ಚಿತ್ರದುರ್ಗ: ಜಾತ್ಯತೀತ ಹಾಗೂ ಪಕ್ಷಾತೀತವಾಗಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿದರೆ ಎಲ್ಲರೂ ನಮ್ಮನ್ನು ಪ್ರಾಮಾಣಿಕವಾಗಿ ಸ್ವೀಕರಿಸುತ್ತಾರೆ ಎಂದು ಶಿವಮೊಗ್ಗ ವೃತ್ತದ ಅಧಿಧೀಕ್ಷಕ ಎಂಜಿನಿಯರ್ ಕೆ.ಜಿ. ಜಗದೀಶ್ ಹೇಳಿದರು.
ರಾಜ್ಯ ಸರ್ಕಾರಿ ಎಸ್‌ಸಿ-ಎಸ್‌ಟಿ ನೌಕರರ ಸಮನ್ವಯ ಸಮಿತಿ ಬೆಂಗಳೂರು ಹಾಗೂ ಚಿತ್ರದುರ್ಗ ಜಿಲ್ಲಾ ಶಾಖೆಯಿಂದ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಸಂಘಟನೆಗೆ ನಾಯಕತ್ವದ ಗುಣ ಮುಖ್ಯ ಎಂದರು. ಮೇಲಾಧಿಕಾರಿ, ಡಿ. ದರ್ಜೆಯ ನೌಕರ ಎಂದು ವಿಂಗಡಿಸುವ ಬದಲು ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸಿದವರು ನಾಯಕರಾಗುತ್ತಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸರ್ಕಾರಿ ನೌಕರರು ನನ್ನನ್ನು ನಾಲ್ಕು ಬಾರಿ ಆಯ್ಕೆ ಮಾಡಿದ್ದಾರೆ. 19 ವರ್ಷಗಳ ಕಾಲ ನೌಕರರ ಸಮಸ್ಯೆಗಳಿಗೆ ಹೋರಾಟ ಮಾಡಿದ್ದೇನೆ ಎಂದು ಸ್ಮರಿಸಿದರು.
ರಾಜ್ಯ ಸರ್ಕಾರಿ ಎಸ್‌ಸಿ-ಎಸ್‌ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಮಾತನಾಡಿ, ಏಪ್ರಿಲ್ ತಿಂಗಳಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆ ಹಾಗೂ ಶಾಖೆಗಳ ಪುನಾರಚನೆ, ಜುಲೈ ತಿಂಗಳಲ್ಲಿ 4ನೇ ಸಮಾವೇಶ ನಡೆಸಬೇಕಿದೆ. ಮಹಿಳಾ ಸಮಿತಿ ಕ್ರಿಯಾಶೀಲವಾಗಿಲ್ಲ. 17 ವರ್ಷದಿಂದ ಸಂಘಟನೆ ಅಸ್ತಿತ್ವದಲ್ಲಿದೆ. ಈ ಹಿನ್ನೆಲೆಯಲ್ಲಿ ಸ್ಮರಣ ಸಂಚಿಕೆ, ಅಭಿನಂದನಾ ಗ್ರಂಥಗಳನ್ನು ಹೊರತರಬೇಕಾಗಿದೆ. ಆದ್ದರಿಂದ ಎಲ್ಲ ಜಿಲ್ಲೆಗಳಲ್ಲೂ ಸಂಘಟನೆ ಚುರುಕಾಗಬೇಕಿದೆ ಎಂದು ತಿಳಿಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಎಸ್‌ಸಿ-ಎಸ್‌ಟಿ ಎನ್ನುವ ಕೀಳರಿಮೆ ಬಿಟ್ಟು ನಾಯಕತ್ವದ ಗುಣ ಬೆಳೆಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿವೆ. ಸಂವಿಧಾನದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ನೀಡಿರುವ ಸೌಲಭ್ಯಗಳನ್ನು ಬಳಸಿಕೊಂಡು ಪ್ರತಿಯೊಬ್ಬರೂ ಈ ಸಮಾಜಕ್ಕೆ ಅಂಬೇಡ್ಕರ್ ಆಗಬೇಕು ಎಂದರು.
ಸರ್ಕಾರಿ ನೌಕರರು ತಮ್ಮ ಸಂಪಾದನೆಯಲ್ಲಿ ಶೇ.10 ರಷ್ಟನ್ನಾದರೂ ಸಮಾಜಕ್ಕೆ ವಿನಿಯೋಗಿಸಬೇಕು ಎಂದು ಸಲಹೆ ನೀಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್, ಎಸ್‌ಸಿ-ಎಸ್‌ಟಿ ನೌಕರ ಸಂಘದ ಗೌರವಾಧ್ಯಕ್ಷ ಕೆ. ಪರಶುರಾಂ ಗೊರಪ್ಪರ್, ಜಿಲ್ಲಾಧ್ಯಕ್ಷ ಆರ್. ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಟಿ. ಗಂಗಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಕೋಶಾಧ್ಯಕ್ಷ ಡಿ. ಜಗದೀಶ್ ಮತ್ತಿತರರು ಇದ್ದರು.