ಪಣಜಿ:ಕಳೆದ ಎರಡು ದಿನಗಳಿಂದ ಗೋವಾದಲ್ಲಿ ಕೊಂಚ ವಿಶ್ರಾಂತಿ ಪಡೆದಿದ್ದ ಮಳೆ ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿರುವ ಘಟನೆ ಬುಧವಾರ (ಜುಲೈ 31) ನಡೆದಿದೆ.
ಗೋವಾದ ಸತ್ತರಿ ತಾಲೂಕಿನ ಹಲವೆಡೆ ಮನೆಗಳಿಗೆ ನದಿ ನೀರು ನುಗ್ಗಿದ್ದು ಜನರು ಪರದಾಡುವಂತಾಗಿದೆ. ಪ್ರಸಕ್ತ ವರ್ಷ ಜೂನ್ ತಿಂಗಳ ಆರಂಭದಲ್ಲಿ ಮಳೆಯಾಗದೇ ಇದ್ದರೂ ಕೂಡ ಜುಲೈ ಒಂದೇ ತಿಂಗಳಲ್ಲಿ ಸುರಿದ ಭಾರೀ ಮಳೆ ಈ ಹಿಂದಿನ ವರ್ಷಗಳ ದಾಖಲೆಯನ್ನೇ ಮುರಿದಿದೆ.
ಪ್ರಸಕ್ತ ವರ್ಷ ಗೋವಾದಲ್ಲಿ ಮಳೆ ಪ್ರಮಾಣ
ಜುಲೈ ತಿಂಗಳಲ್ಲಿ ಗೋವಾದಲ್ಲಿ ಒಟ್ಟು 78 ಮಿ.ಮೀ ಮಳೆ ದಾಖಲಾಗಿದ್ದು, ರಾಜ್ಯದಲ್ಲಿ ಹಂಗಾಮಿನ ಮಳೆ ಪ್ರಮಾಣ ಶೇ.50.6ರಷ್ಟು ಹೆಚ್ಚಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 116.24 ಇಂಚು ಮಳೆಯಾಗಿದ್ದು, 13 ವಿಭಾಗಗಳ ಪೈಕಿ 12 ಶತಕದ ಗಡಿ ದಾಟಿವೆ.
ವಾಲ್ಪೈನಲ್ಲಿ ಅತಿ ಹೆಚ್ಚು ಅಂದರೆ 144.64 ಇಂಚು ಮತ್ತು ದಾಬೋಲಿಯಲ್ಲಿ ಅತಿ ಕಡಿಮೆ 89.51 ಇಂಚು ಮಳೆಯಾಗಿದೆ. ಏತನ್ಮಧ್ಯೆ, ಜೂನ್ ತಿಂಗಳಲ್ಲಿ ರಾಜ್ಯದಲ್ಲಿ 38 ಮಿ.ಮೀ ಮಳೆ ದಾಖಲಾಗಿದೆ. 24 ಗಂಟೆಗಳಲ್ಲಿ ರಾಜ್ಯದಲ್ಲಿ 2.96 ಇಂಚು ಮಳೆ ದಾಖಲಾಗಿದೆ. ಸಾಂಗೇ, ಕೇಪೆ, ವಾಲ್ಪೈ, ಸಾಖಳಿ, ಫೋಂಡಾ, ಪೆಡ್ನೆ ಮತ್ತು ಮಾಗಾರಾಂವ್ ಪ್ರದೇಶಗಳಲ್ಲಿ ಭಾರೀ ಮಳೆ ದಾಖಲಾಗಿದೆ. ಪೆಡ್ನೆಯಲ್ಲಿ 24 ಗಂಟೆಗಳಲ್ಲಿ ಗರಿಷ್ಠ 5.64 ಇಂಚು ಮಳೆ ದಾಖಲಾಗಿದೆ.
ವಾಲ್ಪಾಯ್‍ನಲ್ಲಿ 5.25 ಇಂಚು, ಮಡಗಾಂವ್‍ನಲ್ಲಿ 3.74 ಇಂಚು, ಸಾಂಗೆಯಲ್ಲಿ 4.51 ಇಂಚು, ಕೇಪೆಯಲ್ಲಿ 3.95 ಇಂಚು, ಸಾಖಳಿಯಲ್ಲಿ 4.14 ಇಂಚು, ಫೋಂಡಾದಲ್ಲಿ 4.52 ಇಂಚು, ಮಾಪುಸಾದಲ್ಲಿ 2.19 ಇಂಚು. ಉತ್ತರ ಗೋವಾ ರಾಜ್ಯದಲ್ಲಿ ಇದುವರೆಗೆ ಅತಿ ಹೆಚ್ಚು ಮಳೆಯಾಗಿದೆ.
ಉತ್ತರ ಗೋವಾದಲ್ಲಿ ಇದುವರೆಗೆ ಒಟ್ಟು 121.20 ಇಂಚು ಮಳೆಯಾಗಿದ್ದು, ದಕ್ಷಿಣ ಗೋವಾದಲ್ಲಿ 111.87 ಇಂಚು ಮಳೆಯಾಗಿದೆ. ಜುಲೈ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಕೃಷಿ, ತೋಟಗಾರಿಕೆ ಕ್ಷೇತ್ರಗಳು ಸಾಕಷ್ಟು ನಷ್ಟ ಅನುಭವಿಸಿವೆ. ರಾಜ್ಯದಲ್ಲಿ ಹಲವೆಡೆ ಮನೆಗಳ ಮೇಲೆ ಮರಗಳು ಬಿದ್ದು ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ವರದಿ ತಿಳಿಸಿದೆ.