Advertisement

ಜನರ ಋಣ ತೀರಿಸಿ ರಾಮನಾಗುವೆ

04:03 PM Jan 22, 2018 | |

ಕೋಲಾರ: ಶ್ರದ್ಧೆಯಿಂದ ಜನರ ಋಣ ತೀರಿಸಲು ಆಸ್ಪತ್ರೆ, ನೀರು, ರಸ್ತೆ, ಶಾಲೆ ಒದಗಿಸುವ ಮೂಲಕ ರಾಮನಾಗುವ ಪ್ರಯತ್ನ ಮಾಡುತ್ತೇನೆ. ಆದರೆ, ಟೀಕೆ ಮಾಡಲು ರಾವಣರು ಇದ್ದೇ ಇರುತ್ತಾರೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ವಿರೋಧಿಗಳಿಗೆ ತಿರುಗೇಟು ನೀಡಿದರು.

Advertisement

ತಾಲೂಕಿನ ಮುದುವಾಡಿಯಲ್ಲಿ ಭಾನುವಾರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೆ.ಸಿ.ವ್ಯಾಲಿ ನೀರು ಹರಿಸುವ ಕುರಿತು, ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕುವ ಕಾನೂನು ಜಾರಿಗೆ ತಂದಾಗ ನನ್ನ ಬಗ್ಗೆ ಮನಬಂದಂತೆ ಮಾತನಾಡಿದವರಿಗೆ ಮುಂದಿನ 5 ವರ್ಷಗಳ ನಂತರ ಬುದ್ಧಿ ಬರುತ್ತದೆ ಎಂದರು.

ವಾನರಾಶಿಯ ಬಡ ವ್ಯಕ್ತಿಯೊಬ್ಬರು ಚಿಕಿತ್ಸೆ ಫ‌ಲಕಾರಿಯಾಗದೇ ಬೆಂಗಳೂರಿನ ಆಸ್ಪತ್ರೆಯೊಂದು ಹಣ ಪಾವತಿಸುವವರೆಗೂ ಹೆಣ ನೀಡದೇ ಅಮಾನವೀಯವಾಗಿ ವರ್ತಿಸಿದಾಗ ನನ್ನ ಕಣ್ಣಲ್ಲಿ ನೀರು ಬಂತು. ಮತ್ತೂಬ್ಬರ ದುಃಖ ನೋಡಿದಾಗ ಕಣ್ಣೀರು ಬಾರದಿದ್ದರೆ ನಾವು ಮನುಷ್ಯರಾಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಇಂತಹ ಘಟನೆ ನೋಡಿ ಜವಾಬ್ದಾರಿ ಸರ್ಕಾರವಾಗಿ ಕಾನೂನು ತಂದೆವು ಎಂದು ಸ್ಪಷ್ಟಪಡಿಸಿದರು.

ಕೆರೆಗಳಿಗೆ ನೀರು ಬರುವುದರಿಂದ ಪಾತಾಳ ತಲುಪಿದ ಅಂತರ್ಜಲ ಭರ್ತಿಯಾಗಿ ರೈತರು ನೆಮ್ಮದಿಯ ಬದುಕು ಸಾಗಿಸಲು ಅನುವಾದಾಗ ಟೀಕೆ ಮಾಡಿದವರಿಗೆ ತಪ್ಪಿನ ಅರಿವಾಗುತ್ತದೆ. ಬರದಿಂದ ಕೃಷಿ ಮಾಡಲಾಗದೇ ಬೆಂಗಳೂರಿನಲ್ಲಿ ಎಂಜಲು ಲೋಟ ತೊಳೆಯಲು ಹೋಗಿರುವ ನಮ್ಮ ಮಕ್ಕಳು ವಾಪಸ್‌ ಬರುತ್ತಾರೆ.

