Advertisement

ನಾವು ಇಂದು ವಿಷವರ್ತುಲದಲ್ಲಿ ಸಿಲುಕಿದ್ದೇವೆ : ಸ್ಪೀಕರ್ ಕಾಗೇರಿ

02:55 PM Jan 29, 2022 | Team Udayavani |

ಬೆಂಗಳೂರು : ನಾವು ಇಂದು ವಿಷವರ್ತುಲದಲ್ಲಿ ಸಿಲುಕಿದ್ದು, ಚುನಾವಣಾ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಚರ್ಚಿಸಬೇಕಾದ ಅಗತ್ಯವಿದೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ಸಾಮೂಹಿಕವಾದ ಸಂವಾದ, ಚರ್ಚೆಯನ್ನ ಆರಂಭಿಸಬೇಕು. ಚುನಾವಣಾ ಆಯೋಗ ತನ್ನ ಜವಾಬ್ದಾರಿಯನ್ನು ಹೆಚ್ಚಸಿಕೊಳ್ಳಬೇಕು. ಯಾಂತ್ರಿಕವಾಗಿ ಚುನಾವಣೆ ನಡೆಸುವುದಕ್ಕಷ್ಟೇ ಸೀಮಿತವಾಗಬಾರದು. ಅಗತ್ಯ ಸಾಧಾರಣೆ ತರಲು ಸ್ವಯಂಪ್ರೇರಿತವಾಗಿ ಮುಂದಾಗಬೇಕು. ಮತದಾನದ ನೋಂದಣಿ,‌ ಮತದಾನಕ್ಕಷ್ಟೇ ಸೀಮಿತರಾಗಬಾರದು.ಆಯೋಗ ಇನ್ನಷ್ಟು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕಿದೆ ಎಂಬ ಸಲಹೆ ನೀಡಿದ್ದಾರೆ.

ಎಲ್ಲರೂ ಮೂಕ ಪ್ರೇಕ್ಷಕರಾದರೆ ? 

ವ್ಯವಸ್ಥೆಯನ್ನು ಸುಧಾರಿಸದಿದ್ದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ. ಯುವ ಸಮುದಾಯ ವ್ಯವಸ್ಥೆಯ ಕಾವಲುಗಾರರಾಗಿ ನಿಲ್ಲಬೇಕು, ಇನ್ನಷ್ಟು ಜವಾಬ್ದಾರಿಯಾಗಿ ಯೋಚಿಸಬೇಕು ಭಾಗಿಯಾಗಬೇಕು. ಎಲ್ಲರೂ ಮೂಕ ಪ್ರೇಕ್ಷಕರಾದರೆ ಯಾರಿಂದ ವ್ಯವಸ್ಥೆ ಬದಲಾವಣೆಯನ್ನು ಬಯಸುವುದು ? ಎಂದು ಪ್ರಶ್ನಿಸಿದ್ದಾರೆ.

ಸಂವಿಧಾನ ನಮಗೆ ಎಲ್ಲಾ ಅವಕಾಶಗಳನ್ನು ಕೊಟ್ಟಿದ್ದು, ವಾಕ್, ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು ಇದೆ. ಕೇವಲ ರಾಜಕೀಯ ಪಕ್ಷಗಳತ್ತ ಬೊಟ್ಟು ಮಾಡುವುದನ್ನ ಬಿಟ್ಟು ಎಲ್ಲರೂ ಭಾಗಿಯಾಗಬೇಕು. ವ್ಯವಸ್ಥೆಯನ್ನ ಕಲುಷಿತಗೊಳಿಸಬಾರದೆಂದು ರಾಜಕೀಯ ಪಕ್ಷಗಳಿಗೆ ವಿನಂತಿಸಿಕೊಳ್ಳುತ್ತೇನೆ. ಎಲ್ಲಾ ಪಕ್ಷಗಳು ಜವಾಬ್ದಾರಿಯನ್ನ ಅರಿತು ಕೆಲಸ ಮಾಡಬೇಕಿದೆ ಎಂದರು.

Advertisement

ಸುಧಾರಣೆ ತರುವ ಅಗತ್ಯ

ಸಂಸದೀಯ ವ್ಯವಸ್ಥೆ ದಿನದಿಂದ ದಿನಕ್ಕೆ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದು, ಸಂವಿಧಾನದ ಆಶಯಗಳಿಗೆ ಶಕ್ತಿ ಕೊಡಬೇಕಿದೆ. ಚುನಾವಣಾ ಆಯೋಗಕ್ಕೆ ಸಂವಿಧಾನ ಬದ್ಧವಾದ ಜವಾಬ್ದಾರಿ ಕೊಡಲಾಗಿದೆ. ಅದರ ಅಡಿಯಲ್ಲಿ ಚುನಾವಣೆ ನಡೆಸಬೇಕಿರುವುದು ಆಯೋಗದ ಕರ್ತವ್ಯ. ಸರ್ಕಾರದ ನೀತಿ, ನಿರೂಪಣೆಯನ್ನ ನಿರ್ವಹಿಸುವುದು ಚುನಾವಣಾ ಆಯೋಗದ ಕೆಲಸ ಎಂದರು.

ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯವಿದೆ. ಹದಿನೇಳು ಲೋಕಸಭಾ ಚುನಾವಣೆಗಳನ್ನ ನೋಡಿದ್ದೇವೆ. ನಮ್ಮ ರಾಜ್ಯದಲ್ಲಿ ಹದಿನೈದು ವಿಧಾನಸಭಾ ಚುನಾವಣೆ ನೋಡಿದ್ದೇವೆ. ಇತ್ತೀಚೆಗೆ ನಡೆದ ಪರಿಷತ್ ಚುನಾವಣೆ ನಮ್ಮ ಕಣ್ಣ ಮುಂದೆ ಇದೆ. ಜನರು ಇದನ್ನ ತುಂಬಾ ಕೂಲಂಕಷವಾಗಿ ಗಮನಿಸಿದ್ದಾರೆ. ಮುಂದೆ ಬೇರೆ ಬೇರೆ ಚುನಾವಣೆಗಳೂ ಎದುರಾಗಲಿದ್ದು, ಜಾತಿ, ಹಣ, ತೋಳು, ಪಕ್ಷಾಂತರ ಪಿಡುಗಿನ ಬಲದಿಂದ ಚುನಾವಣೆಗಳು ನಡೆಯುತ್ತಿವೆ. ಚುನಾವಣಾ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಭಾಗಿಯಾಗಿರುವವರು, ಈ ವ್ಯವಸ್ಥೆಯಲ್ಲಿ ಸುಧಾರಣೆ ಅತ್ಯಗತ್ಯ ಎನ್ನುವುದು ಎಲ್ಲಾ ವಲಯಗಳಲ್ಲೂ ಮೂಡಿರುವ ಅಭಿಪ್ರಾಯ ಎಂದರು.

ಒಂದು ರಾಷ್ಟ್ರ ಒಂದು ಚುನಾವಣೆ ಕಾರಣಕ್ಕೆ ಈ ವಿಚಾರವನ್ನ ಪ್ರಸ್ತಾಪಿಸುತ್ತಿಲ್ಲ. ಚುನಾವಣಾ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಬೇಕಿದೆ. ಪರಿಷತ್ ಚುನಾವಣೆ ನೋಡಿದರೆ ಜನರಲ್ಲಿ ಬೇರೆಯದ್ದೇ ಭಾವನೆ ಮೂಡುತ್ತಿದೆ ಆದರೆ, ಆಯ್ಕೆಯಾಗಿರುವವರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುತ್ತಾರೆಂಬ ವಿಶ್ವಾಸ ಇದೆ ಎಂದರು.

ಜನಪರಗೊಳಿಸುವ ಪ್ರಯತ್ನ

ಸಭಾಧ್ಯಕ್ಷನಾಗಿ ಎರಡೂವರೆ ವರ್ಷದ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆಗೆ ಶಕ್ತಿ ಕೊಡುವ ಪ್ರಯತ್ನ ಮಾಡಿದ್ದೇನೆ. ನಮ್ಮ‌ ಸಂವಿಧಾನ ನಮ್ಮ ಹೆಮ್ಮೆ ಎಂಬ ವಿಷಯದ ಬಗ್ಗೆ ಸದನದಲ್ಲಿ ಚರ್ಚಿಸಿದ್ದೇವೆ. ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆಗೆ ಪ್ರಯತ್ನ ನಡೆದಿರುವುದು ಎಲ್ಲರಿಗೂ ಗೊತ್ತಿದೆ. ಪ್ರತ್ಯಕ್ಷ, ಪರೋಕ್ಷವಾಗಿ ಈ ವ್ಯವಸ್ಥೆಯನ್ನ ಜನಪರಗೊಳಿಸುವ ಪ್ರಯತ್ನಿಸಿದ್ದೇನೆ. ದೇಶ, ವಿದೇಶಗಳ ಅನೇಕ ವೇದಿಕೆಗಳಲ್ಲಿ ಹಲವು ವಿಚಾರಗಳನ್ನ ಚರ್ಚಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next