ಕುಂಬಳೆ: ಮೊಗ್ರಾಲ್ ಪುತ್ತೂರು ಪಂಚಾಯತ್‌ನ ಕಂಬಾರಿಗೆ ಮತ್ತು ಪುತ್ತಿಗೆ ಪಂಚಾಯತ್‌ನ ಪೇರಾಲು ಕಣ್ಣೂರಿಗೆ ಸಂಪರ್ಕ ಕಲ್ಪಿಸುವ ಕಂಗಿನ ತಾತ್ಕಾಲಿಕ ಸೇತುವೆಯೊಂದನ್ನು ಚಂದ್ರಗಿರಿ ಹೊಳೆಗೆ ಊರವರು ನಿರ್ಮಿಸಿದ್ದಾರೆ. ಪೇರಾಲು ಕಣ್ಣೂರು ಮಸೀದಿಯಲ್ಲಿ ಜರಗುವ ಸೀದಿ ವಲಿಯುಲ್ಲಾ ಮಖಾಂ ಉರೂಸ್ ಮತ್ತು ಬೆದ್ರಡ್ಕ ಪೂಮಾಣಿ ಕಿನ್ನಿಮಾಣಿ ಕ್ಷೇತ್ರದ ಜಾತ್ರೆಗೆ ಸಂಪರ್ಕ ಕಲ್ಪಿಸಲು ನಿರ್ಮಿಸಿದ ಸುಮಾರು 50 ಮೀಟರ್ ಉದ್ದದ ಪರಸ್ಪರ ಸ್ನೇಹ ಸಾಮರಸ್ಯ ಸಾರುವ ಸಂಪರ್ಕ ಸೇತುವೆ ಇದಾಗಿದೆ.
ಹೊಳೆಯ ಉಭಯ ಕಡೆಗಳಲ್ಲೂ ಕರಾವಳಿ ಪ್ರದೇಳಗಳಿಗೆ ರಸ್ತೆ ಇದ್ದರೂ ಹೊಳೆಗೆ ಮಾತ್ರ ಸೇತುವೆ ನಿರ್ಮಿಸದೆ ಈ ಸ್ಥಳ ದ್ವೀಪವಾಗಿ ಉಳಿದು ಸ್ಥಳೀಯರು ಸುತ್ತು ಬಳಸಿ ಪೇಟೆಗೆ ಪ್ರಯಾಣ ಬೆಳೆಸಬೇಕಾಗಿದೆ.ವಿದ್ಯಾರ್ಥಿಗಳು ಮಹಿಳೆಯರು ಸಂಕಷ್ಟ ಅನುಭವಿಸಬೇಕಾಗಿದೆ.
ಹೊಳೆಗೆ ಶಾಶ್ವತ ಸೇತುವೆ ನಿಮಾಣವಾದಲ್ಲಿ ಕೇವಲ 1 ಕಿ.ಮೀ.ಮೂಲಕ ಪರಸಪರ ಸಂಪರ್ಕ ಸಾಧಿಸಬಹುದಾಗಿದ್ದು, ಪ್ರಕೃತ ಉಳಿಯತ್ತಡ್ಕ ದಾರಿಯಾಗಿ ಸುಮಾರು 12 ಕೀ.ಮೀ. ದೂರ ಕ್ರಮಿಸಬೇಕಾಗಿದೆ.ಸ್ಥಳೀಯರ ಹಲವಾರು ವರ್ಷಗಳ ಕಾಲದ ಬೇಡಿಕೆಯಾಗಿದ್ದ ಸೇತುವೆ ನಿರ್ಮಾಣಕ್ಕಾಗಿ ಜನಪ್ರತಿನಿಧಿಗಳ ಪೊಳ್ಳು ಭರವಸೆಯನ್ನು ಕಾದು ಬೇಸತ್ತ ಜನರು ಇದೀಗ ಹಿಂದೂ ಮುಸ್ಲಿಂ ಉಭಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ¤ರಿಗೆ ಭಾಗವಹಿಸಲೋಸುಗ ಈ ಕಂಗಿನ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿ ಚುನಾಯಿತರಿಗೆ ಸವಾಲೆಸೆದಿರುವರು. ಈ ಪ್ರದೇಶದಲ್ಲಿ ನೂತನ ಸೇತುವೆಯೊಂದನ್ನು ನಿರ್ಮಿಸಬೇಕೆಂಬುದಾಗಿ ಊರವರು ಹಲವು ಬಾರಿ ಚುನಾಯಿತ ದೊರೆಗಳಿಗೆ ಮೊರೆಹೋಗಿದ್ದರೂ ಪ್ರಯೋಜನವಾಗಿಲ್ಲವೆಂಬ ಆರೋಪ ಇವರದು. ಇದೀಗ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸುವ ಮೂಲಕ ಸಮಸ್ಯೆಯ ಗಮನಸೆಳೆದಿದ್ದಾರೆ. ಮುಂದೆ ಏನಾಗುವುದೋ ಕಾದು ನೋಡಬೇಕಾಗಿದೆ.