ಅಂತಹ ವಾತಾವರಣ ಕೆ.ಸಿ.ವ್ಯಾಲಿ ನೀರು ಬಂದರೆ ನಿರ್ಮಾಣವಾಗುತ್ತದೆ. ಆಗ ನನ್ನ ವಿರುದ್ಧದ ಟೀಕೆಗಳಿಗೆ ಉತ್ತರ ಸಿಗುತ್ತದೆ ಎಂದರು. ರಾಜಕಾರಣ ಚುನಾವಣೆಗೆ ಸಾಕು. ನಂತರ ಗೌರವದಿಂದ ಬದುಕೋಣ. ಮತ್ಸರ, ಗಲಾಟೆ ಬೇಡ. ಎಲ್ಲರೂ ಒಂದಾಗಿ ಕ್ಯಾನ್ಸರ್‌ನಂತಿರುವ ಭ್ರಷ್ಟಾಚಾರ ಅಳಿಸಿ ಹಾಕೋಣ ಎಂದರು.

Advertisement

ಒಂದು ವಾರದಲ್ಲಿ ಕಟ್ಟಡ ಮಂಜೂರು: ಮಾಡಿದ ಆಸ್ತಿ, ಬಂಗಲೆ, ಬಂಗಾರ ಜತೆಗೆ ಬರಲ್ಲ. ನಾವು ಮಾಡಿದ ಕೆಟ್ಟದ್ದು, ಒಳ್ಳೆಯದ್ದೇ ಉಳಿಯೋದು. ಮುದುವಾಡಿ ಗ್ರಾಮಸ್ಥರಾರೂ ಆಸ್ಪತ್ರೆ ಬೇಕೆಂದು ಅರ್ಜಿ ಹಾಕಿಲ್ಲ. ಜವಾಬ್ದಾರಿಯುತ ಪ್ರತಿನಿಧಿಯಾಗಿ ನಾನೇ ಪರಿಸ್ಥಿತಿ ಅರಿತು ಮಂಜೂರು ಮಾಡಿಸಿದ್ದೇನೆ. ಇದೀಗ ಹಳೆ ಕಟ್ಟಡದಲ್ಲೇ ಆಸ್ಪತ್ರೆ ನಡೆಯಲಿ. ಒಂದು ವಾರದೊಳಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರಾತಿ ಮಾಡುತ್ತೇನೆ ಎಂದರು.

ಮುದುವಾಡಿ ಸರ್ಕಾರಿ ಶಾಲೆ ಕಾನ್ವೆಂಟ್‌ಗೆ ಕಡಿಮೆ ಇಲ್ಲದಂತೆ ಇರಬೇಕೆಂದು ಇನ್ಫೋಸಿಸ್‌ನವರ ಕಾಲು ಹಿಡಿದು 50 ಲಕ್ಷ ರೂ.ವೆಚ್ಚದ ಕಟ್ಟಡ, ಪ್ರಯೋಗಾಲಯ ಮಾಡಿಸಿದ್ದೇನೆ. ಕಾಂಪೌಂಡ್‌, ಶೌಚಾಲಯ ಎಲ್ಲವೂ ಇದ್ದು,ಜವಾಬ್ದಾರಿ ಅರಿತು ಮಾಡಿಸಿದ್ದೇನೆ. ನಾನು ಕೆಲಸ ಮಾಡುವಾಗ ಲಾಭ ನೋಡಲ್ಲ. ಜನರಿಗೆ ಪ್ರಯೋಜನವಾಗಬೇಕು ಅಷ್ಟೆ. ಕೆರೆಗಳಲ್ಲಿನ ಜಾಲಿ,ನೀಲಗಿರಿ ನಾಶ ನನ್ನ ಗುರಿಯಾಗಿದೆ. ನನಗೆ ಸಮಯ ಸಾಕಾಗಲಿಲ್ಲ ಎಂದರು.

ಮುದುವಾಡಿ ಕೆರೆ ಪುನಶ್ಚೇತನಕ್ಕೆ ಟಾಟಾ ಸಂಸ್ಥೆ ಮುಂದೆ ಬಂತು.ಆದರೆ ಮಳೆ ಬಂದು ಕೆರೆಗೆ ನೀರು ಬಂದಿದ್ದರಿಂದ ಅವರು ವಾಪಸ್ಸಾದರು. ಮತ ಹಾಕಿದವರು ಕೇಳದಿದ್ದರೂ ಅವರ ಮನಸ್ಸನ್ನು ಅರಿತು ಒಂದಿಷ್ಟು ಕೆಲಸ ಮಾಡುವ ಮನೋಭಾವ ನನ್ನದು ಎಂದರು.

