ಹುಣಸೂರು: ಸುಡಾನ್‌ನಲ್ಲಿ ಸೈನಿಕ ದಂಗೆಯಿಂದ ಕರ್ನಾಟಕದ 800 ಮಂದಿ ಸೇರಿದಂತೆ ಮೈಸೂರು ಜಿಲ್ಲೆಯ ಹುಣಸೂರು ಮತ್ತು ಎಚ್.ಡಿ.ಕೋಟೆ ತಾಲೂಕಿನ ಸುಮಾರು 80ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಸಮುದಾಯದ ಮಂದಿ ಆಹಾರಕ್ಕೂ ಹಪಾಹಪಿ ಉಂಟಾಗಿದ್ದು, ಜೀವ ಉಳಿಸಿಕೊಂಡು ತಾಯ್ನಾಡಿಗೆ ಮರಳುವುದು ಹೇಗೆಂಬ ಆತಂಕದಲ್ಲಿದ್ದು, ಸರಕಾರ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಸುಡಾನ್‌ಗೆ ಕಳೆದ ಮೂರ್‍ನಾಲ್ಕು ತಿಂಗಳ ಹಿಂದೆ ಇಲ್ಲಿನ ಹಕ್ಕಿಪಿಕ್ಕಿ ಸಮುದಾಯದವರು ತಾವೇ ತಯಾರಿಸುವ ಕೇಶ ತೈಲ ಮಾರಾಟ, ಮಸಾಜ್ ಮಾಡಲು ತೆರಳಿದ್ದರು.
ಸುಡಾನ್‌ನ ಅಲ್ಲಲ್ಲಿ ಬಾಡಿಗೆ ಮನೆ, ಲಾಡ್ಜ್ ಗಳನ್ನು ಗುರುತು ಮಾಡಿಕೊಂಡು ವಾಸಿಸುತ್ತಿದ್ದರು. ಈ ನಡುವೆ ಮಿಲಿಟರಿ ಹಾಗೂ ಅರೆ ಸೇನಾಪಡೆಗಳ ನಡುವೆ ದಂಗೆ ಎದ್ದಿದ್ದು, ಇಡೀ ಸುಡಾನ್ ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದು, ವಿಮಾನ ನಿಲ್ದಾಣವನ್ನು ಧ್ವಂಸ ಮಾಡಲಾದ್ದು, ಸತತ ಗುಂಡಿನ ಮೊರೆತ ಕೇಳುತ್ತಿದೆ. ಮನೆಯಿಂದ ಹೊರಬರಲಾಗದೆ ಊಟ-ತಿಂಡಿ, ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಪರಿತಪಿಸುತ್ತಿದ್ದಾರೆ. ಸುಡಾನ್ ನಲ್ಲಿರುವ ಹಕ್ಕಿಪಿಕ್ಕಿ ಸಮುದಾಯದ ಮಂದಿ ಪಕ್ಷಿರಾಜಪುರದ ಕುಟುಂಬದವರೊಂದಿಗೆ ವಿಡಿಯೂ ಕಾಲ್ ಮಾಡಿ ಮಾತನಾಡಿ ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ.
ಸುಡಾನ್‌ನಲ್ಲಿ ಕರೆಂಟ್ ಕಟ್ಟಾಗಿದೆ. ಅಂಗಡಿಗೆ ಹೋಗಿ ಆಹಾರ ಸಾಮಗ್ರಿಗಳನ್ನು ತರಲು ಸಾಧ್ಯವಾಗುತ್ತಿಲ್ಲ. ಎಲ್ಲೆಂದರಲ್ಲಿ ಮಿಲಿಟರಿ ವಾಹನಗಳು ಸೈರನ್ ಹಾಕಿಕೊಂಡು ಸಂಚರಿಸುತ್ತಿವೆ. ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಅಲ್ಲಿನ ದೇಶದವರು ಬೇರೆಕಡೆಗೆ ವಲಸೆ ಹೋಗುತ್ತಿದ್ದಾರೆ. ಊರ ಲ್ಲಿರುವ ಮಕ್ಕಳು, ಹೆತ್ತವರನ್ನು ನೆನೆದು ಕಣ್ಣಾಲಿಗಳಲ್ಲಿ ನೀರು ಹರಿಯುತ್ತಿದ್ದು, ನಾವು ಯಾವಾಗ ಗುಂಡಿನ ದಾಳಿಗೆ ಸಿಲುಕಿ ಸಾಯುತ್ತೇವೋ ಎಂಬ ಆತಂಕದ ಲ್ಲಿದ್ದೇವೆ. ಕರೆಂಟ್ ಸಹ ಇಲ್ಲದೆ ನಮ್ಮ ಮೊಬೆ„ಲ್‌ಗಳಲ್ಲಿ ಚಾರ್ಚ್ ಇಲ್ಲದೆ ಸ್ವಿಚ್ ಆಫ್ ಆಗುತ್ತಿವೆ.
