಎಂದು ಸಾಂಗ್ಲಿಯಾನ ಇಂದು ಹೇಳಿದರು.
2012ರ ಡಿಸೆಂಬರ್ 16ರ ರಾತ್ರಿ ದಿಲ್ಲಿಯಲ್ಲಿ ಚಲಿಸುವ ಬಸ್ಸಿನಲ್ಲಿ 23ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿಯನ್ನು (ನಿರ್ಭಯಾ) ಅಪ್ರಾಪ್ತ ವಯಸ್ಸಿನವನೂ ಸೇರಿ ಐವರು ಕಾಮಾಂಧರು ಪೈಶಾಚಿಕವಾಗಿ ಅತ್ಯಾಚಾರ ಮಾಡಿದ್ದರು. ಎಲ್ಲ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು ಮತ್ತು ಕೋರ್ಟ್ ಅವರಿಗೆ ಮರಣ ದಂಡನೆ ವಿಧಿಸಿತ್ತು.