ತಾಯಂದಿರ ಋಣ ತೀರಿಸಲು ಶೂನ್ಯ ಬಡ್ಡಿಸಾಲ ಕೊಡಿಸಿದ್ದೇನೆ. ನಾನು ಬ್ಯಾಂಕ್‌ ಸಾಲ ಮಾಡಿ ಕಟ್ಟಲಾಗದೇ ನನ್ನ ಗದ್ದೆ ಮಾರಿ ಪಾವತಿಸಿದ ನೋವು ನನಗಿದೆ. ನನ್ನ ತೋಟದಲ್ಲಿ ಬರದಿಂದ ನೀರಿಲ್ಲದೇ 450 ಮಾವಿನ ಮರ ಉರುಳಿಬಿದ್ದವು. ಇದೆಲ್ಲಾ ಅರಿತಿದ್ದೇನೆ. ಆದ್ದರಿಂದಲೇ ಕೆ.ಸಿ.ವ್ಯಾಲಿ ತರುವ ಸಂಕಲ್ಪ$ ಮಾಡಿದೆ ಎಂದರು.

ತಾಯಂದಿರಿಗೆ ಸಾಲ ನೀಡುವಾಗ ಜಾತಿ,ಪಕ್ಷ ಕೇಳಿಲ್ಲ, ಮನೆ ನೀಡುವಾಗ ಕೇಳಿಲ್ಲ, ಮಾಜಿ  ಶಾಸಕ ವೆಂಕಟಶಿವಾರೆಡ್ಡಿ ಇದನ್ನು ಅರಿಯಬೇಕು. ಬಾಂಡ್‌ ಬರೆಸಿಕೊಂಡರೆ ಮತ ಹಾಕಲ್ಲ. ಮನಸ್ಸಿನ ಒಳಗಿಂದ ಬರಬೇಕು. ನಾನು ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಕೋಚಿಮುಲ್‌ ಅಧ್ಯಕ್ಷ ಎನ್‌.ಜಿ.ಬ್ಯಾಟಪ್ಪ, ಜಿಪಂ ಸದಸ್ಯೆ ಪದ್ಮಾವತಮ್ಮ ಶ್ರೀನಿವಾಸಯ್ಯ, ತಾಪಂ ಸದಸ್ಯ ಮುರಳೀಧರ್‌, ಗ್ರಾಪಂ ಅಧ್ಯಕ್ಷೆ ರಾಜಮ್ಮ,ಉಪಾಧ್ಯಕ್ಷೆ ರತ್ನಮ್ಮ ವೆಂಕಟರೆಡ್ಡಿ, ಡಿಎಚ್‌ಒ ವಿಜಯಕುಮಾರ್‌,

ಟಿಎಚ್‌ಒ ಲತಾ ಪ್ರಮೀಳಾ, ಮುದುವಾಡಿ ವಿ.ಮಂಜುನಾಥ್‌, ಶ್ರೀನಿವಾಸಪುರ ಪುರಸಭೆ ಅಧ್ಯಕ್ಷ ಮುಕ್ತಿಯಾರ್‌ ಅಹಮದ್‌, ಆಲೇರಿ ಬಾಬು, ಆರೋಗ್ಯಾಧಿಕಾರಿ ಡಾ.ಪ್ರವೀಣ್‌, ಪಿಡಿಒ ಮಂಜುನಾಥ್‌ ಮತ್ತಿತರರು ಉಪಸ್ಥಿತರಿದ್ದರು.  ಕಮಲಾಕ್ಷಿ,ಕಾವೇರಿ ಪ್ರಾರ್ಥಿಸಿ, ಬಾಲಕೃಷ್ಣ ಭಾಗವತಾರ್‌ ಸ್ವಾಗತಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next