ಮೊಬೈಲ್ ಮೂಲಕ ಗ್ರೂಪ್ ರಚಿಸಿಕೊಂಡು ಅಲ್ಲಿನ ಪರಿಸ್ಥಿತಿ ಕುರಿತು ಮಾಹಿತಿಯನ್ನು ತಾಯ್ನಾಡಿನಲ್ಲಿರುವ ಮಕ್ಕಳು, ಹಿರಿಯರಿಗೆ ರವಾನಿಸುತ್ತಿದ್ದಾರೆ. ಮಕ್ಕಳು ಆತಂಕ ದಲ್ಲಿದ್ದೀವಿ, ಶಿವಮೊಗ್ಗ, ಕೇರಳ,ಬೆಂಗಳೂರು, ದಾವಣ ಗೆರೆ ಮತ್ತು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಒಂದನೇ ಪಕ್ಷಿರಾಜಪುರ, ಎರಡನೇ ಪಕ್ಷಿರಾಜಪುರ, ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್‌ನಿಂದ ಸುಮಾರು 80ಕ್ಕೂ ಹೆಚ್ಚು ಮಂದಿ ಸುಡಾನ್‌ಗೆ ಹೋಗಿ ದ್ದು, ಕುಟುಂಬದವರಿಗೆ ಮಾಹಿತಿ ಪಡೆಯಲು ಯಾರನ್ನು ಸಂಪರ್ಕಿಸಬೇಕೆಂಬುದೇ ತಿಳಿಯದ ಪರಿಸ್ಥಿತಿ ಇದೆ.
ಬಾಂಬ್ ಸೌಂಡ್ ಮೊರೆಯುತ್ತಿದೆ: ಐರಾಜ್
ಈ ಬಗ್ಗೆ ಉದಯವಾಣಿ ಜತೆ ಒಂದನೇ ಪಕ್ಷಿರಾಜಪುರ ನಿವಾಸಿ ಐರಾಜ್ ಮಾತನಾಡಿ, ದಿನದ 24 ಗಂಟೆಯೂ ಬಾಂಬ್ ಸೌಂಡಿನಲ್ಲೇ ಆತಂಕದಿಂದ ಜೀವ ಕೈಯಲ್ಲಿ ಹಿಡಿದು ಲಾಡ್ಜ್ನಲ್ಲಿ ಆಶ್ರಯ ಪಡೆದಿದ್ದೇವೆ. ಇಲ್ಲಿ ನೀರು, ಕರೆಂಟ್ ಇಲ್ಲ. ಯುದ್ಧ ಆರಂಭವಾದಾಗಿನಿಂದ ಊಟ ತಯಾರಿಸಲು ಸಾಮಗ್ರಿಗಳನ್ನು ಖರೀದಿಸಲು ಅಂಗಡಿಗಳು ಬಂದ್ ಆಗಿವೆ. ಮೊಬೈಲ್ ಚಾರ್ಜ್ ಆಗುತ್ತಿಲ್ಲ. ಎಲ್ಲಿಗೆ ಹೋಗಬೇಕೆಂಬುದು ತೋಚದಾಗಿದೆ. ನಾವು ಜೀವಂತವಾಗಿ ಬರುತ್ತೇವೋ ಎಂಬ ಸಣ್ಣ ಆಸೆಯೂ ಉಳಿದಿಲ್ಲ. ಯುದ್ಧ ಯಾವಾಗ ಮುಗಿಯುವುದೋ ಎಂದು ಕಾಯುತ್ತಿದ್ದೇವೆ. ವಿಮಾನ ನಿಲ್ದಾಣವನ್ನೇ ಬ್ಲಾಸ್ಟ್ ಮಾಡಿದ್ದಾರೆ. ಇಲ್ಲಿನ ರಾಯಭಾರ ಕಚೇರಿ ಸ್ಪಂದಿಸುತ್ತಿಲ್ಲ. ಭಾರತ ಸರಕಾರ ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.